

ಕೆ.ಆರ್.ಪೇಟೆ : ನಾನು ಸನ್ಯಾಸತ್ವ ತೆಗೆದುಕೊಳ್ಳಲು ತೀರ್ಮಾನ ಮಾಡಿದ್ದು ಸಂತೇಬಾಚಹಳ್ಳಿಯ ಗಣೇಶೋತ್ಸವದಲ್ಲಿ ಎಂದು ವಿಶ್ವ ಒಕ್ಕಲಿಗರ ಮಠದ ಪೀಠಾಧ್ಯಕ್ಷ ಶ್ರೀ ನಿಶ್ಚಲಾನಂದ ಸ್ವಾಮೀಜಿ ಸ್ಮರಿಸಿದರು.
ತಾಲೂಕಿನ ಸಂತೇಬಾಚಹಳ್ಳಿಯಲ್ಲಿ ಬಿ.ಶಿವಪ್ಪ ನೇತೃತ್ವದಲ್ಲಿ ಗೆಳೆಯರ ಬಳಗ ಯುವಕರ ಸಂಘದ ವತಿಯಿಂದ ಆಯೋಜಿಸಿದ್ದ 67ನೇ ವರ್ಷದ ಗಣೇಶೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
2010ರಲ್ಲಿ ಇದೇ ಗಣೇಶೋತ್ಸವದಲ್ಲಿ ನಾನು ತಹಸೀಲ್ದಾರ್‌ಆಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ಆ ಕಾರ್ಯಕ್ರಮದಲ್ಲಿ ನನ್ನ ಗುರುಗಳಾದ ಶ್ರೀ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ಭಾಗವಹಿಸಿದ್ದರು. ನಾನು ಪಕ್ಕದಲ್ಲಿ ಕುಳಿತ್ತಿದ್ದೆ. ಆಗ ಅವರು ನನ್ನ ಮಠಕ್ಕೆ ಒಬ್ಬ ಗುರು ಬೇಕು ಎಂದು ಹೇಳಿದರು. ತಕ್ಷಣ ನಾನು ಬರುವುದಾಗಿ ಹೇಳಿದ್ದನ್ನು ಸ್ಮರಿಸಿದರು.
ಕಾಕತಾಳೀಯ ಎಂಬಂತೆ ನಾನು ಇಂದು ದೀಕ್ಷೆ ಪಡೆದು ಎಲ್ಲರ ಸೇವೆ ಮಾಡಲು ಅವಕಾಶ ಸಿಕ್ಕಿದೆ. ಎಲ್ಲರೂ ಅಭಿವೃದ್ಧಿಯತ್ತ ಸಾಗಬೇಕು. ಇಲ್ಲಿನ ಹಳ್ಳಿಗಳು ಮಳೆಯಾಶ್ರಿತ ಪ್ರದೇಶವಾಗಿದ್ದು ಹೆಚ್ಚು ಉದ್ಯೋಗ ಸೃಷ್ಟಿಗೆ ಎಲ್ಲರೂ ಚಿಂತಿಸಬೇಕಿದೆ ಎಂದು ಸಲಹೆ ನೀಡಿದರು.
ಶಾಸಕ ಎಚ್.ಟಿ.ಮಂಜು, ಶ್ರೀ ಗಂಗಾಧರ ಶಿವಾಚಾರ್ಯ ಸ್ವಾಮೀಜಿ, ಸಮಾಜ ಸೇವಕ ಮಲ್ಲಿಕಾರ್ಜುನ್, ಮನ್ಮುಲ್ ನಿರ್ದೇಶಕ ಡಾಲು ರವಿ, ಬೆಂಗಳೂರು ದಕ್ಷಿಣ ಉಪ ವಿಭಾಗಾಧಿಕಾರಿ ವಿಶ್ವನಾಥ್, ಗ್ರಾ.ಪಂ.ಅಧ್ಯಕ್ಷೆ ಅನುರಾಧಾ, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಿ. ಮೋಹನ್, ಮುಖಂಡರಾದ ಜಾನಕಿರಾಮು ಇತರರು ಇದ್ದರು.
ಶಾಸಕ-ಬಿಜೆಪಿ ಮುಖಂಡನ ನಡುವೆ ವಾಗ್ವಾದ : ಕಾರ್ಯಕ್ರಮ ಮುಗಿಯುವ ಹಂತಕ್ಕೆ ತಲುಪಿತ್ತು. ಬಿಜೆಪಿ ಮುಖಂಡ, ತಾಪಂ ಮಾಜಿ ಸದಸ್ಯ ದಿನೇಶ್ ಮಾತನಾಡಿ, ತಾಲೂಕಿನಲ್ಲಿ ರಸ್ತೆಗಳೆಲ್ಲ ಗುಂಡಿಬಿದ್ದು ಭಾರಿ ಸಮಸ್ಯೆಯಾಗಿದೆ. ಸದನದಲ್ಲಿ ಚರ್ಚೆ ಮಾಡದೆ ಕಾಲಹರಣ ಮಾಡುತ್ತಿದ್ದಾರೆ. ಬಡವರ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು. ಉತ್ತಮ ಆಸ್ಪತ್ರೆ ಕಟ್ಟಿಸಬೇಕು. ರಾಜಕಾರಣಿಗಳು ಅದಕ್ಕಾಗಿ ಯಾರೂ ಹೋರಾಟ ಮಾಡುತ್ತಿಲ್ಲ ಎಂದು ಶಾಸಕರಿಗೆ ಪರೋಕ್ಷವಾಗಿ ಟೀಕಿಸಿದರು.
ಇದರಿಂದ ಕುಪಿತಗೊಂಡ ಶಾಸಕ ಎಚ್.ಟಿ.ಮಂಜು ಪ್ರತಿಕ್ರಿಯಿಸಿ, ನಾನು ಸದನದಲ್ಲಿ ಚರ್ಚೆ ಮಾಡಿರುವುದು ಕಡತದಲ್ಲಿ ಸಿಗುತ್ತದೆ. ಆಕಾಶಕ್ಕೆ ಮುಖ ಮಾಡಿ ಉಗಿದರೆ ಮುಖಕ್ಕೆ ಬೀಳುತ್ತದೆ ಎಂಬುದು ತಿಳಿದಿರಲಿ. ನಾನು ಹಣ ಮಾಡಲು ಬಂದಿಲ್ಲ, ಜನರ ಸೇವೆ ಮಾಡಲು ಶಾಸಕನಾಗಿದ್ದೇನೆ ಎಂದು ತಿರುಗೇಟು ನೀಡಿದರು.
ಇಲ್ಲಿನ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಲಾಗಿದೆ. ಕೆಪಿಎಸ್ ಶಾಲೆಗೆ ಅನುಮೋದನೆ ಕೊಡಿಸಿದ್ದೇನೆ. ಹಳ್ಳಿಗಳ ರಸ್ತೆ ಅಭಿವೃದ್ಧಿಗೆ ಹಣ ನೀಡಿ ಕೆಲಸ ಮಾಡುತ್ತಿದ್ದೇನೆ. ಏತ ನೀರಾವರಿ ಕಾಮಗಾರಿ ಶೀಘ್ರದಲ್ಲಿ ಪೂರ್ಣಗೊಳ್ಳಲಿದೆ. ಸಚಿವರು ಹಾಗೂ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ಮಾಡಿದ್ದೇನೆ. ಪ್ರತಿಪಕ್ಷದಲ್ಲಿದ್ದರೂ ಅನುದಾನ ತಂದು ಉತ್ತಮ ಕೆಲಸ ಮಾಡಿದ್ದೇನೆ ಎಂದರು.
ಇದರಿಂದ ವೇದಿಕೆಯಲ್ಲಿ ಇಬ್ಬರ ನಡುವೆ ಮಾತಿನ ಚಕಮಕಿಗೆ ಕಾರಣವಾಯಿತು. ಇಬ್ಬರನ್ನು ಕೆಂಗೇರಿ ವಿಶ್ವ ಒಕ್ಕಲಿಗ ಮಠದ ಪೀಠಾಧ್ಯಕ್ಷ ಶ್ರೀ ನಿಶ್ಚಲಾನಂದ ಸ್ವಾಮೀಜಿ ಹಾಗೂ ಶ್ರೀ ಗಂಗಾಧರ ಶಿವಾಚಾರ್ಯ ಸ್ವಾಮೀಜಿ ಸಮಾಧಾನಪಡಿಸಿದರು.