ಸಂತರವಾಣಿ ನಿರಂತರ ಮೊಳಗಲಿ

hn-13-2
ಬಬಲೇಶ್ವರ ತಾಲೂಕಿನ ಕಾಖಂಡಕಿ ಗ್ರಾಮದ ಗುರುದೇವಾಶ್ರಮ ಆವರಣದಲ್ಲಿ ನಡೆದ ಸಿದ್ಧೇಶ್ವರ ಸ್ವಾಮಿಗಳ ಪ್ರವಚನ ಸಮಾರೋಪ ಸಮಾರಂಭದಲ್ಲಿ ಬೆಂಗಳೂರಿನ ಮರಾಠಾ ಸಮಾಜದ ಮಂಜುನಾಥ ಭಾರತಿ ಸ್ವಾಮೀಜಿ ಮಾತನಾಡಿದರು. ಕೃತಾತ್ಮನಂದ ಸ್ವಾಮೀಜಿ, ಶಿವಯೋಗೇಶ್ವರ ಸ್ವಾಮೀಜಿ ಇದ್ದರು.
Published on

ವಿಜಯಪುರ: ಪ್ರವಚನದ ಸುಖ ಹಾಗೂ ಮಹತ್ವ ತಿಳಿಯಬೇಕಾದರೆ ಸಿದ್ಧೇಶ್ವರ ಸ್ವಾಮಿಗಳ ಅಮೃತವಾಣಿ ಆಲಿಸಬೇಕು ಎಂದು ಬೆಂಗಳೂರಿನ ಮರಾಠಾ ಸಮಾಜದ ಮಂಜುನಾಥ ಭಾರತಿ ಸ್ವಾಮೀಜಿ ಹೇಳಿದರು.

ಬಬಲೇಶ್ವರ ತಾಲೂಕಿನ ಕಾಖಂಡಕಿ ಗ್ರಾಮದ ಗುರುದೇವಾಶ್ರಮ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಿದ್ಧೇಶ್ವರ ಸ್ವಾಮಿಗಳ ಪ್ರವಚನ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಶಂಕರಾಚಾರ್ಯರು, ತುಕಾರಾಂ ಅವರಂಥ ಅನೇಕ ದಾರ್ಶನಿಕರು ‘ಈ ಭೂಮಿಯ ಮೇಲೆ ಯಾವುದೇ ನಿರೀಕ್ಷೆ ಇಲ್ಲದಂತೆ ಬದುಕು’ ಎಂದು ಹೇಳಿದ್ದಾರೆ. ಸಿದ್ಧೇಶ್ವರ ಸ್ವಾಮಿಗಳು ಅಕ್ಷರಶಃ ಅವರು ಹೇಳಿದಂತೆ ನಡೆಯುತ್ತಿದ್ದಾರೆ. ಭಕ್ತಿ, ಜ್ಞಾನ ಮತ್ತು ವೈರಾಗ್ಯಗಳು ಸುಖದ ದಾರಿಗಳು. ದೇವರನ್ನು ಅರಿಯುವ ಮಾರ್ಗಗಳು ಎಂದು ಜಗತ್ತಿನ ಮನುಕುಲಕ್ಕೆ ಸಾರಿ ಹೇಳಿದವರು ಸಿದ್ಧೇಶ್ವರ ಶ್ರೀಗಳು. ಅವರ ದಿವ್ಯ ಸನ್ನಿಧಿಯಲ್ಲಿ ಒಂದು ತಿಂಗಳು ನಡೆದ ಈ ಸತ್ಸಂಗದಿಂದ ನಿಜಕ್ಕೂ ಗ್ರಾಮ ಪಾವನವಾಗಿದೆ ಎಂದರು.

ಹುಬ್ಬಳ್ಳಿಯ ಚಿನ್ಮಯ ಮಿಷನ್‌ನ ಕೃತಾತ್ಮನಂದ ಸ್ವಾಮೀಜಿ ಮಾತನಾಡಿ, ಎಲ್ಲೆಲ್ಲಿ ಮಹಾಭಾರತ ನಡೆಯುವುದೋ ಅಲ್ಲಿ ಗೀತೆಯ ಬೋಧನೆಯಾಗಬೇಕು. ಎಲ್ಲಿ ಅಶಾಂತಿ, ಅಸಹಿಷ್ಣುತೆ ಇರುತ್ತದೆಯೋ ಅಲ್ಲಿ ಸಂತರವಾಣಿ ಮೊಳಗಬೇಕು. ಮನಸ್ಸು ಆಕ್ರೋಶ, ದ್ವೇಷದಿಂದ ತುಂಬಿದಷ್ಟು ಮಲಿನವಾಗಿರುತ್ತದೆ. ಎಷ್ಟು ಪ್ರಶಾಂತವಾಗಿರುತ್ತದೆಯೋ ಅಷ್ಟೇ ಸ್ವಚ್ಛವಾಗಿರುತ್ತದೆ ಎಂದರು.

ನಾವ್ಯಾರೂ ಜಗತ್ತನ್ನು ಬದಲಾಯಿಸುವ ಅವಶ್ಯಕತೆಯಿಲ್ಲ. ನಾವು ಬದಲಾದರೆ ಸಾಕು. ರಷ್ಯಾ, ಫ್ರಾನ್ಸ್, ಇಟಲಿ ಮತ್ತಿತರ ದೇಶಗಳಿಂದ ಕಾಖಂಡಕಿ ಎಂಬ ಪುಟ್ಟ ಗ್ರಾಮಕ್ಕೆ ಪೂಜ್ಯರ ವಾಣಿಯನ್ನು ಕೇಳಲು ಬರುವವರೆಂದರೆ ಪೂಜ್ಯರ ವಾಣಿಗೆ ಮತ್ತು ಈ ಹಳ್ಳಿಯ ನೆಲಕ್ಕೆ ಅದೆಷ್ಟು ಶಕ್ತಿಯಿರಬೇಕು ಎಂಬುದನ್ನು ಯೋಚಿಸಿ. ನಮ್ಮ ವ್ಯಕ್ತಿತ್ವದ ಬದಲಾವಣೆಗಾಗಿ ನಮ್ಮ ಹಿರಿಯರು ಪ್ರಯತ್ನಿಸಿದ್ದಾರೆ. ಅದರಂತೆ ಪವಿತ್ರ ಮನಸ್ಸುಳ್ಳ ಶುದ್ಧ ಕಾಯಕದ ಮಹಾತ್ಮರು ಕೂಡ ಶ್ರಮಿಸುತ್ತಿದ್ದಾರೆ. ನಮ್ಮ ಮನಸ್ಸಿನ ಕೊಳೆ ತೊಳೆದುಕೊಳ್ಳಲು ಸತ್ಸಂಗವೇ ಉತ್ತಮ ಮಾರ್ಗವಾಗಿದೆ ಎಂದರು.

ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ, ಗುರುದೇವಾಶ್ರಮದ ಶಿವಯೋಗೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ರಷ್ಯಾದ ಆ್ಯಂಟೋನಿ ಉರ್ಫ್ ಅರ್ಜುನ್ ವೇದಿಕೆ ಮೇಲಿದ್ದರು. ಉದ್ಯಮಿಗಳಾದ ಗುರುಲಿಂಗಪ್ಪ ಅಂಗಡಿ, ಪ್ರಕಾಶ ಗಣಿ, ಅಶೋಕ ತಿಮಶೆಟ್ಟಿ, ಚಂದ್ರಶೇಖರ ಕವಟಗಿ, ರಮೇಶಕುಮಾರ ಹೆಬ್ಬಿ, ರಾಜೇಂದ್ರಕುಮಾರ ಬಿರಾದಾರ, ಸಾಧು ಸಂತರು, ಗಣ್ಯರು, ರೈತರು, ಆರು ಸಾವಿರಕ್ಕೂ ಅಧಿಕ ಭಕ್ತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net