ಸಂತ್ರಸ್ತ ಮಕ್ಕಳ ಪಾಲಕರ, ಒಡನಾಡಿ ಸಂಸ್ಥೆ ವಿರುದ್ಧ ದೂರು ದಾಖಲಿಸಿರುವುದನ್ನು ಖಂಡಿಸಿ ಮೈಸೂರಿನಲ್ಲಿ ಪ್ರತಿಭಟನೆ

16
Published on

ಮೈಸೂರು: ಮುರುಘಾ ಶರಣರ ಪ್ರಕರಣದ ಸಂತ್ರಸ್ತ ಮಕ್ಕಳ ಪಾಲಕರು ಮತ್ತು ಪ್ರಕರಣ ಬೆಳಕಿಗೆ ತಂದ ಒಡನಾಡಿ ಸಂಸ್ಥೆ ವಿರುದ್ಧ ದೂರು ದಾಖಲಿಸಿರುವ ಕ್ರಮವನ್ನು ಖಂಡಿಸಿ ವಿವಿಧ ಸಂಘಟನೆಗಳ ವತಿಯಿಂದ ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಯಿತು.

ನ್ಯಾಯಾಲಯ ಮುಂಭಾಗದಲ್ಲಿರುವ ಮಹಾತ್ಮಗಾಂಧಿ ಪುತ್ಥಳಿ ಎದುರು ಜಮಾವಣೆಗೊಂಡ ಪ್ರತಿಭಟನಾಕಾರರು, ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಸಂತ್ರಸ್ತ ಪಾಲಕರ ಕಾನೂನು ಹೋರಾಟವನ್ನು ಬೆಂಬಲಿಸಿ ದೇಣಿಗೆ ಸಂಗ್ರಹಿಸಲಾಯಿತು. ಬಳಿಕ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.

ದೌರ್ಜನ್ಯಕ್ಕೊಳಗಾದ ಬಾಲಕಿಯರು ನಗರದ ಮಕ್ಕಳ ಕಲ್ಯಾಣ ಸಮಿತಿ ಮೂಲಕ ಕೊಟ್ಟ ದೂರಿನಿಂದ ಮುರುಘಾ ಶ್ರೀಗಳು ಬಂಧನವಾಗಿದ್ದಾರೆ. ಮಕ್ಕಳ ಪಾಲಕರನ್ನು ಮತ್ತು ಈ ಪ್ರಕರಣವನ್ನು ಬೆಳಕಿಗೆ ಬರಲು ಶ್ರಮಿಸಿದ ಒಡನಾಡಿ ಸಂಸ್ಥೆ ವಿರುದ್ಧ ಮೊಕದ್ದಮೆ ದಾಖಲಿಸಿದ್ದು, ಇದು ಪೊಲೀಸರ ಕರ್ತವ್ಯ ಮತ್ತು ವೃತ್ತಿ ಘನತೆಯನ್ನು ಅನುಮಾನಿಸಿದೆ ಎಂದು ಕಿಡಿಕಾರಿದರು.

ಚಿಂತಕ ಪ.ಮಲ್ಲೇಶ್ ಮಾತನಾಡಿ, ಮೌಲ್ಯ ಬೋಧಿಸುವ ವ್ಯಕ್ತಿಗಳೇ ಊಹಿಸಲು ಅಸಾಧ್ಯವಾದ ಅನ್ಯಾಯ ಮಾಡಿದ್ದಾರೆ ಎಂದರು. ಮಾಜಿ ಮೇಯರ್ ಪುರುಷೋತ್ತಮ್, ಒಡನಾಡಿಯ ಸ್ಟ್ಯಾನ್ಲಿ, ಪ್ರೊ.ಸಬಿಹಾ ಭೂಮಿಗೌಡ, ಪ್ರೊ.ಪಿ.ಎನ್.ಶ್ರೀದೇವಿ, ಪ್ರೊ.ವನಜಾ, ಪ್ರೊ.ರತಿರಾವ್, ಸಿ.ಬಸವಲಿಂಗಯ್ಯ, ಚೋರನಹಳ್ಳಿ ಶಿವಣ್ಣ, ಎನ್.ಪುನೀತ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net