ಸಂಚಾರ ಪೊಲೀಸರಿಂದ ದಂಡಾಸ್ತ್ರ

20rajesh2
Published on

ಚಾಮರಾಜನಗರ: ಸಂಚಾರ ನಿಯಮಗಳನ್ನು ಉಲ್ಲಂಘಿಸುವ ವಾಹನ ಚಾಲಕರ ಮೇಲೆ ಸಂಚಾರ ಪೊಲೀಸರು ದಂಡಾಸ್ತ್ರವನ್ನು ಪ್ರಯೋಗಿಸುತ್ತಿದ್ದಾರೆ.

ಚಾಮರಾಜನಗರ ಸಂಚಾರ ಠಾಣೆಯ ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ ಹಿಂದಿನ ವರ್ಷದಲ್ಲಿ ಸಂಚಾರ ನಿಯಮಗಳನ್ನು ಉಲ್ಲಂಘಿಸುವವರ ಮೇಲೆ 9343 ಪ್ರಕರಣಗಳನ್ನು ದಾಖಲಿಸಿದ್ದು, ಬರೋಬ್ಬರಿ 39.88 ಲಕ್ಷ ರೂ, ದಂಡವನ್ನು ವಸೂಲಿ ಮಾಡಿದ್ದಾರೆ. ಹೆಲ್ಮೇಟ್ ಧರಿಸದೇ ಸಂಚಾರ ಮಾಡುವುದು, ವಾಹನಗಳಲ್ಲಿ ನಂಬರ್ ಪ್ಲೇಟ್ ಇಲ್ಲದಿರುವುದು, ಸಮವಸ್ತ್ರ ಧರಿಸದೇ ಮತ್ತು ಕಾರುಗಳಲ್ಲಿ ಸೀಟ್ ಬೆಲ್ಟ್ ಧರಿಸದೇ ವಾಹನ ಚಲಾಯಿಸುವುದು, ವಾಹನಗಳಿಗೆ ಸೂಕ್ತ ದಾಖಲೆ ಇಟ್ಟುಕೊಳ್ಳದೇ ಇರುವುದು, ವಿವಿಧ ವಾಹನಗಳಲ್ಲಿ ಹೆಚ್ಚುವರಿ ಪ್ರಯಾಣಿಕರನ್ನು ತುಂಬಿಕೊಂಡು ವಾಹನ ಚಲಾಯಿಸುವುದು, ಸೂಕ್ತ ರೀತಿಯಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡದೇ ಅಡ್ಡಾದಿಡ್ಡಿಯಾಗಿ ನಿಲ್ಲಿಸುವುದು, ವೇಗವಾಗಿ ವಾಹನಗಳನ್ನು ಚಾಲನೆ ಮಾಡುವುದು ಹಾಗೂ ಇನ್ನಿತರೆ ಪ್ರಕರಣಗಳಲ್ಲಿ ಸಂಚಾರ ನಿಯಮಗಳನ್ನು ಉಲ್ಲಂಘಿಸುವವರ ಮೇಲೆ ಸಂಚಾರ ಪೊಲೀಸರು ದಂಡ ವಿಧಿಸುತ್ತಿದ್ದಾರೆ.

ಸಂಚಾರ ನಿಯಮಗಳನ್ನು ಪಾಲನೆ ಮಾಡದೆಯೂ, ದಂಡಾಸ್ತ್ರದಿಂದ ತಪ್ಪಿಸಿಕೊಳ್ಳುವ ಚಾಲಕರ ಮೇಲೆ ಹೊಸ ಹೊಸ ವಿಧಾನಗಳನ್ನು ಅಳವಡಿಸಿಕೊಳ್ಳಲಾಗುತ್ತಿದ್ದು, ವಿವಿಧ ಬಗೆಯ ತಂತ್ರಜ್ಞಾನಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಈ ಮೂಲಕ ವಾಹನ ಚಾಲಕರು ಸಂಚಾರ ನಿಯಮಗಳನ್ನು ಪಾಲಿಸಲು ಹಾಗೂ ಅಪಘಾತಗಳನ್ನು ನಿಯಂತ್ರಿಸುವ ಸಂಬಂಧ ಜಾಗೃತಿ ಮೂಡಿಸಲಾಗುತ್ತಿದೆ.

ಹೆಲ್ಮೇಟ್ ಧರಿಸದವರೇ ಹೆಚ್ಚು:

ಹೆಲ್ಮೇಟ್ ಧರಿಸದೇ ವಾಹನ ಚಾಲನೆ ಮಾಡುವವರಿಂದಲೇ ಹೆಚ್ಚು ದಂಡವನ್ನು ವಸೂಲಿ ಮಾಡಲಾಗಿದೆ. ಕಳೆದ ವರ್ಷದಲ್ಲಿ ಹೆಲ್ಮೇಟ್ ಧರಿಸದೇ ಸಂಚಾರ ಮಾಡುವವರ ಮೇಲೆ ಒಟ್ಟು 4525 ಪ್ರಕರಣಗಳನ್ನು ದಾಖಲು ಮಾಡಲಾಗಿದ್ದು, ಅವರಿಂದ ಬರೋಬ್ಬರಿ 22.61 ಲಕ್ಷ ರೂ, ದಂಡವನ್ನು ವಸೂಲಿ ಮಾಡಲಾಗಿದೆ. ಬಹುಮುಖ್ಯವಾಗಿ ಕುಡಿದು ವಾಹನ ಚಾಲನೆ ಮಾಡುವವರಿಗೆ ಬರೋಬ್ಬರಿ 10,000 ರೂ, ದಂಡ ವಿಧಿಸಲಾಗುತ್ತಿದೆ. ಅಪ್ರಾಪ್ತ ಮಕ್ಕಳು ದ್ವಿಚಕ್ರ ಮತ್ತು ಇನ್ನಿತರೆ ವಾಹನ ಚಾಲನೆ ಮಾಡಿದರೇ, ಅವರ ಪಾಲಕರಿಗೆ ನ್ಯಾಯಾಲಯದ ಮೂಲಕವೇ 25,000 ರೂ, ದಂಡ ವಿಧಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ವಾಹನ ಚಾಲಕರು ಕಡ್ಡಾಯವಾಗಿ ನಿಯಮಗಳನ್ನು ಪಾಲಿಸುವ ಮೂಲಕ ದಂಡದಿಂದ ತಪ್ಪಿಸಿಕೊಳ್ಳಬಹುದಾಗಿದೆ.

ಆಟೋ ಚಾಲಕರಿಗೂ ಬರೆ:

ನಗರದಲ್ಲಿ ಸಂಚಾರ ನಿಯಮಗಳನ್ನು ಉಲ್ಲಂಘಿಸುವ ಆಟೋ ಚಾಲಕರಿಗೂ ಹೆಚ್ಚಿನ ದಂಡವನ್ನು ವಿಧಿಸಲಾಗಿದೆ. ಆಟೋಗಳಲ್ಲಿ ಹೆಚ್ಚುವರಿ ಪ್ರಯಾಣಿಕರನ್ನು ತುಂಬಿಕೊಂಡು ಹೋಗುವ ಸಂಬಂಧ 1175 ಪ್ರಕರಣಗಳನ್ನು ದಾಖಲು ಮಾಡಿದ್ದು, 23.56 ಲಕ್ಷ ದಂಡವನ್ನು ಹಾಕಲಾಗಿದೆ. ವೇಗವಾಗಿ ಚಾಲನೆ ಮಾಡುವ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳಿಗೆ 234 ಪ್ರಕರಣ ದಾಖಲಿಸಿದ್ದು, 23.45 ಲಕ್ಷ ರೂ, ದಂಡ ವಿಧಿಸಲಾಗಿದೆ. 164 ನೋ ಪಾರ್ಕಿಂಗ್ ಪ್ರಕರಣದಡಿ 82,600 ರೂ, ದಂಡ ಹಾಕಲಾಗಿದೆ. 386 ಸೂಕ್ತ ದಾಖಲೆ ಹೊಂದಿಲ್ಲದವರಿಗೆ 1.90 ಲಕ್ಷ ರೂ, ದಂಡ ಹಾಕಲಾಗಿದೆ. ಸೀಟ್ ಬೆಲ್ಟ್ ಧರಿಸದ 342 ಪ್ರಕರಣಗಳಲ್ಲಿ 1.71 ಲಕ್ಷ ರೂ, ದಂಡ ವಿಧಿಸಲಾಗಿದೆ. ನಂಬರ್ ಪ್ಲೇಟ್ ಇಲ್ಲದವರು 189, ಸಮವಸ್ತ್ರ ಧರಿಸದವರು 163 ಪ್ರಕರಣಗಳು ದಾಖಲಾಗಿವೆ. ಅದಲ್ಲದೇ 50 ಕ್ಕೂ ಹೆಚ್ಚು ವಿವಿಧ ಪ್ರಕರಣಗಳಲ್ಲಿ ಸಂಚಾರ ನಿಯಮಗಳನ್ನು ಉಲ್ಲಂಘಿಸುವವರ ಮೇಲೆ ಸಂಚಾರ ಪೊಲೀಸರು ದಂಡ ವಿಧಿಸುತ್ತಿದ್ದಾರೆ.

ಶೀಘ್ರದಲ್ಲೇ ಎಐ ಕಣ್ಗಾವಲು:

ಈಗಾಗಲೇ ಸಂಚಾರಿ ಪೊಲೀಸರು ಫೋನ್‌ಗಳಲ್ಲಿ ನಿಯಮಗಳನ್ನು ಉಲ್ಲಂಘಿಸುವ ವಾಹನಗಳ ಪೋಟೋ ತೆಗೆದುಕೊಳ್ಳುತ್ತಿದ್ದಾರೆ. ಅವರಿಗೆ ಖುದ್ದು ಪೊಲೀಸರೇ ಕರೆಮಾಡಿ ದಂಡ ವಿಧಿಸುತ್ತಿದ್ದಾರೆ. ಮುಂದುವರಿದು ಶೀಘ್ರದಲ್ಲೇ ನಗರದ ಪ್ರಮುಖ ವೃತ್ತಗಳಿಗೆ ಎಐ ಕ್ಯಾಮೆರಾಗಳು ಲಗ್ಗೆ ಹಾಕಲಿದ್ದು, ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡುವವರ ವಿರುದ್ಧ ಮತ್ತಷ್ಟು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಎಐ ಕ್ಯಾಮೆರಾಗಳನ್ನು ಅಳವಡಿಕೆ ಮಾಡಲಾಗುತ್ತಿದ್ದು, ಮುಂದಿನದಿನಗಳಲ್ಲಿ ಜಿಲ್ಲೆಗೂ ಎಐ ಕ್ಯಾಮೆರಾಗಳು ಬರಲಿದೆ ಎಂದು ಸಂಚಾರಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ರವಿಕುಮಾರ್ ವಿಜಯವಾಣಿಗೆ ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಸಂಚಾರ ನಿಯಮಗಳನ್ನು ಪಾಲಿಸದೇ ರಸ್ತೆ ಅಪಘಾತಗಳ ಸಂಖ್ಯೆ ಜಾಸ್ತಿಯಾಗುತ್ತಿದೆ. ಈ ನಿಟ್ಟಿನಲ್ಲಿ ಸಂಚಾರ ನಿಯಮಗಳನ್ನು ಪ್ರಯಾಣಿಕರು ಕಡ್ಡಾಯವಾಗಿ ಪಾಲಿಸಬೇಕಿದೆ. ಸಾರ್ವಜನಿಕರ ಸುರಕ್ಷತೆಯನ್ನು ಕಾಪಾಡುವ ದೃಷ್ಟಿಯಲ್ಲಿ ಸಂಚಾರ ನಿಯಮಗಳನ್ನು ಉಲ್ಲಂಸುವವರಿಗೆ ದಂಡ ವಿಧಿಸುವುದು ಸಾಮಾನ್ಯವಾಗಿದೆ.

-ಡಾ.ಬಿ.ಟಿ.ಕವಿತಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಚಾಮರಾಜನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net