

ಲಕ್ಷ್ಮೇಶ್ವರ: ಪಟ್ಟಣದ ಮುಖ್ಯ ಬಜಾರ್ ರಸ್ತೆಯಲ್ಲಿ ವಾಹನ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಕಳೆದ ಮೂರು ದಿನಗಳಿಂದ ಪೊಲೀಸ್ ಇಲಾಖೆ ಹಸಸಾಹಸ ನಡೆಸುತ್ತಿದೆ.
ಪಟ್ಟಣದ ಗ್ರಾಮ ಚಾವಡಿಯಿಂದ ಭರಮದೇವರ ಸರ್ಕಲ್ ವರೆಗೆ ಸಿಸಿ ರಸ್ತೆ ಕಾಮಗಾರಿ ಪ್ರಾರಂಭವಾಗಿದ್ದರಿಂದ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗಿದೆ. ಮದುವೆ, ಜಾತ್ರೆ, ಹಬ್ಬ, ಮುಂಗಾರು ಕೃಷಿ ಚಟುವಟಿಕೆ ಅನೇಕ ಕಾರಣದಿಂದ ಮಾರುಕಟ್ಟೆಯಲ್ಲಿ ಜನಸಂದಣಿ ಹೆಚ್ಚಾಗಿದೆ. ಸೋಮವಾರ ಮತ್ತು ಶುಕ್ರವಾರವಂತೂ ಸಂತೆ ಗದ್ದಲ ಜೋರಾಗಿರುತ್ತದೆ.
ಪಟ್ಟಣದ ಶ್ರೀ ಸೋಮೇಶ್ವರ ಪಾದಗಟ್ಟಿ ಹತ್ತಿರ, ಶಿಗ್ಲಿ ನಾಕಾ, ಹಾವಳಿ ಆಂಜನೇಯ ದೇವಸ್ಥಾನ, ಮಲ್ಲಾಡದ ಆಸ್ಪತ್ರೆ ಹತ್ತಿರ, ತರಕಾರಿ ಮಾರುಕಟ್ಟೆ ಪ್ರದೇಶದಲ್ಲಿ ಟ್ರಾಫಿಕ್ ಸಮಸ್ಯೆಯಿಂದ ಜನತೆ ಪರದಾಡುವಂತಾಗಿದೆ. ಈ ಬಗ್ಗೆ ಪೊಲೀಸ್ ಮತ್ತು ಪುರಸಭೆಗೆ ಸಾರ್ವಜನಿಕರು ಮನವಿ ಸಾಮಾನ್ಯವಾಗಿತ್ತು. ಕಳೆದ ಎರಡ್ಮೂರು ದಿನದಿಂದ ಪೀಲ್ಡಿಗಿಳಿದ ಪೊಲೀಸರು ಪಾದಗಟ್ಟಿಯಿಂದ ಒನ್‌ವೇ ಮಾಡಿ ಬೈಕ್ ಹೊರತುಪಡಿಸಿ ನಾಲ್ಕು ಚಕ್ರದ ವಾಹನಗಳಿಗೆ ಸಂಚಾರ ನಿರ್ಬಂಧಿಸಿದ್ದಾರೆ. ಪೊಲೀಸರು ರಸ್ತೆಗಳಲ್ಲಿ ನಿಂತು ನಿಮಯ ಮೀರುವ ವಾಹನಗಳಿಗೆ, ನಂಬರ್ ಪ್ಲೇಟ್ ಇಲ್ಲದಿರುವ, ತ್ರಿಬಲ್ ರೈಡಿಂಗ್, ವ್ಹೀಲಿಂಗ್, ಎಲ್ಲೆಂದರಲ್ಲಿ ಪಾರ್ಕಿಂಗ್ ಮಾಡುವವರಿಗೆ ದಂಡ ವಿಧಿಸುತ್ತಿದ್ದಾರೆ.
ಪಿಎಸ್‌ಐ ನಾಗರಾಜ ಗಡದ ನೇತೃತ್ವದಲ್ಲಿ ಕ್ರೈಂ ವಿಭಾಗದ ಪಿಎಸ್‌ಐ ಟಿ.ಕೆ. ರಾಠೋಡ ಸೇರಿ ಅನೇಕ ಸಿಬ್ಬಂದಿ ಸಂಚಾರ ನಿಯಂತ್ರಣಕ್ಕೆ ಹಲವು ಗಂಟೆ ಕಾರ್ಯನಿರ್ವಹಿಸುತ್ತಿದ್ದಾರೆ. ಬೆಳಗ್ಗೆ ಪೊಲೀಸ್ ಇಲಾಖೆ ಪ್ರಮುಖ ರಸ್ತೆಗಳಲ್ಲಿ ಬೀದಿಗಿಳಿದು ನಿಯಮ ಉಲ್ಲಂಘಿಸುವವರಿಗೆ ದಂಡದ ಬಿಸಿ ಮುಟ್ಟಿಸುವ ಮೂಲಕ ಸಂಚಾರ ಸಮಸ್ಯೆಗೆ ಕೊಂಚ ರಿಲೀಪ್ ತರುವ ಮೂಲಕ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.