ಸಂಡೂರು ಉಪ ಚುನಾವಣೆ ಕಾಂಗ್ರೆಸ್‌ಗೆ ಆಗ್ನಿ ಪರೀಕ್ಷೆ

Published on

ಬಳ್ಳಾರಿ : ಸಂಡೂರು ಕ್ಷೇತ್ರದ ಉಪಚುನಾವಣೆಗಾಗಿ ಕಾದಿದ್ದ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಚುನಾವಣೆ ದಿನಾಂಕ ಘೋಷಣೆಯಾದ ಬೆನ್ನಲ್ಲೇ ಎರಡು ಪಕ್ಷದ ಅಭ್ಯರ್ಥಿಗಳು ಟಿಕೆಟ್‌ಗಾಗಿ ಲಾಬಿ ನಡೆಸುತ್ತಿದ್ದಾರೆ. ಈ ಎರಡು ಪಕ್ಷಗಳು ಚುನಾವಣೆಯಲ್ಲಿ ಗೆದ್ದು, ಇತಿಹಾಸ ಸೃಷಿಸುವ ಕಾತುರದಲ್ಲಿದ್ದಾರೆ. ಕಳೆದ ನಾಲ್ಕು ಚುನಾವಣೆಯಲ್ಲಿ ಕಾಂಗ್ರೆಸ್ ತೆಕ್ಕೆಯಲ್ಲಿರುವ ಈ ಕ್ಷೇತ್ರವನ್ನು, ಬಿಜೆಪಿ ರಾಜ್ಯಾದ್ಯಕ್ಷ ಬಿ. ವೈ. ವಿಜಯೇಂದ್ರ, ಶಾಸಕ ಜಿ. ಜನಾರ್ದನರೆಡ್ಡಿ ಈ ಬಾರಿ ಗೆಲ್ಲಲ್ಲೇ ಬೇಕು ಎಂಬ ಹಠಕ್ಕೆ ಬಿದ್ದಿದ್ದಾರೆ. ಮತ್ತೊಂದಡೆ ಬಿಜೆಪಿಗೆ ಠಕ್ಕರ್ ನೀಡಲು ಸಚಿವ ಸಂತೋಷ ಲಾಡ್, ಸಂಸದ ಈ. ತುಕಾರಾಮ್ ಕ್ಷೇತ್ರದಲ್ಲಿ ಬೀಡು ಬಿಟ್ಟಿದ್ದು, ಸತತ ಐದನೇ ಬಾರಿಗೆ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿ ರಾಜ್ಯ ಕಾಂಗ್ರೆಸ್ ನಾಯಕರಿಗೆ ಸಂಡೂರು ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆ ಎಂಬುದಾಗಿ ನಿರೂಪಿಸಲು ಸಜ್ಜಾಗಿದ್ದಾರೆ.
2013 ಚುನಾವಣೆ ಫಲಿತಾಂಶ : ಈ. ತುಕಾರಾಮ್ (ಕಾಂಗ್ರೆಸ್) 62246, ದನುಂಜಯ ಎ. ಆರ್. (ಜೆಡಿಎಸ್) 27615, ಚಿನ್ನಬಸಪ್ಪ ಜಿ. (ಬಿಎಸ್‌ಆರ್ ಸಿಪಿ) 23,359 ಮತಗಳನ್ನು ಪಡೆದಿದ್ದರು.
2018 ಚುನಾವಣೆ ಫಲಿತಾಂಶ : ಈ. ತುಕಾರಾಮ್ (ಕಾಂಗ್ರೆಸ್ ) 78,106, ಡಾ. ರಾಘವೇಂದ್ರ (ಬಿಜೆಪಿ) 64,096, ಬಂಗಾರು ಹನುಮಂತು (ಸ್ವತಂತ್ರ) 7,191 ಮತಗಳನ್ನು ಪಡೆದಿದ್ದರು.
2023ರ ಚುನಾವಣೆ ಫಲಿತಾಂಶ : ಈ. ತುಕಾರಾಮ್ (ಕಾಂಗ್ರೆಸ್) 85,223, ಶಿಲ್ಪಾ ರಾಘವೇಂದ್ರ (ಬಿಜೆಪಿ) 49,701, ಕೆ. ಎಸ್. ದಿವಾಕರ್ (ಕೆಆರ್‌ಪಿಪಿ) 31,375 ಮತಗಳನ್ನು ಪಡೆದಿದ್ದರು.
ಕಾಂಗ್ರೆಸ್ ಪಕ್ಷ ಜಯಭೇರಿ : ಸಂಡೂರು ಕ್ಷೇತ್ರದಲ್ಲಿ 1957 ರಿಂದ 2023ರ ಸಾರ್ವತ್ರಿಕ ಹಾಗೂ ಒಂದು ಉಪ ಚುನಾವಣೆ ಸೇರಿ 16 ಚುನಾವಣೆಗಳು ನಡೆದಿವೆ. ಇದರಲ್ಲಿ 1985 ರ ಚುನಾವಣೆಯಲ್ಲಿ ಸಿಪಿಐ ಪಕ್ಷದ ಯು. ಭೂಪತಿ ಹಾಗೂ 2004ರಲ್ಲಿ ಜೆಡಿಎಸ್ ಪಕ್ಷದಿಂದ ಸಂತೋಷ ಲಾಡ್ ತಲಾ ಒಂದು ಬಾರಿ ಗೆದಿದ್ದು, ಬಿಟ್ಟರೆ ಉಳಿದ 14 ಬಾರಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆಲವು ಸಾಧಿಸಿದ್ದಾರೆ.
ಎಸ್‌ಟಿ ಮತಗಳು ನಿರ್ಣಯಕ : ಸಂಡೂರು ಕ್ಷೇತ್ರದಲ್ಲಿ 1,17,789 ಪುರುಷ, 1,18,282 ಮಹಿಳಾ ಹಾಗೂ 29 ತೃತೀಯ
ಲಿಂಗಗಳು ಸೇರಿ 2,36,100 ಮತದಾರರಿದ್ದಾರೆ. ಜಾತಿ ಲೆಕ್ಕಚಾರದಲ್ಲಿ ಎಸ್‌ಟಿ ಸಮುದಾಯವೇ ಪ್ರಬಲರಾಗಿದ್ದರೂ, ಸ್ಪರ್ಧಿಗಳು ಎಸ್‌ಟಿ ಸಮುದಾಯವರು ಆಗಿರುವುದರಿಂದ ಈ ಸಮುದಾಯದ ಮತಗಳು ಹಂಚಿಕೆ ಆಗಲಿವೆ. ಎಸ್‌ಟಿ 65 ಸಾವಿರ, ಲಿಂಗಾಯತ 35 ಸಾವಿರ, ಕುರುಬರು 30 ಸಾವಿರ, ಮುಸ್ಲಿಂ 10 ಸಾವಿರ, ಎಸ್‌ಸಿ (ಎಲ್ಲ ವರ್ಗಗಳು) 40 ಸಾವಿರ ಹಾಗೂ ಬ್ರಾಹ್ಮಣ, ಶೆಟ್ಟಿ, ಕಮ್ಮ, ಬಲಿಜ ಜಾತಿಗಳು ಸೇರಿ 40 ಸಾವಿರಕ್ಕೂ ಹೆಚ್ಚು ಮತದಾರರು ಇದ್ದಾರೆ.
ಕಾಂಗ್ರೆಸ್‌ಗೆ ನೀಡಲಿದೆ ಪೆಟ್ಟು : ರಾಜ್ಯದಲ್ಲಿ ಒಳಮೀಸಲಾತಿ ಜಾರಿಗೊಳಿಸುವಂತೆ ಆಗ್ರಹಿಸಿ ಕ್ಷೇತ್ರದ ವಿವಿಧ ಸಂಘಟನೆಗಳು ಸೇರಿ ಅ. 16 ರಂದು ರಾಜ್ಯ ಸರ್ಕಾರ ವಿರುದ್ಧ ಸಂಡೂರು ಬಂದ್‌ಗೆ ಕರೆ ನೀಡಿವೆ. ಕಳೆದ ಕೆಲ ತಿಂಗಳಿನಿಂದ ಜಿಂದಾಲ್‌ಗೆ ಭೂಮಿ ನೀಡಬಾರದು ಹಾಗೂ ಕೈಗಾರಿಕೆಗಳಿಗೆ ವಶಪಡಿಸಿಕೊಂಡಿರುವ ಭೂಮಿಗಳಿಗೆ ಸೂಕ್ತ ಬೆಲೆ ನೀಡುವಂತೆ ಆಗ್ರಹಿಸಿ ಹಲವು ದಿನಗಳಿಂದ ರಾಜ್ಯ ಸರ್ಕಾರದ ವಿರುದ್ಧ ಅನಿರ್ಧಿಷ್ಟಾವಧಿ ಧರಣಿ ನಡೆಸುತ್ತಿವೆ. ಸಂಡೂರಿನ ಅರಣ್ಯ ಪ್ರದೇಶವನ್ನು ಗಣಿಗಾರಿಕೆಗೆ ಅನುಮತಿ ನೀಡಬಾರದೆಂದು ಪರಿಸರ ಪ್ರೇಮಿಗಳು ಸರ್ಕಾರಕ್ಕೆ ಪತ್ರ ಬರೆದು ಅಕ್ರೋಶ ಹೊರಹಾಕಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದೆ, ಈ ಎಲ್ಲ ಸಮಸ್ಯೆಗಳನ್ನು ಬಗೆಹರಿಸದೆ ಕಾಲಹರಣ ಮಾಡುತ್ತಿದೆ ಎಂಬ ಮಾತು ಜೋರಾಗಿದೆ. ಸದ್ಯ ಚುನಾವಣೆ ಹೊತ್ತಿನಲ್ಲಿಯೇ ಕ್ಷೇತ್ರದಲ್ಲಿ ನಡೆಯುತ್ತಿರುವ ಈ ಎಲ್ಲ ಹೋರಾಟಗಳನ್ನು ಮೆಟ್ಟಿ ನಿಂತು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೆಲ್ಲುವುದು ಅಷ್ಟು ಸುಲಭವಲ್ಲ. ಅಲ್ಲದೆ, ಸತತ ನಾಲ್ಕು ಬಾರಿ ಕಾಂಗ್ರೆಸ್ ಪಕ್ಷದಿಂದ ಈ. ತುಕಾರಾಮ್‌ಗೆ ಟಿಕೆಟ್ ನೀಡಿದ್ದು, ಈಗ ಅವರ ಪತ್ನಿ ಅನ್ನಪೂರ್ಣ ಗೆ ಟಿಕೆಟ್ ನೀಡಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದ್ದರಿಂದ, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಲ್ಲಿಯೇ ಕುಟುಂಬದವರಿಗೆ ಟಿಕೆಟ್ ನೀಡುತ್ತಿರುವುದು ಅಸಮಾಧಾನ ಮೂಡಿಸಿದೆ. ಆದರೆ, ಸಚಿವ ಸಂತೋಷ ಲಾಡ್ ಯಾರಿಗೆ ಟಿಕೆಟ್ ನೀಡಲು ಒಲವು ತೋರಲಿದ್ದಾರೆಯೇ ಎಂಬುದರ ಮಟ್ಟಿಗೆ ಟಿಕೆಟ್ ನಿರ್ಧಾರವಾಗಲಿದೆ.
ರೆಡ್ಡಿ ಆಗಮನ ಬಿಜೆಪಿಗೆ ಬಲವೇ ? : ಕಳೆದ ಕೆಲ ವರ್ಷಗಳಿಂದ ದೂರ ಉಳಿದಿದ್ದ ಮಾಜಿ ಸಚಿವ ಜಿ. ಜನಾರ್ದನರೆಡ್ಡಿ ಇತ್ತೀಚೆಗೆ ಜಿಲ್ಲೆಗೆ ಪ್ರವೇಶಿಸಿದ್ದಾರೆ. ಜಿಲ್ಲೆಗೆ ಭೇಟಿ ನೀಡಿದ ಮರು ದಿನವೇ ಸಂಡೂರಿಗೆ ಭೇಟಿ ನೀಡಿ ಉಪ ಚುನಾವಣೆಗೆ ಕಾರ್ಯಕರ್ತರನ್ನು ಹುರಿದುಂಬಿಸಿದ್ದಾರೆ. ಜಿಲ್ಲೆಯಲ್ಲಿ ಜನಾರ್ದನರೆಡ್ಡಿ ಆಗಮನದಿಂದ ಬಿಜೆಪಿ ಪಕ್ಷಕ್ಕೆ ಬಲ ಬಂದಿದೆ. ಆದರೆ, ಇಲ್ಲಿಯವರೆಗೆ ಮಾಜಿ ಸಚಿವ ಶ್ರೀರಾಮುಲು ಹಾಗೂ ಜನಾರ್ದನರೆಡ್ಡಿ ಬಹಿರಂಗವಾಗಿ ಮಾತನಾಡಿಲ್ಲ. ಹೀಗಾಗಿ, ಇಬ್ಬರ ನಡುವೆ ವೈಮನಸ್ಸು ಇದೆ ಎಂಬುದು ಗುಟ್ಟಾಗಿದೆ. ಸಂಡೂರಿಗೆ ಹೊರಗಿನವರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿದರೆ, ಅಲ್ಲಿನ ಮತದಾರರು ಮಣೆ ಹಾಕುವುದು ಕಷ್ಟ ಎಂಬುದು ಇಲ್ಲಿಯವರೆಗೆ ನಡೆದ ಚುನಾವಣೆಗಳಲ್ಲಿ ಸಾಬೀತು ಆಗಿದೆ.
ಟಿಕೆಟ್‌ಗಾಗಿ ಹೆಚ್ಚಿದ ಪೈಪೋಟಿ : ಸಂಡೂರು ಎಸ್‌ಟಿ ಮೀಸಲು ಕ್ಷೇತ್ರದಲ್ಲಿ ಕಾಂಗ್ರೆಸ್‌ಗಿಂತ ಹಾಗೂ ಬಿಜೆಪಿಯಲ್ಲಿ ಟಿಕೆಟ್ ಅಕಾಂಕ್ಷಿಗಳು ಹೆಚ್ಚಿವೆ. ಕಾಂಗ್ರೆಸ್ ಪಕ್ಷದಿಂದ ಸಂಸದ ಈ. ತುಕಾರಾಮ್ ಪತ್ನಿ ಅನ್ನಪೂರ್ಣ ಅವರಿಗೆ ಟಿಕೆಟ್ ನೀಡುವುದು ಬಹುತೇಕ ಖಚಿತವಾಗಿದ್ದು, ಆಧಿಕೃತ ಘೋಷಣೆಗೆ ಬಾಕಿಯಿದೆ. ಆದರೆ, ಕಳೆದ ಬಾರಿ ಕೆಆರ್‌ಪಿಪಿ ಯಿಂದ ಸ್ಪರ್ಧಿಸಿದ್ದ ಕೆ. ಎಸ್. ದಿವಕರ್ ಜನಾರ್ದನರೆಡ್ಡಿ ಬೆಂಬಲದಿಂದ ಬಿಜೆಪಿಯಿಂದ ಟಿಕೆಟ್ ದೊರೆಯುವ ವಿಶ್ವಾಸದಲ್ಲಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯಿಂದ ಟಿಕೆಟ್ ವಂಚಿತರಾಗಿದ್ದ ಮಾಜಿ ಸಂಸದ ವೈ. ದೇವೇಂದ್ರಪ್ಪ ಅಥವಾ ಪುತ್ರ ಅಣ್ಣಪ್ಪಗೆ ಟಿಕೆಟ್ ನೀಡುವಂತೆ ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದ್ದಾರೆ. ಕಳೆದ ಬಾರಿ ಸ್ಪರ್ಧಿಸಿ ಸೋತಿದ್ದ ಶಿಲ್ಪಾ ರಾಘವೇಂದ್ರ ಈ ಬಾರಿ ಸೋಲಿನ ಅನುಕಂಪ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಇದ್ದಾರೆ. ಎಸ್‌ಟಿ ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರು ಹನುಮಂತು ಸೇರಿದಂತೆ ವಿವಿಧ ನಾಯಕರು ಕೇಳುತ್ತಿದ್ದು, ಬಿಜೆಪಿಗೆ ಬಂಡಾಯದ ಬಿಸಿ ತಟ್ಟಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net