ಸಂಚಾರಿ ಪಶು ಚಿಕಿತ್ಸಾಲಯ ಆರಂಭ

07-2
ರೈತರ ಜಾನುವಾರುಗಳ ಆರೋಗ್ಯ ರಕ್ಷಣೆಗಾಗಿ ಸಂಚಾರಿ ಪಶು ಚಿಕಿತ್ಸಾ ವಾಹನಗಳಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಚಾಲನೆ ನೀಡಿದರು. ಡಾ.ಎಂ.ವಿ. ವಿಭೂತಿ, ಡಾ.ಮೋಹನ ಕಮತ, ಡಾ.ನೀಲಕಂಠ ಕಪ್ಪಲಗುದ್ದಿ, ಡಾ.ಶಶಿಕಾಂತ ಕೌಜಲಗಿ ಇತರರಿದ್ದರು.
Published on

ಗೋಕಾಕ, ಬೆಳಗಾವಿ: ಜಾನುವಾರುಗಳು ಅನಾರೋಗ್ಯಕ್ಕೀಡಾದಾಗ ಟೋಲ್ ಫ್ರೀ 1962ಕ್ಕೆ ಕರೆ ಮಾಡಿದಲ್ಲಿ ಸಂಚಾರಿ ಪಶು ಚಿಕಿತ್ಸಾಲಯ ವಾಹನ ರೈತರ ಮನೆ ಬಾಗಿಲಿಗೆ ತೆರಳಿ ತುರ್ತು ಚಿಕಿತ್ಸೆ ನೀಡಲಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.

ನಗರದ ಗೃಹ ಕಚೇರಿಯಲ್ಲಿ ಪಶು ಪಾಲನಾ ಇಲಾಖೆಯಿಂದ ಸಂಚಾರಿ ಪಶು ಚಿಕಿತ್ಸಾ ವಾಹನಗಳಿಗೆ ಗುರುವಾರ ಚಾಲನೆ ನೀಡಿ ಮಾತನಾಡಿದ ಅವರು, ರೈತರ ಜಾನುವಾರುಗಳ ಆರೋಗ್ಯ ರಕ್ಷಣೆಗಾಗಿ ಈ ಸಂಚಾರಿ ಪಶು ಚಿಕಿತ್ಸಾ ವಾಹನಗಳ ಸದ್ಬಳಕೆ ಮಾಡಿಕೊಳ್ಳುವಂತೆ ರೈತರಿಗೆ ಕರೆ ನೀಡಿದರು.

ರಾಷ್ಟ್ರದಲ್ಲಿ ಮೊದಲ ಬಾರಿಗೆ ಬಿಜೆಪಿ ಸರ್ಕಾರ ಸಂಚಾರಿ ಪಶು ಚಿಕಿತ್ಸಾಲಯವನ್ನು ಪ್ರಾರಂಭಿಸುವ ಮೂಲಕ ಮಹತ್ತರ ಹೆಜ್ಜೆ ಇಟ್ಟಿದೆ. ಈ ವ್ಯವಸ್ಥೆಯಲ್ಲಿ ಪ್ರತ್ಯೇಕ ಕಾಲ್ ಸೆಂಟರ್ ತೆರೆಯಲಾಗಿದೆ. ಈ ವಾಹನದಲ್ಲಿ ಪಶು ವೈದ್ಯರು, ಪಶು ವೈದ್ಯ ಸಹಾಯಕರು ಸೇವೆಯಲ್ಲಿದ್ದು, ದನ ಕರುಗಳು, ಮೇಕೆ, ಹಂದಿ, ಕುರಿ ಸಹಿತ ಇತರ ಜಾನುವಾರುಗಳಿಗೆ ಅನಾರೋಗ್ಯ ಕಾಡಿದಾಗ ತ್ವರಿತಗತಿಯಲ್ಲಿ ಚಿಕಿತ್ಸೆ ನೀಡಲು ಸಾಧ್ಯವಾಗಲಿದೆ ಎಂದರು.

ಜಾನುವಾರುಗಳ ಆರೋಗ್ಯ ರಕ್ಷಣೆಗೆ ಅಗತ್ಯವಿರುವ ಔಷಧ, ಸಾಧನ ಸಲಕರಣೆಗಳಲ್ಲದೆ ಶಸ್ತ್ರ ಚಿಕಿತ್ಸಾ ವಾಹನ ಒಳಗೊಂಡ ಪಶು ಸಂಜೀವಿನಿ ಯೋಜನೆಯ ಮುಂದುವರಿದ ಭಾಗವಾಗಿ, ಸರ್ಕಾರ ಈ ಸಂಚಾರಿ ಪಶು ಚಿಕಿತ್ಸಾಲಯ ಯೋಜನೆ ಜಾರಿಗೊಳಿಸಿದೆ. ಮೂಡಲಗಿ ಮತ್ತು ಕೌಜಲಗಿಗೆ ಈ ಸಂಚಾರಿ ಪಶು ಚಿಕಿತ್ಸಾ ವಾಹನಗಳು ಅನಾರೋಗ್ಯಕ್ಕೊಳಗಾಗುವ ಜಾನುವಾರುಗಳ ಸೇವೆಗೆ ಲಭ್ಯವಾಗಲಿವೆ ಎಂದು ಮಾಹಿತಿ ನೀಡಿದರು.

ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು 2021-22ನೇ ಸಾಲಿನ ಮುಖ್ಯಮಂತ್ರಿಗಳ ಅಮೃತ ಜೀವನ ಯೋಜನೆಯಡಿ ರೈತರಿಗೆ ಹೈನು ರಾಸು ಘಟಕ ಸ್ಥಾಪಿಸಲು ಒಟ್ಟು 12 ಫಲಾನುಭವಿಗಳಿಗೆ 1,96,330 ರೂ.ಗಳ ಸಹಾಯಧನದ ಚೆಕ್‌ಗಳನ್ನು ವಿತರಿಸಿದರು. ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ನೀಲಕಂಠ ಕಪ್ಪಲಗುದ್ದಿ, ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕ ಬಸಪ್ಪ ಸಂತಿ, ಹಳ್ಳೂರ ಗ್ರಾಪಂ ಅಧ್ಯಕ್ಷ ಲಕ್ಷ್ಮಣ ಕತ್ತಿ, ಢವಳೇಶ್ವರ ಗ್ರಾಪಂ ಅಧ್ಯಕ್ಷ ರಂಗಪ್ಪ ಕಳ್ಳಿಗುದ್ದಿ, ಅರಬಾವಿ ಪಿಕೆಪಿಎಸ್ ಅಧ್ಯಕ್ಷ ಹನುಮಂತ ಚಿಪ್ಪಲಕಟ್ಟಿ, ಪಪಂ ಸದಸ್ಯ ಅಡಿವೆಪ್ಪ ಬಿಲಕುಂದಿ, ಕೆಂಪಣ್ಣ ದಡ್ಡಗೋಳ, ಈರಣ್ಣ ಜಾಲಿಬೇರಿ, ಅಶೋಕ ಬಂಡಿವಡ್ಡರ, ವಿಠ್ಠಲ ಮೋಕಾಶಿ, ಭೀಮಶಿ ಅಂತರಗಟ್ಟಿ, ಮೂಡಲಗಿ ಪಾಲಿಕ್ಲಿನಿಕ್ ಉಪನಿರ್ದೇಶಕ ಡಾ.ಎಂ.ವಿ.ವಿಭೂತಿ, ಗೋಕಾಕ ಸಹಾಯಕ ನಿರ್ದೇಶಕ ಡಾ.ಮೋಹನ ಕಮತ, ಮೂಡಲಗಿ ಸಹಾಯಕ ನಿರ್ದೇಶಕ ಡಾ.ನೀಲಕಂಠ ಕಪ್ಪಲಗುದ್ದಿ, ಗೋಕಾಕ ಮುಖ್ಯ ಪಶು ವೈದ್ಯಾಧಿಕಾರಿ ಡಾ.ಶಶಿಕಾಂತ ಕೌಜಲಗಿ, ಬೆಟಗೇರಿ ಮುಖ್ಯ ಪಶು ವೈದ್ಯಾಧಿಕಾರಿ ಡಾ.ಡಿ.ಕೆ. ಹೊಸಮನಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net