ಸಂತ್ರಸ್ತರ ಜಿಲ್ಲೆಗೂ ಬರಲಿ ಕೈಗಾರಿಕೆ

bkt-16-2
ಬಾಗಲಕೋಟೆ ನಗರದ ಪ್ರೆಸ್‌ಕ್ಲಬ್‌ನಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜಿ.ನಂಜಯ್ಯನಮಠ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ನಾಗರಾಜ ಹದ್ಲಿ, ಶ್ರೀನಿವಾಸ ಬಳ್ಳಾರಿ, ರಾಜು ಮನ್ನಿಕೇರಿ ಇದ್ದರು.
Published on

ಬಾಗಲಕೋಟೆ: ಇನ್ವೇಸ್ಟ್ ಕರ್ನಾಟಕ ಮೂಲಕ ಸರ್ಕಾರವು ಕೈಗಾರಿಕೆ ಸ್ಥಾಪನೆ ಮೂಲಕ ಉದ್ಯೋಗ ಸೃಷ್ಟಿಗೆ ಮುಂದಾಗಿದೆ. ಮುಳಗಡೆಯಾಗಿರುವ ಬಾಗಲಕೋಟೆ ಜಿಲ್ಲೆಗೂ ಔದ್ಯೋಗಿಕರಣ ಹೊಸ ಯುಗ ಆರಂಭವಾಗಬೇಕು. ಇದಕ್ಕೆ ಉದ್ಯಮಗಳು ನಮ್ಮ ಭಾಗದತ್ತ ಧಾಪುಗಾಲು ಇಡಲು ಸರ್ಕಾರ ವಿಶೇಷ ಆದ್ಯತೆ ನೀಡಬೇಕು ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜಿ.ನಂಜಯ್ಯನಮಠ ಹೇಳಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ೧೧ ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆ ಆಗಿದೆ. ಈ ಹಿಂದೆ ನೀರಾವರಿ ಸಚಿವರಾಗಿದ್ದ ಮಾಡಿದ ಕೆಲಸದಂತೆ ಈ ಸಾರಿಯು ಎಂ.ಬಿ.ಪಾಟೀಲ ಅವರು ವಿಜಯಪುರ, ಬಾಗಲಕೋಟೆ ಜಿಲ್ಲೆಗಳಲ್ಲಿ ಕೈಗಾರಿಕೆ ಸ್ಥಾಪನೆ ಮಾಡಲು ಆದ್ಯತೆ ಮಾಡಬೇಕು. ದಿಟ್ಟ ಹೆಜ್ಜೆ ಇಡಬೇಕು ಎಂದರು.

ಇದನ್ನು ಸಚಿವ ಎಂ.ಬಿ.ಪಾಟೀಲ ಸಮರ್ಥವಾಗಿ ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ತಮ್ಮದೆ ಆದ ಯೋಜನೆ ರೂಪಿಸಬೇಕು. ಅಂತಹ ಸಾಮರ್ಥ್ಯ ಅವರಲ್ಲಿದೆ. ವಿಜಯಪುರ ಬಾಗಲಕೋಟೆ ಮಧ್ಯೆ ಸಾಕಷ್ಟು ಬರಡು ಭೂಮಿ ಇದ್ದು ಅಂತಹ ಪ್ರದೇಶದಲ್ಲಿ ಕೈಗಾರಿಕೆ ಸ್ಥಾಪನೆ ಆಗಬೇಕು. ಆ ಮೂಲಕ ನಿರುದ್ಯೋಗ ನಿವಾರಣೆಯಾಗಬೇಕು ಎಂದು ಹೇಳಿದರು.

ಬಾಗಲಕೋಟೆ ಮುಳುಗಡೆ ಪ್ರದೇಶ ಎಂಬ ಹಣೆಪಟ್ಟಿ ಕಟ್ಟಿಕೊಂಡಿದೆ. ಅದನ್ನು ಕಳಚುವ ನಿಟ್ಟಿನಲ್ಲಿ ಬಲವಾದ ಪ್ರಯತ್ನ ಬೇಕಿದೆ. ಕೋಲ್ಡ್ ಸ್ಟೋರೇಜ್ ಘಟಕ ಸೇರಿದಂತೆ ಸಣ್ಣ ಉದ್ದಿಮೆಗಳಿಂದ ಹಿಡಿದು ದೊಡ್ಡ ದೊಡ್ಡ ಉದ್ಯಮಗಳು ಇಲ್ಲಿ ಸ್ಥಾಪನೆ ಆಗಬೇಕು. ಉದ್ಯಮ ಸ್ಥಾಪನೆಗೆ ಉದ್ದಿಮೆದಾರರು ಹಿಂದೇಟು ಹಾಕುತ್ತಿರುವುದು ಕಂಡು ಬಂದಿದ್ದು, ಅವರಿಗೆ ಸರ್ಕಾರ ಕೆಲ ರಿಯಾಯಿತಿ ಘೋಷಣೆ ಮಾಡಿ ಆಕರ್ಷಣೆ ಮಾಡಬೇಕು. ಆ ಮೂಲಕ ಉತ್ತರ ಕರ್ನಾಟಕ ಭಾಗದಲ್ಲಿ ನಿರುದ್ಯೋಗ ನಿವಾರಣೆಯಾಗುತ್ತದೆ. ಔದ್ಯೋಗೀಕರಣ ಬೆಳೆದಾಗ ಸಹಜವಾಗಿ ಆರ್ಥಿಕ ಸ್ಥಿತಿಗತಿ ಸುಧಾರಿಸುತ್ತದೆ ಎಂದರು.

ಜಿಲ್ಲೆಯ ಮಟ್ಟಿಗೆ ಕೃಷ್ಣಾ ಮೇಲ್ದಂಡೆ ಯೋಜನೆ ಜ್ವಲಂತ ಸಮಸ್ಯೆಯಾಗಿದ್ದು, ಸರ್ಕಾರ ಬಜೆಟ್‌ನಲ್ಲಿ ಸೂಕ್ತ ಅನುದಾನ ಒದಗಿಸುವ ಮೂಲಕ ಸಮಸ್ಯೆ ನಿವಾರಣೆಗೆ ಮುಂದಾಗಬೇಕು. ಬಜೆಟ್‌ನಲ್ಲಿ ಘೋಷಣೆ ಮಾಡಿರುವ ಸರ್ಕಾರಿ ಮೆಡಿಕಲ್ ಕಾಲೇಜು, ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾದ ಯೋಜನೆಗಳು ಅನುಷ್ಠಾನಕ್ಕೆ ಬರಬೇಕು. ಜನತೆಗೆ ಕೊಟ್ಟ ಮಾತು ಉಳಿಸಿಕೊಳ್ಳುವಲ್ಲಿ ಬಜೆಟ್‌ನಲ್ಲಿ ಘೋಷಿಸಿದ ಅಂಶಗಳು ಮುಂದಿನ ಬಜೆಟ್ ಒಳಗಾಗಿ ಜಾರಿಯಾಗಬೇಕು. ಆ ನಿಟ್ಟಿನಲ್ಲಿ ಸಿಎಂ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಾಗುವುದು ತಿಳಿಸಿದರು.

ಮುಖಂಡರಾದ ಕಾಂಗ್ರೆಸ್ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಅಧ್ಯಕ್ಷ ನಾಗರಾಜ ಹದ್ಲಿ, ಮುಖಂಡರಾದ ಶ್ರೀನಿವಾಸ ಬಳ್ಳಾರಿ, ರಾಜು ಮನ್ನಿಕೇರಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net