ಸಂಡೇ ಲಾಕ್​ಡೌನ್​ಗೆ ಉತ್ತಮ ಸ್ಪಂದನೆ

19 GAJENDRAGAD 1
Published on

ಗದಗ: ಕರೊನಾ ನಿಯಂತ್ರಣಕ್ಕಾಗಿ ಹೇರಲಾಗಿರುವ ಭಾನುವಾರ ಲಾಕ್​ಡೌನ್​ಗೆ ಗದಗ- ಬೆಟಗೇರಿ ಸೇರಿ ಜಿಲ್ಲೆಯಲ್ಲಿ ಉತ್ತಮ ಸ್ಪಂದನೆ ದೊರೆಯಿತು. ಇದರ ಮಧ್ಯೆ ಅನಗತ್ಯವಾಗಿ ರಸ್ತೆಗಿಳಿದ ವಾಹನ ಸವಾರರಿಗೆ ಪೊಲೀಸರು ಬಿಸಿ ಮುಟ್ಟಿಸಿದರು.

ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಜನರು ಅಕ್ಷರಶಃ ಭಯಗೊಂಡಿದ್ದಾರೆ. ಹೀಗಾಗಿ ಜನರು ಮನೆಯಿಂದ ಹೊರಗೆ ಬರಲಿಲ್ಲ.

ಅವಳಿ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು. ಕರೊನಾ ಭಯದ ನಡುವೆಯೂ ಕೆಲ ಬೈಕ್ ಸವಾರರು ಸುತ್ತಾಡುತ್ತಿರುವುದು ಕಂಡು ಬಂತು. ಅಗತ್ಯ ಕಾರಣ ನೀಡಿದ ಕೆಲವರಿಗೆ ತಿಳಿವಳಿಕೆ ನೀಡಿ ಬಿಡಲಾಯಿತು. ಅನಗತ್ಯವಾಗಿ ರಸ್ತೆಗಿಳಿದವರ ವಾಹನ ಸೀಜ್ ಮಾಡಲಾಯಿತು.

ಗದಗ ನಗರದ ಮಹಾತ್ಮಾ ಗಾಂಧಿ ವೃತ್ತ, ಮುಳಗುಂದ ನಾಕಾ, ಹಳೇ ಡಿಸಿ ಆಫೀಸ್ ವೃತ್ತ, ಭೂಮರಡ್ಡಿ ವೃತ್ತ, ಬೆಟಗೇರಿ ಭಾಗದಲ್ಲಿ 20ಕ್ಕೂ ಹೆಚ್ಚು ವಾಹನಗಳನ್ನು ಸೀಜ್ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೈಕ್ ಸವಾರರಿಗೆ ಪೊಲೀಸರ ಎಚ್ಚರಿಕೆ

ಶಿರಹಟ್ಟಿ: ಲಾಕ್​ಡೌನ್ ಜಾರಿಯಲ್ಲಿದ್ದರೂ ಅನಗತ್ಯವಾಗಿ ಪಟ್ಟಣದಲ್ಲಿ ಓಡಾಡುತ್ತಿದ್ದ ವಾಹನ ಸವಾರರಿಗೆ ಪೊಲೀಸರು ದಂಡ ವಿಧಿಸಿದರು.

ಉಳಿದಂತೆ ಸಾರ್ವಜನಿಕರಿಂದ ಬಂದ್​ಗೆ ಉತ್ತಮ ಬೆಂಬಲ ವ್ಯಕ್ತವಾಯಿತು. ಔಷಧ ಮತ್ತು ಹಾಲು ಮಾರಾಟ ಹೊರತುಪಡಿಸಿ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದವು. ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದರಿಂದ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಮಾಸ್ಕ್ ಧರಿಸದೇ ಓಡಾಡುತ್ತಿದ್ದವರಿಗೆ ಪೊಲೀಸರು ಬುದ್ಧಿ ಹೇಳಿ ಕಳುಹಿಸಿದರು. ತಾಲೂಕಿನ ಬೆಳ್ಳಟ್ಟಿ, ಹೆಬ್ಬಾಳ, ಕಡಕೋಳ, ಮಾಗಡಿ ಸೇರಿ ಬಹುತೇಕ ಕಡೆ ಬಂದ್​ಗೆ ಸಂಪೂರ್ಣ ಬೆಂಬಲ ವ್ಯಕ್ತವಾಯಿತು. ಸಿಪಿಐ ವಿಕಾಸ ಲಮಾಣಿ, ಪಿಎಸ್​ಐ ಎಸ್.ಎಂ. ನಾಯಕ ಹಾಗೂ ಪೊಲೀಸ್ ಸಿಬ್ಬಂದಿ ಪಟ್ಟಣದಲ್ಲಿ ಬಿಗಿ ಬಂದೋಬಸ್ತ್ ಕೈಗೊಂಡಿದ್ದರು.

ಹದಿನೈದು ಸಾವಿರ ರೂಪಾಯಿ ದಂಡ ವಸೂಲಿ

ನರಗುಂದ: ಭಾನುವಾರದ ಲಾಕ್​ಡೌನ್ ಉಲ್ಲಂಘಿಸಿ ಅನಗತ್ಯವಾಗಿ ಪಟ್ಟಣದಲ್ಲಿ ಸಂಚರಿಸುತ್ತಿದ್ದ 35 ಬೈಕ್​ಗಳನ್ನು ನರಗುಂದ ಪೊಲೀಸರು ಸೀಜ್ ಮಾಡುವ ಮೂಲಕ ಸವಾರರಿಗೆ ಬಿಸಿ ಮುಟ್ಟಿಸಿದ್ದಾರೆ. ನಿಯಮ ಗಾಳಿಗೆ ತೂರಿ ರಸ್ತೆಗಿಳಿದ 35 ಬೈಕ್​ಗಳನ್ನು ಪೊಲೀಸರು ಸೀಜ್ ಮಾಡಿ ಅವರಿಂದ 15 ಸಾವಿರ ರೂ. ದಂಡ ವಸೂಲಿ ಮಾಡಿದ್ದಾರೆ.

ಪಟ್ಟಣದ ಕಾಯಿಪಲ್ಲೆ ಮಾರುಕಟ್ಟೆ ಪ್ರದೇಶದತ್ತ ಜನತೆ ಸುಳಿಯಲಿಲ್ಲ. ಬಹುತೇಕ ಸರ್ಕಾರಿ, ಖಾಸಗಿ ವಾಹನಗಳು ರಸ್ತೆಗೆ ಇಳಿಯಲಿಲ್ಲ. ಕೆಲವೊಂದು ಲಾರಿ, ದ್ವಿಚಕ್ರ ವಾಹನ ಸವಾರರು ಅಲ್ಲಲ್ಲಿ ಕಂಡುಬಂದರು.

ಅಂಗಡಿ ಮಾಲೀಕನ ಮೇಲೆ ಕೇಸ್: ಪರಸ್ಪರ ಅಂತರ ಕಾಪಾಡಿಕೊಳ್ಳುವುದನ್ನು ಮರೆತ ನರಗುಂದ ಪಟ್ಟಣದ ಬಸವೇಶ್ವರ ವರ್ತಲದ ಬಳಿಯ ಮಹೇಶ ಎಗ್ ರೈಸ್ ಅಂಗಡಿ ಮಾಲೀಕನ ಮೇಲೆ ವಿಪತ್ತು ನಿರ್ವಹಣೆ ಕಾಯ್ದೆಯಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಕೆಲವೆಡೆ ಸಾರ್ವಜನಿಕರ ಉದಾಸೀನ

ಮುಂಡರಗಿ: ಭಾನುವಾರ ಲಾಕ್​ಡೌನ್ ಹಿನ್ನೆಲೆಯಲ್ಲಿ ಪಟ್ಟಣ ಸಂಪೂರ್ಣ ಸ್ತಬ್ಧವಾಗಿತ್ತು. ಎಲ್ಲ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದವು. ಆದರೆ, ಕೆಲವೆಡೆ ಸಾರ್ವಜನಿಕರ ಸಂಚಾರ ಕಂಡುಬಂತು.

ಸದಾ ಜನ ಸಂದಣಿಯಿಂದ ಕೂಡಿರುತ್ತಿದ್ದ ಮುಖ್ಯಬಜಾರ್ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಕೆಎಸ್​ಆರ್​ಟಿಸಿ ಬಸ್ ನಿಲ್ದಾಣದ ಭಾಗದಲ್ಲಿ ಹೂವಿನ ವ್ಯಾಪಾರ ಎಂದಿನಂತಿತ್ತು. ಔಷಧಂಗಡಿ, ಆಸ್ಪತ್ರೆಗಳು, ತರಕಾರಿ, ಹಾಲು, ಮಾಂಸದಂಗಡಿ ತೆರೆದಿದ್ದವು. ಅನವಶ್ಯಕವಾಗಿ ಸಂಚರಿಸುತ್ತಿದ್ದವರಿಗೆ ಪೊಲೀಸರು ಎಚ್ಚರಿಕೆ ನೀಡಿ ಕಳುಹಿಸಿದರು.

ಗಜೇಂದ್ರಗಡದಲ್ಲಿ 50 ವಾಹನ ಸೀಜ್

ಗಜೇಂದ್ರಗಡ: ಭಾನುವಾರ ಲಾಕ್​ಡೌನ್​ಗೆ ಪಟ್ಟಣ ಹಾಗೂ ತಾಲೂಕಿನ ಗ್ರಾಮಗಳಲ್ಲಿ ಉತ್ತಮ ಬೆಂಬಲ ವ್ಯಕ್ತವಾಯಿತು. ವಾಹನಗಳ ಸಂಚಾರವಿಲ್ಲದೆ ರಸ್ತೆಗಳೆಲ್ಲ ಖಾಲಿಖಾಲಿಯಾಗಿದ್ದವು. ಅನಗತ್ಯವಾಗಿ ಓಡಾಡುತ್ತಿದ್ದ 50 ವಾಹನಗಳನ್ನು ಪೊಲೀಸರು ಸೀಜ್ ಮಾಡಿದರು.

ಕೆಲ ತುರ್ತು ಸೇವೆಗಳನ್ನು ಹೊರತುಪಡಿಸಿ ಉಳಿದೆಲ್ಲ ಅಂಗಡಿ ಮುಂಗಟ್ಟುಗಳು ಬೆಳಗ್ಗೆಯಿಂದಲೇ ಬಂದ್ ಆಗಿದ್ದವು. ಪಟ್ಟಣದ ಮುಖ್ಯ ವೃತ್ತಗಳಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದರು. ಸದಾ ಜನದಟ್ಟಣೆಯಿಂದ ಕೂಡಿರುತ್ತಿದ್ದ ಪಟ್ಟಣದ ಕಾಲಕಾಲೇಶ್ವರ ವೃತ್ತ, ಜೋಡುರಸ್ತೆ, ದುರ್ಗಾ ವೃತ್ತ, ಬಸವೇಶ್ವರ ವೃತ್ತ, ಕೊಳ್ಳಿಯವರ ಕತ್ರಿ, ಕುಷ್ಟಗಿ ರಸ್ತೆ, ಗದಗ ರಸ್ತೆ, ರೋಣ ರಸ್ತೆಗಳಲ್ಲಿ ಜನಸಂಚಾರ ಕಂಡುಬರಲಿಲ್ಲ.

ಭಣಗುಡುತ್ತಿದ್ದ ರಸ್ತೆ, ಪ್ರಮುಖ ಮಾರುಕಟ್ಟೆ

ಲಕ್ಷೆ್ಮೕಶ್ವರ: ಸರ್ಕಾರ ಘೊಷಿಸಿರುವ ಪ್ರತಿ ಭಾನುವಾರ ಪೂರ್ಣ ಪ್ರಮಾಣದ ಲಾಕ್​ಡೌನ್​ಗೆ ಪಟ್ಟಣ ಸೇರಿ ತಾಲೂಕಿನೆಲ್ಲೆಡೆ ಸಂಪೂರ್ಣ ಬೆಂಬಲ ವ್ಯಕ್ತವಾಯಿತು.

ಪಟ್ಟಣದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತ ಕ್ರಮವಾಗಿ ಈಗಾಗಲೇ ಮುಖ್ಯ ಬಜಾರ್ ರಸ್ತೆಗಳು ಸೇರಿ ಪಟ್ಟಣದ ಅನೇಕ ಕಡೆ ಸೀಲ್​ಡೌನ್ ಮಾಡಲಾಗಿದೆ. ಹೀಗಾಗಿ ಭಾನುವಾರ ಪಟ್ಟಣದಲ್ಲಿ ನೀರವ ಮೌನ ಆವರಿಸಿತ್ತು.

ನಿತ್ಯ ಸಾವಿರಾರು ಸಂಖ್ಯೆಯ ಜನರಿಂದ ತುಂಬಿರುತ್ತಿದ್ದ ಲಕ್ಷೆ್ಮೕಶ್ವರ ಪಟ್ಟಣ ಸಂಪೂರ್ಣ ಲಾಕ್ ಆಗಿತ್ತು. ಹಾಲು, ಹಣ್ಣು, ತರಕಾರಿ, ಔಷಧಿ ಸೇರಿ ಜೀವನಾವಶ್ಯಕ ವಸ್ತುಗಳ ಮಾರಾಟಕ್ಕೆ ಅನುಮತಿಯಿದ್ದರೂ ಸಹ ಪಟ್ಟಣದಲ್ಲಿ ಎಲ್ಲ ರೀತಿಯ ವ್ಯಾಪಾರ-ವಹಿವಾಟು ಬಂದ್ ಆಗಿತ್ತು. ಸಾರಿಗೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಅನವಶ್ಯವಾಗಿ ಹೊರಗಡೆ ಸುತ್ತಾಡಲು ಬಂದವರಿಗೆ ಪೊಲೀಸರು ಲಾಟಿ ರುಚಿ ತೋರಿಸಿ, ಎಚ್ಚರಿಕೆ ನೀಡಿದರು.

ಅಗತ್ಯ ವಸ್ತು ಪೂರೈಸಿದ ಮುಖ್ಯಾಧಿಕಾರಿ

ಮುಳಗುಂದ: ಪಟ್ಟಣ ವ್ಯಾಪ್ತಿಯ ಶೀತಾಲಹರಿ ಗ್ರಾಮದಲ್ಲಿ ಕರೊನಾ ಸೋಂಕಿನಿಂದ ಕೊಪ್ಪಳ ಡಿಪೋ ಕೆ.ಎಸ್.ಆರ್.ಟಿ.ಸಿ. ಚಾಲಕ ಮತಪಟ್ಟಿದ್ದು ಹಾಗೂ ಆತನ ಸಂಪರ್ಕದಲ್ಲಿದ್ದ ಹಲವರಿಗೆ ಸೋಂಕು ತಗುಲಿದೆ. ಇನ್ನು 100ಕ್ಕೂ ಹೆಚ್ಚು ಜನ ಕ್ವಾರಂಟೈನ್​ನಲ್ಲಿರುವುದರಿಂದ ಗ್ರಾಮದಲ್ಲಿ ತೀವ್ರ ಆತಂಕ ಮನೆ ಮಾಡಿದ್ದು, ವ್ಯಾಪಾರಸ್ಥರು ಇಲ್ಲಿಗೆ ಬರಲು ಹೆದರುತ್ತಿದ್ದಾರೆ.

ತಮಗೂ ಸೋಂಕು ತಗುಲಬಹುದು ಎಂದು ಹೆದರಿ ತರಕಾರಿ, ಇತರೆ ದಿನಬಳಕೆ ವಸ್ತುಗಳನ್ನು ಮಾರಲು ಯಾರೂ ಗ್ರಾಮಕ್ಕೆ ಬರುತ್ತಿಲ್ಲ. ಇದರಿಂದ ಗ್ರಾಮಸ್ಥರು ಅಗತ್ಯ ವಸ್ತುಗಳ ಕೊರತೆಯಿಂದ ಪರದಾಡುವ ಸ್ಥಿತಿ ನಿರ್ವಣವಾಗಿತ್ತು. ಇದನ್ನು ಮನಗಂಡ ಪ.ಪಂ. ಮುಖ್ಯಾಧಿಕಾರಿ ಎಂ.ಎಸ್. ಬೆಂತೂರ ಸಿಬ್ಬಂದಿ ಜತೆ ತಾವೇ ಕಿರಾಣಿ ಅಂಗಡಿಗೆ ತೆರಳಿ ದಿನಬಳಕೆ ಹಾಗೂ ತರಕಾರಿಗಳನ್ನು ತೆಗೆದುಕೊಂಡು ಗ್ರಾಮಸ್ಥರಲ್ಲಿ ಹಣ ಪಡೆದು ಪೂರೈಕೆ ಮಾಡಿದರು.

ಗ್ರಾಮಸ್ಥರು ಮಾಸ್ಕ್ ಧರಿಸಿ, ಪರಸ್ಪರ ಅಂತರ ಕಾಪಾಡಿಕೊಂಡು ಸರದಿಯಲ್ಲಿ ಬಂದು ಅಗತ್ಯ ವಸ್ತುಗಳನ್ನು ಪಡೆದುಕೊಂಡರು. ಉಮಾ ಯಟ್ಟಿ, ಬಸವರಾಜ ಹೊರಪೇಟಿ, ಶಂಭು ಚವ್ಹಾಣ, ಪೊಲೀಸ್ ಸಿಬ್ಬಂದಿ ಹಾಗೂ ಪೌರಕಾರ್ವಿುಕರು ಈ ಸಂದರ್ಭದಲ್ಲಿ ಇದ್ದರು.

ಶೀತಾಲಹರಿ ಗ್ರಾಮದವರೆಂದರೆ ಅನುಮಾನ ಪಡುವ ಸ್ಥಿತಿ ನಿರ್ವಣವಾಗಿದೆ. ತರಕಾರಿ ವ್ಯಾಪರಸ್ಥರು ಅಲ್ಲಿಗೆ ಹೋಗಿ ವ್ಯಾಪಾರ ನಡೆಸಲು ಭಯ ಪಡುತ್ತಿದ್ದಾರೆ. ದಿನಬಳಕೆ ವಸ್ತಗಳನ್ನು ತರಲು ಗ್ರಾಮಸ್ಥರು ಪರದಾಡುತ್ತಿರುವುದು ನಮ್ಮ ಗಮನಕ್ಕೆ ಬಂದಿದ್ದರಿಂದ ವಾರದಲ್ಲಿ ಒಂದು ದಿನ ಜನರಿಂದ ಹಣ ಪಡೆದು ಅವರಿಗೆ ಬೇಕಾದ ವಸ್ತುಗಳನ್ನು ಪೂರೈಸುತ್ತೇವೆ. | ಎಂ.ಎಸ್. ಬೆಂತೂರ, ಪ.ಪಂ. ಮುಖ್ಯಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net