ಸಂತೇಬೆನ್ನೂರಿನಲ್ಲಿ ಸಾಹಿತ್ಯ ಸಮ್ಮೇಳನ ಜ. 8ಕ್ಕೆ

CHN Madhukumar
Published on

ಚನ್ನಗಿರಿ: ತಾಲೂಕಿನ ಸಂತೇಬೆನ್ನೂರಿನ ಕರ್ನಾಟಕ ಪಬ್ಲಿಕ್ ಶಾಲೆ ಆವರಣದಲ್ಲಿ ಜ. 8ರಂದು 17ನೇ ಕನ್ನಡ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ಕಸಾಪ ತಾಲೂಕು ಅಧ್ಯಕ್ಷ ಎಲ್.ಜಿ.ಮಧುಕುಮಾರ್ ತಿಳಿಸಿದರು.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರವೇಶ ದ್ವಾರಕ್ಕೆ ಕೆಂಗ ಹನುಮಪ್ಪನಾಯಕ ಮಹಾದ್ವಾರ, ವೇದಿಕೆಗೆ ದಿ. ಜಿ.ಸಿದ್ದಲಿಂಗಪ್ಪ ಗೌಡ್ರು ಮಹಾವೇದಿಕೆ ಎಂದು ನಾಮಕರಣ ಮಾಡಲಾಗಿದೆ ಎಂದರು.

ಅಂದು ಬೆಳಗ್ಗೆ 7.30ಕ್ಕೆ ಗ್ರಾಪಂ ಅಧ್ಯಕ್ಷೆ ರೇಣುಕಾ ಮೂರ್ತಪ್ಪ ರಾಷ್ಟ್ರ, ಕಸಾಪ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ ನಾಡ, ಕಸಾಪ ತಾಲೂಕು ಅಧ್ಯಕ್ಷರು ಪರಿಷತ್ತಿನ ಧ್ವಜಾರೋಹಣ ನೆರವೇರಿಸುವರು. ಗ್ರಾಪಂ ಉಪಾಧ್ಯಕ್ಷೆ ಮೀನಾಕ್ಷಮ್ಮ ಕರಿಯಪ್ಪ, ಸದಸ್ಯರೆಲ್ಲ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಕೆ.ಸಿದ್ದಲಿಂಗಪ್ಪ ಸಂತೇಬೆನ್ನೂರು ಸಮ್ಮೇಳನಾಧ್ಯಕ್ಷರಾಗಿದ್ದು, 8.30ಕ್ಕೆ ಮೆರವಣಿಗೆ ನಡೆಯಲಿದೆ. ಪುಷ್ಕರಣಿಯಿಂದ ಆರಂಭವಾಗಿ ಕೋಟೆ ರಸ್ತೆ, ಅಗಳೇರಿ ಬೀದಿ, ಬಾಡ ರಸ್ತೆ, ಪುನೀತ್ ರಾಜ್‌ಕುಮಾರ್ ವೃತ್ತ ಮಾರ್ಗವಾಗಿ ಸಂಚರಿಸಿ, ವೇದಿಕೆ ತಲುಪಲಿದೆ. ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಚಾಲನೆ ನೀಡುವರು. ಅತಿಥಿಗಳಾಗಿ ತಹಸೀಲ್ದಾರ್ ಜಿ.ಎಸ್.ಶಂಕರಪ್ಪ, ಡಿವೈಎಸ್‌ಪಿ ಸ್ಯಾಮ್ ವರ್ಗಿಸ್, ತಾಪಂ ಇಒ ಬಿ.ಕೆ.ಉತ್ತಮ್, ಬಿಇಒ ಎಲ್.ಜಯಪ್ಪ ಪಾಲ್ಗೊಳ್ಳಲಿದ್ದಾರೆ ಎಂದರು.

ಬೆಳಗ್ಗೆ 11ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಸಮ್ಮೇಳನ ಉದ್ಘಾಟಿಸುವರು. ಪಾಂಡೋಮಟ್ಟಿ ವಿರಕ್ತ ಮಠದ ಡಾ.ಗುರುಬಸವ ಶ್ರೀ ಸಾನ್ನಿಧ್ಯ, ಶಾಸಕ ಬಸವರಾಜ್ ಶಿವಗಂಗಾ ಅಧ್ಯಕ್ಷತೆ ವಹಿಸುವರು. ಧ್ವಜ ಹಸ್ತಾಂತರ ನಿಕಟಪೂರ್ವ ಅಧ್ಯಕ್ಷ ಡಾ.ಬಿ.ವಿ.ವಸಂತಕುಮಾರ್, ಸಮ್ಮೇಳನಾಧ್ಯಕ್ಷರ ಪರಿಚಯ ಕೆ.ಸಿರಾಜ್ ಅಹ್ಮದ್, ಪ್ರಧಾನ ಭಾಷಣ ಚಿಂತಕ ಡಾ.ದಾದಾಪೀರ್ ನವಿಲೇಹಾಳ್ ಮಾಡಲಿದ್ದಾರೆ ಎಂದು ತಿಳಿಸಿದರು.

ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ, ಎಂಎಲ್ಸಿ ಡಾ.ಧನಂಜಯ ಸರ್ಜಿ, ಡಿ.ಎಸ್.ಅರುಣ್, ಎಸ್.ಎಲ್.ಬೋಜೆಗೌಡ, ಮಾಜಿ ಶಾಸಕರಾದ ವಡ್ನಾಳ್ ರಾಜಣ್ಣ, ಮಾಡಾಳು ವಿರೂಪಾಕ್ಷಪ್ಪ, ಮಹಿಮಾ ಜೆ.ಪಟೇಲ್, ಜಾನಪದ ಕಲಾವಿದ ರಾಮಣ್ಣ, ಜನಪದ ತಜ್ಞ ಎಸ್.ಟಿ.ಶಾಂತಗಂಗಾಧರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಮಧ್ಯಾಹ್ನ 2ಕ್ಕೆ ವಿಚಾರಗೋಷ್ಠಿ, 3ಕ್ಕೆ ಕವಿಗೋಷ್ಠಿ, ಸಂಜೆ 5ಕ್ಕೆ ಸನ್ಮಾನ ಮತ್ತು ಸಮಾರೋಪ ಸಮಾರಂಭ ನಡೆಯಲಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net