ಸಂಚಾರಿ ಆರೋಗ್ಯ ಘಟಕಕ್ಕೆ ಚಾಲನೆ

1
Published on

ಚಿತ್ರದುರ್ಗ: ಗಣಿಬಾಧಿತ ಪ್ರದೇಶದ ಜನರ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಜಿಲ್ಲಾ ಖನಿಜ ಪ್ರತಿಷ್ಠಾನ (ಡಿಎಂಎಫ್‌) ಮೂಲಕ ಸಂಚಾರಿ ಆರೋಗ್ಯ ಘಟಕ ನೀಡಲಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕ ಕೆ.ಸಿ.ವೀರೇಂದ್ರಪಪ್ಪಿ ಸಲಹೆ ನೀಡಿದರು.

ಟಿಎಚ್‌ಒ ಕಚೇರಿ ಆವರಣದಲ್ಲಿ ಗುರುವಾರ ಸಂಚಾರಿ ಆರೋಗ್ಯ ಘಟಕ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದರು.

ವಾಹನವೂ ಗಣಿಬಾಧಿತ ಗ್ರಾಮೀಣ ಪ್ರದೇಶಗಳಿಗೆ ತೆರಳಿ ಆರೋಗ್ಯ ಸೇವೆ ಒದಗಿಸಲಿದೆ. ಹೀಗಾಗಿ ಮನೆ ಬಾಗಿಲಲ್ಲಿ ರೋಗಿಗಳಿಗೆ ಚಿಕಿತ್ಸೆ ಸಿಗಲಿದೆ. ಇದರಿಂದ ಜನರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದರು.

ಈ ಘಟಕದಲ್ಲಿ ವೈದ್ಯರು, ಫಾರ್ಮಸಿಸ್ಟ್‌, ಪ್ರಯೋಗಶಾಲಾ ತಜ್ಞರು, ಶುಶ್ರೂಷಕರು, ವಾಹನ ಚಾಲಕ ಹಾಗೂ 'ಡಿ' ದರ್ಜೆ ನೌಕರರು ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ಹೇಳಿದರು.

ಡಿಎಚ್‌ಒ ಡಾ.ಆರ್‌.ರಂಗನಾಥ್‌ ಮಾತನಾಡಿ, ಗಂಭೀರ ಸ್ವರೂಪದ ಕಾಯಿಲೆಗಳಿಗೆ ಸಂಚಾರಿ ಚಿಕಿತ್ಸೆ ಪ್ರಯೋಗಾಲಯಗಳ ಪರೀಕ್ಷೆ ಮಾಡಲಾಗುವುದು. ಬಾಣಂತಿ ಗರ್ಭಿಣಿಯರ ಆರೈಕೆ, ತಾಯಿ ಮಕ್ಕಳ ಲಸಿಕೆ ಕಾರ್ಯಕ್ರಮ, ಕುಟುಂಬ ಕಲ್ಯಾಣ ಯೋಜನಾ ಅನುಷ್ಠಾನ, ಮಾಹಿತಿ ಶಿಕ್ಷಣ ಸಂವಹನ, ಆರೋಗ್ಯ ಜಾಗೃತಿಯನ್ನು ಈ ಘಟಕದ ಮೂಲಕ ನಿರ್ವಹಿಸಲಾಗುವುದು. ತುರ್ತು ಸಂದರ್ಭದಲ್ಲಿ ಮಾತ್ರ ಹೆಚ್ಚಿನ ಚಿಕಿತ್ಸೆಗೆ ವೈದ್ಯರು ಉನ್ನತ ಮಟ್ಟದ ಆಸ್ಪತ್ರೆಗಳಿಗೆ ಶಿಫಾರಸು ಮಾಡಲಿದ್ದಾರೆ ಎಂದು ತಿಳಿಸಿದರು.

ಟಿಎಚ್‌ಒ ಡಾ.ಬಿ.ವಿ.ಗಿರೀಶ್‌ ಮಾತನಾಡಿ, ತಾಲೂಕಿನ 46 ಹಳ್ಳಿಗಳಿಗೆ ಕ್ರಿಯಾಯೋಜನೆ ತಯಾರಿಸಿದ್ದು, ಅದರಂತೆ ನಿಗದಿತ ದಿನಾಂಕದಂದು ಘಟಕ ಆರೋಗ್ಯ ಸೇವೆ ನೀಡಲಿದೆ ಎಂದರು.

ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್‌.ಮಂಜುನಾಥ್‌, ಬಿ.ಮುಗಪ್ಪ, ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜೆ.ಆರ್‌.ಗೌರಮ್ಮ, ಎಚ್‌.ಬಿ.ಪೂಜಾರ್, ಕೆ.ಎ.ಮಾರುತಿಪ್ರಸಾದ್, ಗಂಗಾಧರರೆಡ್ಡಿ, ರಂಗಾರೆಡ್ಡಿ, ಶ್ರೀಧರ್‌ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net