

ಕೊಳ್ಳೇಗಾಲ: ಪಟ್ಟಣದ ಉಪವಿಭಾಗಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ತಾಲೂಕು ಆಡಳಿತದಿಂದ ಶನಿವಾರ 286ನೇ ಸಂತ ಶ್ರೀ ಸೇವಾಲಾಲ್ ಜಯಂತಿಯನ್ನು ಆಚರಿಸಲಾಯಿತು.
ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಣಾಧಿಕಾರಿ ಗುರುಶಾಂತಪ್ಪ ಬೆಳ್ಳುಂಗಡಿ, ಅಧಿಕಾರಿಗಳು ಹಾಗೂ ಸಮುದಾಯದ ಜನರು ಸಂತ ಸೇವಾಲಾಲ್ ಅವರ ಭಾವಚಿತ್ರವನ್ನು ಇಟ್ಟು ಪೂಜೆ ಸಲ್ಲಿಸಿದರು.
ಜಿಲ್ಲಾ ಲಂಬಾಣಿ ನೌಕರ ಸಂಘದ ಅಧ್ಯಕ್ಷ ಶಾಂತರಾಜು ಮಾತನಾಡಿ, ಸಂತ ಸೇವಾಲಾಲ್ ಅವರು ಭವಿಷ್ಯದಲ್ಲಿ ನಡೆಯುವ ಸಂಗತಿಗಳನ್ನು ಮೊದಲೇ ತಿಳಿಸುತ್ತಿದ್ದರು. ಜನರಿಗೆ ಜೀವನದ ಮೌಲ್ಯವನ್ನು ತಿಳಿಸುತ್ತಿದ್ದರು. ಮದ್ಯ ಇನ್ನಿತರ ದುಶ್ಚಟಗಳಿಂದ ದೂರ ಇರುವಂತೆ ತಿಳಿಸುತ್ತ ಸಮಾಜಕ್ಕೆ ದಾರಿ ದೀಪವಾಗಿದ್ದರು ಎಂದರು.
ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಣಾಧಿಕಾರಿ ಗುರುಶಾಂತಪ್ಪ ಬೆಳ್ಳುಂಡಗಿ ಮಾತನಾಡಿ, ಲಂಬಾಣಿ ಜನಾಂಗ ಸೌಮ್ಯವಾದಿಗಗಳಾಗಿದ್ದು, ತಮ್ಮ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಾರೆ. ಸಂತ ಸೇವಾಲಾಲ್ ಅವರು ಹಾಕಿ ಕೊಟ್ಟ ಮಾರ್ಗದಲ್ಲಿ ಮುಂದೆ ಸಾಗುವ ಮೂಲಕ ಉತ್ತಮ ಜೀವನ ನಡೆಸಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಮುಖ್ಯ ಭಾಷಣಕಾರ ರಾಮಪುರ ಸರ್ಕಾರಿ ಪ್ರೌಢ ಶಾಲೆಯ ದೈಹಿಕ ಶಿಕ್ಷಕ ಕುಮಾರ, ಜಿಲ್ಲಾ ಲಂಬಾಣಿ ನೌಕರರ ಅಧ್ಯಕ್ಷ ಶಾಂತರಾಜು, ಕಂದಾಯ ಇಲಾಖೆ ಶಿರಸ್ತೇದಾರ್ ಕೃಪಾಕರ್, ಪರಿಶಿಷ್ಟ ಪಂಗಡ ಕಲ್ಯಾಣ ಅಧಿಕಾರಿ ರಾಜೇಶ್, ದೈಹಿಕ ಶಿಕ್ಷಣ ಪರಿವೀಕ್ಷಕ ಸ್ಟೀವನ್, ಭೂ ಮಾಪನ ಇಲಾಖೆ ಸಹಾಯಕ ನಿರ್ದೇಶಕ ನಟರಾಜು, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಶಿವರಾಜು, ಸಿಡಿಪಿಒ ಇಲಾಖೆಯ ಶಿವಲೀಲಾ, ಅಬಕಾರಿ ಉಪ ನಿರೀಕ್ಷಕ ಸಿದ್ದಯ್ಯ, ಲಂಬಾಣಿ ಜನಾಂಗದ ಸಿ.ನಾಗರಾಜು. ಕೆ.ಮಹದೇವು, ಗುರುಸ್ವಾಮಿ, ತುಳಿಸಿಯನ್, ಪ್ರಮಿಳಾ ಬಾಯಿ, ಮುನಿಯನಾಯ್ಕ, ರಾಜಿಲಿಬಾಯಿ, ಮಹದೇವ ಮತ್ತಿತರಿದ್ದರು.