ಸಂಜೆ ವೇಳೆಗೆ ಪೂರ್ಣ ಫಲಿತಾಂಶ

29sdp1
Published on

ಕಾರವಾರ: ಗ್ರಾಪಂ ಚುನಾವಣೆಯ ಮತ ಎಣಿಕೆಗೆ ಕ್ಷಣ ಗಣನೆ ಪ್ರಾರಂಭವಾಗಿದೆ. ಡಿ.30 ರಂದು ಬೆಳಗ್ಗೆ 8 ಗಂಟೆಯಿಂದ ಜಿಲ್ಲೆಯ ಎಲ್ಲ ತಾಲೂಕುಗಳ ಒಟ್ಟು 12 ಕೇಂದ್ರಗಳಲ್ಲಿ ಮತ ಎಣಿಕೆ ಪ್ರಾರಂಭವಾಗಲಿದೆ. ಸಂಪೂರ್ಣ ಫಲಿತಾಂಶ ಹೊರಬೀಳಲು ಮಧ್ಯಾಹ್ನ 4 ಗಂಟೆಯಾಗಬಹುದು ಎಂದು ಅಂದಾಜಿಸಲಾಗಿದೆ.

ಬಹುತೇಕ ಎಲ್ಲ ತಾಲೂಕುಗಳಲ್ಲಿ ಮತ ಎಣಿಕೆಗೆ 8 ರಿಂದ 12 ಕೊಠಡಿಗಳ ವ್ಯವಸ್ಥೆ ಮಾಡಲಾಗಿದೆ. 972 ಕ್ಷೇತ್ರಗಳಿಗೆ ಸಂಬಂಧಿಸಿದಂತೆ 359 ಟೇಬಲ್​ಗಳಲ್ಲಿ 1077 ಅಧಿಕಾರಿಗಳು ಏಕಕಾಲಕ್ಕೆ ಮತ ಎಣಿಕೆ ನಡೆಸಲಿದ್ದಾರೆ. ಮೂರು ಅಥವಾ ನಾಲ್ಕು ಸುತ್ತಿನಲ್ಲಿ ಮತ ಎಣಿಕೆ ಮುಕ್ತಾಯವಾಗಲಿದೆ. ಕಾರವಾರದ ಚಿತ್ತಾಕುಲಾ, ಕುಮಟಾದ ಗೋಕರ್ಣ ಮುಂತಾದ ಗ್ರಾಪಂಗಳಲ್ಲಿ ಸ್ಥಾನಗಳ ಸಂಖ್ಯೆ ಹೆಚ್ಚಿದ್ದು ಎಣಿಕೆಗೆ ಹೆಚ್ಚು ಕಾಲ ಹಿಡಿಯಲಿದೆ.

ಸರಳವಲ್ಲ ಎಣಿಕೆ: ವಿಧಾನಸಭಾ ಚುನಾವಣೆಯಂತೆ ಮತ ಎಣಿಕೆ ಸರಳವಲ್ಲ. ಗ್ರಾಪಂ ಚುನಾವಣೆಯಲ್ಲಿ ಒಂದೊಂದು ವಾರ್ಡ್​ಗಳಲ್ಲಿ ಎರಡು ಮೂರು ಸ್ಥಾನಗಳಿರುತ್ತವೆ. ಒಂದೇ ಮತಪತ್ರದಲ್ಲಿ ಆ ಎಲ್ಲರಿಗೂ ಮತ ಚಲಾವಣೆಯಾಗಿರುತ್ತವೆ. ಇದರಿಂದ ಗ್ರಾಫ್ ಶೀಟ್​ನಲ್ಲಿ ಎಲ್ಲವನ್ನೂ ಬರೆದುಕೊಂಡು ಕೊನೆಯಲ್ಲಿ ಮತಗಳ ಎಣಿಕೆ ಮಾಡಬೇಕಾಗುತ್ತದೆ. ಅಲ್ಲದೆ, ಮೀಸಲಾತಿಯ ಮತ ಮೊದಲು ಎಣಿಕೆ ಮಾಡಬೇಕು. ಅಲ್ಲಿ ಸೋತ ಅಭ್ಯರ್ಥಿ ಸಾಮಾನ್ಯ ಕ್ಷೇತ್ರದಲ್ಲಿ ಗೆದ್ದವನಿಗಿಂತ ಹೆಚ್ಚು ಮತ ಪಡೆದರೆ ಮೀಸಲು ಅಭ್ಯರ್ಥಿಯೇ ಗೆಲುವು ಸಾಧಿಸುತ್ತಾನೆ ಎಂಬ ನಿಯಮವಿದೆ.

ಬಿಗಿ ಬಂದೋಬಸ್ತ್: ಗ್ರಾಪಂ ಮತ ಎಣಿಕೆ ಹಿನ್ನೆಲೆಯಲ್ಲಿ ಎಲ್ಲೆಡೆ ಬಿಗಿ ಬಂದೋಬಸ್ತ್ ಆಯೋಜಿಸಲಾಗಿದೆ. ಒಟ್ಟಾರೆ 5 ಡಿವೈಎಸ್​ಪಿ, 14 ಇನ್ಸ್​ಪೆಕ್ಟರ್, 41 ಪಿಎಸ್​ಐ, 115 ಎಎಸ್​ಐ, 302 ಹೆಡ್ ಕಾನ್ಸೆ್ಟೕಬಲ್, 652 ಸಿಬ್ಬಂದಿ, 70 ಹೋಂ ಗಾರ್ಡ್​ಗಳನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. 12 ಡಿಎಆರ್ ತುಕಡಿಗಳು, 5 ಕೆಎಸ್​ಆರ್​ಪಿ ತುಕಡಿಗಳು ಕಾರ್ಯನಿರ್ವಹಿಸಲಿವೆ.

ವ್ಯವಸ್ಥಿತವಾಗಿ ಮತ ಎಣಿಕೆ ನಡೆಸಲು ಎಲ್ಲ ಸಿದ್ಧತೆ ನಡೆಸಲಾಗಿದೆ. ಎಣಿಕೆ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಏನಾದರೂ ಗೊಂದಲ ಇದ್ದಲ್ಲಿ ಲಿಖಿತ ದೂರು ನೀಡಬಹುದು. | ಡಾ.ಹರೀಶ ಕುಮಾರ ಕೆ. ಜಿಲ್ಲಾಧಿಕಾರಿ ಉತ್ತರ ಕನ್ನಡ

ಎಲ್ಲ ಮತ ಎಣಿಕೆ ಕೇಂದ್ರಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಕೇಂದ್ರಗಳಲ್ಲಿ ನಿಗದಿತ ಭದ್ರತಾ ಸಿಬ್ಬಂದಿಯ ಜತೆ 14 ಕ್ಕೂ ಹೆಚ್ಚು ಮೊಬೈಲ್ ವಾಹನಗಳಲ್ಲಿ ಅಧಿಕಾರಿಗಳು ವಿವಿಧೆಡೆ ಸಂಚಾರ ಮಾಡಲಿದ್ದಾರೆ. | ಶಿವಪ್ರಕಾಶ ದೇವರಾಜು ಎಸ್​ಪಿ ಉತ್ತರ ಕನ್ನಡ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net