ಸಂತೆ, ಜಾತ್ರೆ, ಸಮಾವೇಶಗಳಿಗೆ ಬ್ರೇಕ್

16 vikram 2
Published on

ಧಾರವಾಡ: ನೋವಲ್ ಕರೊನಾ ವೈರಸ್ ಹರಡದಂತೆ ತಡೆದು ಸಾರ್ವಜನಿಕರ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಮಾ. 16ರಿಂದ 21ರವರೆಗೆ ಸಿ ಆರ್​ಪಿಸಿ ಕಲಂನಡಿ ಜಿಲ್ಲೆಯಾದ್ಯಂತ ಸಂತೆ, ಜಾತ್ರೆ, ಮೆರವಣಿಗೆ, ಧಾರ್ವಿುಕ ಉತ್ಸವಗಳನ್ನು ನಿಷೇಧಿಸಿ ಜಿಲ್ಲಾಧಿಕಾರಿ ದೀಪಾ ಚೋಳನ್ ಅವರು ನಿಷೇಧಾಜ್ಞೆ ಹೊರಡಿಸಿದ್ದಾರೆ.

ನೂರಕ್ಕೂ ಹೆಚ್ಚು ಜನ ಸೇರುವ ಸಮಾವೇಶ, ಸಮ್ಮೇಳನ, ಕ್ರೀಡಾಕೂಟ, ಧಾರ್ವಿುಕ ಸಮಾರಂಭ, ಸ್ನೇಹಕೂಟ, ಸಂಗೀತ ಸಮ್ಮೇಳನಗಳು, ನಾಟಕೋತ್ಸವ, ವಿಚಾರಗೋಷ್ಠಿ ಮುಂತಾದ ಕಾರ್ಯಕ್ರಮಗಳನ್ನು ನಿಷೇಧಿಸಲಾಗಿದೆ. ಶವಸಂಸ್ಕಾರಕ್ಕೆ ಈ ಆದೇಶ ಅನ್ವಯಿಸುವುದಿಲ್ಲ. ಆದೇಶ ಉಲ್ಲಂಘಿಸುವವರ ವಿರುದ್ಧ ಭಾರತೀಯ ದಂಡ ಪ್ರಕ್ರಿಯಾ ಸಂಹಿತೆಯ ಕಲಂ 188ರ ಅನ್ವಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ನಿಷೇಧಾಜ್ಞೆಯಲ್ಲಿ ತಿಳಿಸಿದ್ದಾರೆ.

ಆತಂಕಪಡಬೇಕಿಲ್ಲ, ಮುಂಜಾಗ್ರತೆ ಕೈಗೊಳ್ಳಿ

ಕರೊನಾ ವೈರಸ್ ಶಂಕಿತ ಪ್ರಕರಣಗಳ ವರದಿ ನೆಗೆಟಿವ್ ಬಂದಿರುವುದರಿಂದ ಜಿಲ್ಲೆಯ ಜನ ಭಯ ಪಡಬೇಕಿಲ್ಲ. ವಿದೇಶಗಳಿಂದ ಜಿಲ್ಲೆಗೆ ಆಗಮಿಸಿರುವ ಜನರ ಮೇಲೆ ನಿಗಾ ಇಡಲಾಗಿದೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸಹಾಯ ಕೇಂದ್ರ ಪ್ರಾರಂಭಿಸಿದ್ದು, ವೈರಸ್ ಬಾಧಿತ ದೇಶಗಳಿಂದ ಆಗಮಿಸುವ ವ್ಯಕ್ತಿಗಳ ಕುರಿತು ಮಾಹಿತಿ ಪಡೆಯಲಾಗುತ್ತಿದೆ. ಇದಲ್ಲದೆ ಹೋಟೆಲ್​ಗಳಲ್ಲಿ ತಂಗಿರುವ ವಿದೇಶಿಯರ ಮಾಹಿತಿ ನೀಡುವಂತೆ ಸಹ ಮಾಲೀಕರಿಗೆ ಸೂಚಿಸಲಾಗಿದೆ. ಆಗಮಿಸಿರುವ ಜನರು 14 ದಿನಗಳ ಕಾಲ ಮನೆಯಿಂದ ಹೊರಬರದಂತೆ ಸೂಚಿಸಿದ್ದು, ಅವರ ಆರೋಗ್ಯದ ಬಗ್ಗೆ ನಿರಂತರ ಕಾಳಜಿ ವಹಿಸಲಾಗಿದೆ ಎಂದರು.

ಮುಂಜಾಗ್ರತಾ ಕ್ರಮವಾಗಿ ಈಗಾಗಲೇ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣಗಳಲ್ಲಿ ಸಹ ಸಹಾಯ ಕೇಂದ್ರ ಸ್ಥಾಪಿಸಲಾಗಿದೆ. ವೈರಸ್ ಕುರಿತ ಹೆಚ್ಚಿನ ಮಾಹಿತಿಗೆ ಉಚಿತ ಆರೋಗ್ಯ ಸಹಾಯವಾಣಿ 104 ಕ್ಕೆ ಕರೆ ಮಾಡಲು ಭಿತ್ತಿಪತ್ರಗಳ ಮೂಲಕ ತಿಳಿಸಲಾಗಿದೆ. ಸರ್ಕಾರದ ಆದೇಶಾನುಸಾರ ಜಿಲ್ಲಾ ಆಸ್ಪತ್ರೆ, ಕಿಮ್್ಸ, ರೈಲ್ವೆ ಆಸ್ಪತ್ರೆಗಳಲ್ಲಿ ಸಂಶಯಾಸ್ಪದ ಕರೊನಾ ವೈರಸ್ ಬಾಧಿತ ವ್ಯಕ್ತಿಗಳ ಚಿಕಿತ್ಸೆಗಾಗಿ ಪ್ರತ್ಯೇಕ ವಾರ್ಡ್ ಸಿದ್ಧಗೊಳಿಸಿ, ಐಸೋಲೇಶನ್​ಗಾಗಿ ಕಾಯ್ದಿರಿಸಲಾಗಿದೆ. ಇನ್ನೂ ಹೆಚ್ಚಿನ ಶಂಕಿತರು ಕಂಡು ಬಂದಲ್ಲಿ ಅವರನ್ನು ಪ್ರತ್ಯೇಕವಾಗಿ ಇರಿಸಲು ಸಹ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದರು.

ಆರೋಗ್ಯ ಇಲಾಖೆ ಸಿಬ್ಬಂದಿ, ವೈದ್ಯಾಧಿಕಾರಿಗಳಿಗೆ, ಆಶಾ ಕಾರ್ಯಕರ್ತೆಯರಿಗೆ ಮುಂಜಾಗ್ರತಾ ಕ್ರಮಗಳ ತರಬೇತಿ ನೀಡಲಾಗಿದೆ. ಅವರ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡಲಾಗುತ್ತಿದೆ. ಸರ್ಕಾರದ ಆದೇಶದಂತೆ ಜಿಲ್ಲೆಯ ಶಾಲಾ ಕಾಲೇಜು, ಮಾಲ್, ಚಿತ್ರಮಂದಿರ, ಕೋಚಿಂಗ್ ಕ್ಲಾಸ್​ಗಳು ತೆರೆಯದಂತೆ ನಿರ್ದೇಶನ ನೀಡಲಾಗಿದೆ. ಉಸ್ತುವಾರಿಗಾಗಿ ಅಧಿಕಾರಿಗಳ ತಂಡ ರಚಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುವ ಧಾರ್ವಿುಕ ಆಚರಣೆ, ಜಾತ್ರೆ, ಉತ್ಸವ, ಮದುವೆ ಸಮಾರಂಭ ಹಾಗೂ ಇತರ ಕಾರ್ಯಕ್ರಮಗಳನ್ನು ಸ್ವಯಂ ಪ್ರೇರಣೆಯಿಂದ ಮುಂದೂಡುವಂತೆ ಧಾರ್ವಿುಕ ಮುಖಂಡರಿಗೆ, ಸಮುದಾಯಗಳ ಹಿರಿಯರಿಗೆ ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.

ತಪ್ಪು ಸಂದೇಶ ನೀಡಬಾರದು

ಕರೊನಾ ವೈರಸ್ ಕುರಿತು ಸಕ್ಷಮ ಪ್ರಾಧಿಕಾರ ಅಥವಾ ಜಿಲ್ಲಾಧಿಕಾರಿಯಿಂದ ಖಚಿತಪಡಿಸಿಕೊಳ್ಳದೆ ಸುಳ್ಳು ವರದಿಗಳನ್ನು, ಅನಗತ್ಯ ಮಾಹಿತಿಗಳನ್ನು ಸಾಮಾಜಿಕ ಜಾಲತಾಣ ಸೇರಿ ವಿವಿಧ ಸಮೂಹ ಮಾಧ್ಯಮಗಳ ಮೂಲಕ ಸಾರ್ವಜನಿಕವಾಗಿ ಪ್ರಚುರ ಪಡಿಸುವವರ ವಿರುದ್ಧ ಕಾನೂನಾತ್ಮಕ ಶಿಸ್ತು ಕ್ರಮ ಜರುಗಿಸಲಾಗುವುದು. ಅಂತಹವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು. ಹೀಗಾಗಿ,ಯಾರೂ ತಪ್ಪು ಸಂದೇಶ ನೀಡಬಾರದು ಎಂದು ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.

ಆರೋಗ್ಯವಂತ ಜನರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕಿಲ್ಲ. ಆದರೆ ಕೆಮ್ಮು, ನೆಗಡಿ ಇದ್ದವರು ಧರಿಸಿದರೆ ಉತ್ತಮ. ಇದರ ಜತೆಗೆ ಆಸ್ಪತ್ರೆಗಳ ಸಿಬ್ಬಂದಿ ಮಾಸ್ಕ್ ಧರಿಸಿಯೇ ತಪಾಸಣೆ ನಡೆಸಬೇಕು. ಇನ್ನು ಮಾಸ್ಕ್ ಹಾಗೂ ಹ್ಯಾಂಡ್ ಸ್ಯಾನಿಟೈಸರ್​ಗಳನ್ನು ನಿಗದಿತ ದರಕ್ಕಿಂತ ಹೆಚ್ಚಿನ ಬೆಲೆಗೆ ಮಾರುವಂತಿಲ್ಲ. ಒಂದು ವೇಳೆ ಈರೀತಿ ಪ್ರಕರಣಗಳು ಕಂಡುಬಂದಲ್ಲಿ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು. | ದೀಪಾ ಚೋಳನ್, ಡಿಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net