ಸಂತ ರಾಮರಾವ ಮಂದಿರ ಭೂಮಿಪೂಜೆ 11ಕ್ಕೆ

prabhu chouhan
Published on

ಬೀದರ್: ಇತ್ತೀಚೆಗೆ ಪೌರಾದೇವಿಯಲ್ಲಿ ದೈವಾಧೀನರಾದ ಬಂಜಾರಾ ಸಮಾಜ ಧರ್ಮ ಗುರು, ಸಂತ ಶ್ರೀ ಡಾ.ರಾಮರಾವ ಮಹಾರಾಜರ ಅಸ್ಥಿಪೂಜೆ, ಅವರ ಮಂದಿರ ಭೂಮಿ ಪೂಜೆ ಮತ್ತು ಶೃದ್ಧಾಂಜಲಿ ಕಾರ್ಯಕ್ರಮ ನ.10, 11ರಂದು ಔರಾದ್ ತಾಲೂಕಿನ ಘಮಸುಬಾಯಿ ತಾಂಡಾದಲ್ಲಿರುವ ತಮ್ಮ ಗೃಹ ಪರಿಸರದಲ್ಲಿ ನಡೆಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ತಿಳಿಸಿದ್ದಾರೆ.

ಪೂಜ್ಯರ ಆಶೀರ್ವಾದ ಸದಾ ಸಮಾಜದ ಮೇಲಿರಲಿ ಎಂಬ ಉದಾತ್ತ ಧ್ಯೇಯದೊಂದಿಗೆ ವಿವಿಧ ಕಾರ್ಯಕ್ರಮ ನಡೆಯಲಿವೆ. 10ರಂದು ಸಂಜೆಯಿಂದ ರಾತ್ರಿಯಿಡೀ ಭಜನೆ, ಕೀರ್ತನೆ, ಅವರ ಸಂದೇಶಗಳ ಪಾರಾಯಣ ನಡೆಯಲಿದೆ. 11ರಂದು ಬೆಳಗ್ಗೆ 9ರಿಂದ 11ರವರೆಗೆ ರಾಮರಾವ ಮಹಾರಾಜರ ಪೌರಾ ಅಸ್ಥಿ ಪೂಜೆ ಮತ್ತು ದರ್ಶನ, 11ಕ್ಕೆ ಗೋ ಮಾತಾ ಪೂಜೆ, 11.30ಕ್ಕೆ ಸಸಿ ನೆಡುವಿಕೆ, ಮಧ್ಯಾಹ್ನ 12 ಗಂಟೆಗೆ ರಾಮರಾವ ಮಹಾರಾಜರ ಮಂದಿರದ ಭೂಮಿಪೂಜೆ ಹಾಗೂ ನಂತರ ಶ್ರದ್ಧಾಂಜಲಿ ಸಭೆ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ವಿವರಿಸಿದ್ದಾರೆ.

ಬಾಲಬೃಹ್ಮಚಾರಿಯಾಗಿದ್ದ ಸಂತ ರಾಮರಾವ ಮಹಾರಾಜರು ಸಂತ ಸೇವಾಲಾಲರ ನಂತರ ಬಂಜಾರ ಸಮುದಾಯ ಏಕೈಕ ಧರ್ಮಗುರುಗಳಾಗಿದ್ದರು. 10ನೇ ವಯಸ್ಸಿಗೆ ಸಂನ್ಯಾಸ ದೀಕ್ಷೆ ಸ್ವೀಕರಿಸಿ, ತಮ್ಮ ಅಂತಿಮ ದಿನದವರೆಗೂ ನಿರಾಹಾರಿಗಳಾಗಿದ್ದರು. ದೇಶಾದ್ಯಂತ ಸಂಚರಿಸಿ ಬಂಜಾರಾ ಸಮುದಾಯವನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ಅಪಾರ ಶ್ರಮಿಸಿದ್ದರು. ಸಮಾಜದಲ್ಲಿ ಜಾಗೃತಿ ಮೂಡಿಸಿ ಅನಕ್ಷರತೆ ಅಳಿಸಲು ಶಿಕ್ಷಣಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಟ್ಟಿದ್ದರು. ಸಮಾಜದ ಜನ ನೆಲೆಸುವ ಪ್ರತಿ ತಾಂಡಾಗಳಿಗೆ ಭೇಟಿ ನೀಡಿ, ಸಮಾಜದ ಜನ ಗೌರವಪೂರ್ವಕವಾಗಿ ಬದುಕುವುದನ್ನು ಕಲಿಸಿಕೊಟ್ಟರು. ಬಂಜಾರಾ ಭಾಷೆಗೆ ಈಗಲೂ ಲಿಪಿಯಿಲ್ಲ, ಕೇವಲ ಭಾಷೆ ಮೂಲಕ ಅವರು ತಮ್ಮ ಸಂದೇಶ ಸಾರುತ್ತಿದ್ದರು. ಅವರ ಸ್ಮರಣೆಯಲ್ಲಿ ನಡೆಯಲಿರುವ ಎಲ್ಲ ಕಾರ್ಯಕ್ರಮಗಳಲ್ಲಿ ಜಿಲ್ಲೆಯ ಸದ್ಭಕ್ತರು ಆಗಮಿಸಿ ಸದ್ಗುರುಗಳ ಕೃಪಾಶೀರ್ವಾದಕ್ಕೆ ಪಾತ್ರರಾಗಲು ಕೋರಿದ್ದಾರೆ.

ಕಾರ್ಯಕ್ರಮಕ್ಕೆ ಬರುವವರೆಲ್ಲರೂ ಕಡ್ಡಾಯವಾಗಿ ಕೋವಿಡ್ ನಿಯಮಗಳನ್ನು ಪಾಲಿಸಬೇಕು. ಎಲ್ಲರೂ ಮಾಸ್ಕ್ ಧರಿಸಿಕೊಂಡು ಆಗಮಿಸಬೇಕು. ಪರಸ್ಪರ ಅಂತರ ಕಾಪಾಡಬೇಕು. ಇಲ್ಲಿ ಬರುವವರೆಲ್ಲರಿಗೂ ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿದೆ ಎಂದು ಸಚಿವರು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net