ಸಂತೆ ಸುಂಕ ಎತ್ತುವಳಿ ಟೆಂಡರ್ ದಿನಾಂಕ ನಿಗದಿ

06Kush03
Published on

ಕುಶಾಲನಗರ: ಕೂಡುಮಂಗಳೂರು ಗ್ರಾ.ಪಂ ಅಧ್ಯಕ್ಷೆ ಇಂದಿರಾ ರಮೇಶ್ ಅವರ ಅಧ್ಯಕ್ಷತೆಯಲ್ಲಿ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಮಾಸಿಕ ಸಭೆಯಲ್ಲಿ, ಕೂಡುಮಂಗಳೂರು ಗ್ರಾ.ಪಂ ನ 2023-24ನೇ ಸಾಲಿನ ಆಯವ್ಯಯನ್ನು ಮಂಡಿಸಲಾಯಿತು.


2023-24ನೇ ಸಾಲಿನ ಆಯವ್ಯಯವನ್ನು ಪಿಡಿಒ ಸಂತೋಷ್ ಅವರು ಸಾಮಾನ್ಯ ಸಭೆಯಲ್ಲಿ ಮಂಡಿಸಿ, ಅನುಮೋದನೆ ಪಡೆಯಲಾಯಿತು. ಸಭೆಯ ಪ್ರಾರಂಭದಲ್ಲಿ ಎಂದಿನಂತೆ ಹಿಂದಿನ ತಿಂಗಳ ಜಮಾ-ಖರ್ಚು ಹಾಗೂ ನಡಾವಳಿ ಅನುಮೋದಿಸಲಾಯಿತು.


ಬೇಸಿಗೆ ಪ್ರಾರಂಭವಾದ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯುಂಟಾಗಬಹುದು. ಆದ್ದರಿಂದ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸದಸ್ಯ ಕೆ.ಬಿ.ಶಂಶುದ್ಧೀನ್ ಆಗ್ರಹಿಸಿದರು. ಜಲ್ ಜೀವನ್ ಮಿಷನ್ ಯೋಜನೆಯು ಪ್ರಾರಂಭವಾಗಿ ವರ್ಷಗಳು ಕಳೆದಿದೆ. ಕಾಮಗಾರಿ ಅಪೂರ್ಣವಾಗಿದೆ. ಆದಷ್ಟು ಬೇಗನೇ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಕೆ.ಬಿ.ಶಂಶುದ್ಧೀನ್ ಅವರು ಒತ್ತಾಯಿಸಿದರು. ಇದಕ್ಕೆ ಚೈತ್ರಾ, ಕುಮಾರ್, ಗಿರೀಶ್ ಹಾಗೂ ಇತರರು ಧ್ವನಿಗೂಡಿಸಿದರು. ಜೆಜೆಎಂ ಬಗ್ಗೆ ಪ್ರತಿಕ್ರಿಯಿಸಿದ ಪಿಡಿಓ ಸಂತೋಷ್, ಚೆಸ್ಕಾಂ ನ ತಾಂತ್ರಿಕ ಸಮಸ್ಯೆಯಿಂದ ಕಾಮಗಾರಿ ಪೂರ್ಣಗೊಂಡಿಲ್ಲ. ಆದಷ್ಟು ಬೇಗನೇ ಪೂರ್ಣಗೊಳಿಸಲಾಗುವುದು ಎಂದು ಉತ್ತರಿಸಿದರು.


ವಿಜಯನಗರದಲ್ಲಿ ಜೆಜೆಎಂ ನಿಂದಾಗಿ ನೀರು ಪೋಲಾಗುತ್ತಿದ್ದು, ಕೂಡಲೇ ಸರಿಪಡಿಸುವಂತೆ ಸದಸ್ಯ ಗಿರೀಶ್ ಪ್ರಸ್ತಾಪಿಸಿದರು. ಪ್ರತೀ ಸಭೆಯಲ್ಲಿ ಜೆಜೆಎಂ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇದೆ. ಆದರೆ ಕಾಮಗಾರಿ ಪೂರ್ಣಗೊಳ್ಳುವ ಸೂಚನೆ ಕಾಣುತ್ತಿಲ್ಲ. ಆದ್ದರಿಂದ ಸಂಬಂಧಪಟ್ಟವರ ಗಮನಕ್ಕೆ ತಂದು, ಬೇಗನೇ ಕಾಮಗಾರಿ ಪೂರ್ಣಗೊಳಿಸುವ ಕೆಲಸಕ್ಕೆ ಮುಂದಾಗಬೇಕಾಗಿದೆ ಎಂದು ಸದಸ್ಯ ಕೆ.ಬಿ.ಶಂಶುದ್ಧೀನ್ ಆಗ್ರಹಿಸಿದರು.


ಕೂಡುಮಂಗಳೂರು ಗ್ರಾ.ಪಂ.ನ ಸಂತೆ ಸುಂಕ ಎತ್ತುವಳಿ ಹಕ್ಕಿಗಾಗಿ ಟೆಂಡರ್ ಕರೆಯಲು ದಿನಾಂಕ ನಿಗದಿ ಮಾಡುವ ಬಗ್ಗೆ ಚರ್ಚೆ ನಡೆಯಿತು. ವಿಧಾನಸಭಾ ಚುನಾವಣಾ ಹಿನ್ನೆಲೆಯಲ್ಲಿ ನೀತಿಸಂಹಿತೆ ಜಾರಿಯಾಗುವ ಕಾರಣದಿಂದ ಇದೇ ತಿಂಗಳು 16ರ ಗುರುವಾರದಂದು ಟೆಂಡರ್ ಕರೆಯುವ ಬಗ್ಗೆ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು. ಸುಪ್ರೀಂ ಕೋರ್ಟ್ ಆದೇಶ ಹಿನ್ನೆಲೆಯಲ್ಲಿ ಕೋಳಿ, ಆಡು, ಮೀನು ಮಾಂಸದ ಮಳಿಗೆಗೆ ನೇರವಾಗಿ ಪರವಾನಗಿ ನೀಡಲಾಗುವುದು. ಪರವಾನಗಿ ಪಡೆಯಲು ಮಿತಿ ಇರುವುದಿಲ್ಲ ಎಂದು ಪಿಡಿಒ ಸಂತೋಷ್ ಸಭೆಗೆ ಮಾಹಿತಿ ನೀಡಿದರು.
ಪಂಚಾಯಿತಿ ವ್ಯಾಪ್ತಿಯಲ್ಲಿ ವಾರ್ಡ್ ಸ್ವಚ್ಛತೆ ಕಾರ್ಯ ಸಮರ್ಪಕವಾಗಿ ಆಗುತ್ತಿಲ್ಲ. ಇದನ್ನು ಹಲವು ಸಭೆಗಳಲ್ಲಿ ಪ್ರಸ್ತಾಪಿಸಲಾಗಿದೆ. ಈ ಬಗ್ಗೆ ಸಬೂಬು ಹೇಳದೆ ಕೂಡಲೇ ಕ್ರಮ ಕೈಗೊಂಡು, ಊರಿನ ಸ್ವಚ್ಛತೆಗೆ ಕೈಜೋಡಿಸುವಂತೆ ಕೆ.ಬಿ.ಶಂಶುದ್ಧೀನ್ ಒತ್ತಾಯಿಸಿದರು. ಇದಕ್ಕೆ ಉಳಿದ ಸದಸ್ಯರು ಧ್ವನಿಗೂಡಿಸಿದರು. ಪೌರಕಾರ್ಮಿಕರ ಕೆಲಸಕ್ಕೆ ಯಾರೂ ಮುಂದಾಗುತ್ತಿಲ್ಲ. ಮೂವರನ್ನು ಕೆಲಸಕ್ಕೆ ತೆಗೆದುಕೊಳ್ಳಲು ಅವಕಾಶವಿದೆ ಎಂದು ಸಭೆಗೆ ಮಾಹಿತಿ ನೀಡಿದರು.


ಪಂಚಾಯಿತಿ ಸಿಬ್ಬಂದಿ ರಂಗ ಅವರಿಗೆ 1 ಲಕ್ಷ ರೂ. ಹಾಗೂ ಶಂಕರ ಅವರಿಗೆ 1.2 ಲಕ್ಷ ಗೌರವ ಉಪಧನ ನೀಡಲು ಒಮ್ಮತದಿಂದ ತೀರ್ಮಾನ ಕೈಗೊಳ್ಳಲಾಯಿತು. ಶೇ.25ರ ಅನುದಾನದಲ್ಲಿ ಫಲಾನುಭವಿಗಳಿಗೆ ಹೊಲಿಗೆ ಯಂತ್ರ ನೀಡಲಾಗುವುದು. ಹಾಗೆಯೇ ಶೇ.25 ರ ಅನುದಾನದಲ್ಲಿ ಸೋಲಾರ್ ವಿದ್ಯುತ್ ದೀಪವನ್ನು ಅಳವಡಿಸಲಾಗುವುದು. ಈ ನಿಟ್ಟಿನಲ್ಲಿ ಫಲಾನುಭವಿಗಳ ಮಾಹಿತಿ ನೀಡುವಂತೆ ಪಿಡಿಒ ತಿಳಿಸಿದರು.ಕುಶಾಲನಗರ ತಾಲೂಕು ಆರೋಗ್ಯ ಇಲಾಖೆ ವತಿಯಿಂದ ಪಂಚಾಯಿತಿ ಸದಸ್ಯರಿಗೆ ಸಾರ್ವಜನಿಕರಿಗೆ ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ನಡೆಸಲಾಯಿತು.

ಗ್ರಾಮ ಪಂಚಾಯಿತಿ ಸದಸ್ಯರು, ಬಿಲ್ ಕಲೆಕ್ಟರ್ ಅವಿನಾಶ್, ಸಿಬ್ಬಂದಿ ಪವಿತ್ರಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net