ಸಂತ ಸೇವಾಲಾಲ್ ಕೊಡುಗೆ ಅಪಾರ

15Jaggu5
ಬೆಳಗಾವಿ ಕುಮಾರ ಗಂಧರ್ವ ಕಲಾಮಂದಿರದಲ್ಲಿ ಬುಧವಾರ ಆಯೋಜಿಸಿದ್ದ ಸಂತ ಸೇವಾಲಾಲ್ ಜಯಂತಿಯನ್ನು ಪಾಲಿಕೆ ಮೇಯರ್ ಶೋಭಾ ಸೋಮನಾಚೆ ಉದ್ಘಾಟಿಸಿದರು. ನಾರಾಯಣ ರಾಠೋಡ, ಉಪ ಮೇಯರ್ ರೇಷ್ಮಾ ಪಾಟೀಲ, ಪಾಲಿಕೆ ಸದಸ್ಯ ಲಕ್ಷ್ಮೀ ರಾಠೋಡ, ವಿದ್ಯಾವತಿ ಭಜಂತ್ರಿ ಇತರರಿದ್ದರು.
Published on

ಬೆಳಗಾವಿ: ಸಂತ ಸೇವಾಲಾಲ್ ಅವರು ಪವಾಡ ಪುರುಷರು. ಸತ್ಯ, ಅಹಿಂಸೆ ಮೂಲಕ ಅನೇಕ ಸಂದೇಶಗಳನ್ನು ನೀಡಿದ್ದಾರೆ. ಸಮಾಜದ ಏಳಿಗೆಗಾಗಿ ನಿರಂತರ ಶ್ರಮಿಸಿದ ಅವರ ಕೊಡುಗೆ ಅಪಾರ ಎಂದು ಮಹಾನಗರ ಪಾಲಿಕೆಯ ಮೇಯರ್ ಶೋಭಾ ಸೋಮನಾಚೆ ತಿಳಿಸಿದರು.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನರ ಪಾಲಿಕೆಯಿಂದ ನಗರದ ಕುಮಾರ ಗಂಧರ್ವ ಕಲಾಮಂದಿರದಲ್ಲಿ ಬುಧವಾರ ಆಯೋಜಿಸಿದ್ದ ಸಂತ ಸೇವಾಲಾಲ್ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿಶೇಷ ಉಪನ್ಯಾಸ ನೀಡಿದ ನಾರಾಯಣ ರಾಠೋಡ, ಸಂತ ಸೇವಾಲಾಲ್ ಬಂಜಾರ ಸಮುದಾಯದ ರಕ್ಷಕರಾಗಿ ಸಂಸ್ಕೃತಿ ಪರಂಪರೆ ಉಳಿವಿಗಾಗಿ ಹೋರಾಡಿದ ಮಹಾ ತಪಸ್ವಿ, ಸಮಾಜ ಸುಧಾರಕರು. ಸಂತ ಸೇವಾಲಾಲ್ ಅವರ ಪವಾಡ, ಜೀವನ ಚರಿತ್ರೆ ಕುರಿತು ಎಲ್ಲರೂ ತಿಳಿದುಕೊಳ್ಳಬೇಕು. ಬಂಜಾರ ಸಮುದಾಯದವರು ವೀರ, ಶೂರರು ಮಾತ್ರವಲ್ಲದೇ ವ್ಯಾಪಾರ ಮಾಡುವುದರಲ್ಲಿ ಬ್ರಿಟಿಷರನ್ನು ಮೀರಿಸಿದ್ದಾರೆ. ಜಾತಿ, ಧರ್ಮ ಎಂಬ ಭೇದ ಭಾವ ಇಲ್ಲದೆ ಎಲ್ಲರೂ ಸಮಾನರು ಎಂದು ವಿಶ್ವ ಮಾನವ ಸಂದೇಶ ಸಾರುವ ಮೂಲಕ ಸಮಾಜದಲ್ಲಿ ಅನೇಕ ಒಳ್ಳೆಯ ಕಾರ್ಯಗಳನ್ನು ಮಾಡಿದ್ದಾರೆ. ಅದೇ ರೀತಿಯಲ್ಲಿ ಎಲ್ಲ ಜನಾಂಗದವರು ಒಂದೇ ಎಂಬ ಭಾವನೆಯಿಂದ ಬಂಜಾರ ಸಮುದಾಯದವರು ಇದ್ದಾರೆ ಎಂದರು.

ಇದೇ ವೇಳೆ ಬಂಜಾರ ಸಮುದಾಯದ ಹಿರಿಯರಿಗೆ ಮುಖಂಡರನ್ನು ಸನ್ಮಾನಿಸಲಾಯಿತು. ಪಾಲಿಕೆ ಉಪ ಮೇಯರ್ ರೇಷ್ಮಾ ಪಾಟೀಲ, ಪಾಲಿಕೆ ಸದಸ್ಯೆ ಲಕ್ಷ್ಮೀ ರಾಠೋಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಸಮುದಾಯದ ಹಿರಿಯರು, ಮುಖಂಡರು ಇದ್ದರು. ಇದಕ್ಕೂ ಮುನ್ನ ಕಿಲ್ಲಾ ಕೋಟೆ ಕೆರೆಯಿಂದ ನಗರದ ಕುಮಾರ ಗಂಧರ್ವ ಕಲಾಮಂದಿರವರೆಗೆ ನಡೆದ ಸಂತ ಸೇವಾಲಾಲ್ ಅವರ ಭಾವಚಿತ್ರದ ಭವ್ಯ ಮೆರವಣಿಗೆಗೆ ಸಂಸದೆ ಮಂಗಲ ಅಂಗಡಿ ಚಾಲನೆ ನೀಡಿದರು. ಬೆಳಗಾವಿ ಉತ್ತರ ವಿಧಾನಸಭಾ ಮತಕ್ಷೇತ್ರದ ಶಾಸಕರಾದ ಅನೀಲ ಬೆನಕೆ, ಅಪರ ಜಿಲ್ಲಾಧಿಕಾರಿ ಕೆ.ಟಿ. ಶಾಂತಲಾ, ಸಮುದಾಯ ಮುಖಂಡರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net