

ಹಾಸನ: ಸಂಡೂರು ಭಾಗದಲ್ಲಿ ನೈಸರ್ಗಿಕವಾಗಿ ಬೆಳೆದ ಕಾಡಿನಲ್ಲಿ ಗಾಣಿಗಾರಿಕೆಗೆ ನಿಷೇಧ ಹೇರುವುದರ ಜೊತೆಗೆ ಪರಿಸರ ಸೂಕ್ಷ್ಮ ವಲಯವೆಂದು ಘೋಷಿಸಲು ಆಗ್ರಹಿಸಿ ಜನ ಸಂಗ್ರಾಮ ಪರಿಷತ್ ಸಂಘಟನೆಯಿಂದ ಸೋಮವಾರ ಅಪರ ಜಿಲ್ಲಾಧಿಕಾರಿ ಕೆ.ಟಿ. ಶಾಂತಲಾ ಅವರಿಗೆ ಮನವಿ ಸಲ್ಲಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜನ ಸಂಗ್ರಾಮ ಪರಿಷತ್ ಮೈಸೂರು ವಿಭಾಗೀಯ ಕಾರ್ಯದರ್ಶಿ ಎಚ್.ಆರ್. ಅಹಮದ್ ಆಲಿಖಾನ್, ಮಹಾತ್ಮಾ ಗಾಂಧೀಜಿ 1930 ರಲ್ಲಿ ಸಂಡೂರಿಗೆ ಭೇಟಿ ಕೊಟ್ಟಾಗ ಈ ಬೆಟ್ಟ ಗುಡ್ಡಗಳಲ್ಲಿನ ಹಚ್ಚಹಸಿರಿನ ಸೊಬಗನ್ನು ಆನಂದಿಸಿ ಸೀ ಸಂಡೂರ್ ಇನ್ ಸೆಪ್ಟೆಂಬರ್ ಹೇಳುವುದರ ಮೂಲಕ ಈ ಕಾಡಿನ ಮಹತ್ವವನ್ನು ಬಣ್ಣಿಸಿದ್ದಾರೆ. ಪಶ್ಚಿಮ ಘಟ್ಟದ ವಿಶೇಷತೆಯನ್ನ ಹೋಲುವ ಸಂಡೂರು ತಾಲೂಕಿನ ರಾಮಮಲೈ ಮತ್ತು ಸ್ವಾಮಿಮಲೈ ಎರಡು ಬೆಟ್ಟಗಳನ್ನು ಹೊಡಿದ್ದು ಇಲ್ಲಿ ಗಾಣಿಗಾರಿಕೆಗೆ ನಿಷೇಧ ಮಾಡಬೇಕು ಎಂದು ಒತ್ತಾಯಿಸಿದರು.
ಈ ಕಾಡಿನಲ್ಲಿ ಸಾವಿರಾರು ವೈವಿಧ್ಯಮಯವಾದ ಔಷಧೀಯ ಗಿಡಮೂಲಿಕೆಗಳು,ಶ್ರೀ ಗಂಧ, ರಕ್ತಚಂದನ, ತೇಗ,ಬೀಟೆ, ಒಳಗೊಂಡಂತ ವಿವಿಧ ಪ್ರಭೇದದ ಮರಗಳು, ವನ್ಯಜೀವಿಗಳು, ಅಪರೂಪದ ಪಕ್ಷಿ ಸಂಕುಲಗಳ ವಾಸಸ್ಥಾನವಾಗಿದೆ. ಈ ಬೆಟ್ಟಗಳಿಂದ ಹರಿದು ಬರುವ ಭೀಮತೀರ್ಥ, ಹರಿಶಂಕರ, ನವಿಲು ಸ್ವಾಮಿ, ಭೈರವತಿರ್ಥ, ಕಟಾಸಿನಕೊಳ್ಳ ,ಮಾಲಗೊಳ್ಳದಂತಹ ಹಲವಾರು ನೀರಿನ ಜಲಪಾತಗಳು ನಾರೀಹಳ್ಳಕ್ಕೆ ಬಂದು ಸೇರುತ್ತವೆ. ಇಂತಹ ಹತ್ತು ಹಲವು ವೈವಿಧ್ಯಾಮಯಗಳನ್ನು ಸಂಡೂರಿನ ಕಾಡು ಹೊಂದಿದೆ ಇದ್ದರಿಂದ ಈ ಪರಿಸರವನ್ನು ಸೂಕ್ಷ್ಮ ವಲಯ ಎಂದು ಘೋಷಿಸಬೇಕು ಎಂದು ಹೇಳಿದರು.
ಈ ಬೆಟ್ಟದಲ್ಲಿ ಅದಿರು ಉತ್ಪಾದನೆ, ಸಾಗಾಣಿಕೆಯಿಂದಾಗಿ ಪರಿಸರ, ಪ್ರಾಣಿ ಪಕ್ಷಿಗಳ ಸಂಕುಲಕ್ಕೆ ಅಪಾಯವನ್ನು ತಂದೊಡ್ಡುತ್ತಿದೆ. ಅತೀವೃಷ್ಟಿ-ಅನಾವೃಷ್ಟಿಯಂತಹ ನೈಸರ್ಗಿಕ ವಿಕೋಪಗಳು ಸಂಭವಿಸುವುದರಿಂದ ಅಂತರ್ಜಲ ಕುಸಿತ, ಕುಡಿಯುವ ನೀರಿನ ಆಹಾಕಾರಕ್ಕೆ ಕಾರಣವಾಗಿದೆ. ನಮ್ಮ ನಾಡಿನ ನೆಲ ಜಲ ಪರಿಸರ ಖನಿಜ ಸಂಪನ್ಮೂಲಗಳನ್ನು ನಮ್ಮ ಮುಂದಿನ ತಲೆಮಾರಿಗೆ ಸಂರಕ್ಷಿಸಿ ಬಿಟ್ಟು ಕೊಟ್ಟು ಹೋಗುವ ಮಹತ್ವದ ಜವಾಬ್ದಾರಿ ನಮ್ಮನಿಮ್ಮೆಲ್ಲರ ಮೇಲಿದೆ ಸಂಡೂರಿನ ಅರಣ್ಯದಲ್ಲಿ ಈಗಾಗಲೆ ನೀಡಿರುವ ಅನುಮತಿಯನ್ನು ರದ್ದುಗೊಳಿಸವುದರ ಜೊತೆಗೆ ಈ ಬೆಟ್ಟದ ಗರ್ಭದಲ್ಲಿರುವ ಅದಿರಿನ ನಿಕ್ಷೇಪ ಶೋಧನೆಯನ್ನು ಮಾಡುವುದಾಗಲಿ ಅರಣ್ಯವನ್ನು ಕಡಿದು ಗಣಿಗಾರಿಕೆಗೆ ಅವಕಾಶ ನೀಡಬಾರದು ಆಗ್ರಹಿಸಿದರು.
ಇದೆ ವೇಳೆ ಬಾಳೆಹಣ್ಣು ವರ್ತಕರ ಸಂಘದ ಜಿಲ್ಲಾ ಅಧ್ಯಕ್ಷ ಸಮೀರ್ ಅಹಮದ್ ಇತರರು ಇದ್ದರು.