

ಚಿಂತಾಮಣಿ: ಹಣದಿಂದ ಅಮೃತತ್ವ ಸಿಗುವುದಿಲ್ಲ. ಆತ್ಮಾನಂದದಿಂದ ಮಾತ್ರ ಅಮೃತತ್ವ ಪಡೆಯಲು ಸಾಧ್ಯ ಎಂದು ಯಡತೊರೆ ಯೋಗನಂದೀಶ್ವರ ಸರಸ್ವತಿ ಮಠದ ಪೀಠಾಧ್ಯಕ್ಷ ಶಂಕರ ಭಾರತಿ ಸ್ವಾಮೀಜಿ ಅಭಿಪ್ರಾಯಪಟ್ಟರು.
ಕೈವಾರದ ಯೋಗಿನಾರೇಯಣ ಮಠದಲ್ಲಿ ಭಾನುವಾರ ಆಯೋಜಿಸಿದ್ದ ‘ಇಂದಿನ ಸಮಾಜಕ್ಕೆ ಆತ್ಮಚಿಂತನೆಯ ಅವಶ್ಯಕತೆ ’ಎಂಬ ಚಿಂತನಾ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದರು. ಪ್ರಾಪಂಚಿಕ ವ್ಯಾಮೋಹದಲ್ಲಿ, ನಮ್ಮೊಳಗೆ ಸದಾಕಾಲ ಪರಂಜ್ಯೋತಿ ಸ್ವರೂಪನಾಗಿ ಬೆಳಗುತ್ತಿರುವ ಆತ್ಮವನ್ನು ಗುರುತಿಸುವಲ್ಲಿ ವಿಫಲರಾಗುತ್ತಿದ್ದೇವೆ. ನಮ್ಮೊಳಗಿರುವ ಆನಂದವನ್ನು ಮರೆತು ಬಾಹ್ಯ ಆನಂದ ಹುಡುಕುವ ಪ್ರಯತ್ನ ಮಾಡುತ್ತಿದ್ದೇವೆ. ಬಾಹ್ಯದಲ್ಲಿ ಆನಂದ ಹುಡುಕುತ್ತಾ ಜೀವನ ವ್ಯರ್ಥ ಮಾಡಿಕೊಳ್ಳಬೇಡಿ. ಜೀವನವು ಸದಾಕಾಲ ಸಂತೋಷಮಯವಾಗಬೇಕಾದರೆ ಆತ್ಮಚಿಂತನೆಯ ಅಗತ್ಯವಿದೆ ಎಂದರು.
ಕೈವಾರ ಕ್ಷೇತ್ರದ ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಮ್ ಮಾತನಾಡಿ, ಪ್ರತಿಯೊಬ್ಬರ ಜೀವನದಲ್ಲಿ ಗುರು ಮಹತ್ವದ ಪಾತ್ರ ವಹಿಸುತ್ತಾರೆ. ಶಿಷ್ಯನು ಅನುಭವಿಯಾದ ಗುರುವಿಗೆ ಸಂಪೂರ್ಣವಾಗಿ ಸಮರ್ಪಿಸಿಕೊಳ್ಳಬೇಕು. ಗುರು ನೀಡಿದ ಉಪದೇಶವನ್ನು ಹೃದಯದಲ್ಲಿ ನಂಬಿ ಸ್ವೀಕರಿಸಬೇಕು. ಮಾನವನ ಜೀವನ ನೀರಿನ ಮೇಲೆ ಗುಳ್ಳೆ ಇದ್ದಂತೆ. ಹಣ, ಐಶ್ವರ್ಯ, ಅಂತಸ್ತು, ಅಧಿಕಾರ ಯಾವುದೂ ಶಾಶ್ವತವಲ್ಲ. ಇದರಿಂದ ಎಷ್ಟು ಸಾಧ್ಯವೋ ಅಷ್ಟು ದೂರವಿರಬೇಕು ಎಂದು ತಿಳಿಸಿದರು.
ಅಧ್ಯಾತ್ಮ ಚಿಂತಕ ಡಾ.ಬಾಬುಕೃಷ್ಣಮೂರ್ತಿ, ಹಿರಿಯ ವಕೀಲ ಹಾಗೂ ಯಡತೊರೆ ಮಠದ ಸದಸ್ಯ ನಾಗಾನಂದ್,ಕೈವಾರ ಮಠ ಟ್ರಸ್ಟ್‌ನ ಉಪಾಧ್ಯಕ್ಷ ಜೆ.ವಿಭಾಕರರೆಡ್ಡಿ, ಖಜಾಂಚಿ ಆರ್.ಪಿ.ಎಂ.ಸತ್ಯನಾರಾಯಣ, ಸದಸ್ಯರಾದ ಬಾಗೇಪಲ್ಲಿ ಕೆ.ನರಸಿಂಹಪ್ಪ, ಗಣೇಶ್ ಚಂದ್ರಪ್ಪ, ಕೆ.ಎಂ. ತ್ಯಾಗ ರಾಜ್ ಮತ್ತಿತರರು ಇದ್ದರು.