'ಸಂಚಾರ ನಿಯಮ ಪಾಲಿಸಿ, ದಂಡ ಕಟ್ಟುವುದರಿಂದ ಪಾರಾಗಿ'

24
Published on

ಮೈಸೂರು: ಜೀವನದಲ್ಲಿ ಶಿಸ್ತಿನಿಂದ ಇದ್ದರಷ್ಟೇ ಏನಾದರೂ ಸಾಧಿಸಲು ಸಾಧ್ಯ. ಹಾಗಾಗಿ ಸಂಚಾರ ಮಾಡುವಾಗಲೂ ಕಡ್ಡಾಯವಾಗಿ ನಿಯಮ ಪಾಲಿಸಬೇಕು. ಆ ಮೂಲಕ ದಂಡ ಕಟ್ಟುವುದರಿಂದ ಪಾರಾಗುವಂತೆ ನಗರ ಸಂಚಾರ ವಿಭಾಗದ ಡಿಸಿಪಿ ಜಾಹ್ನವಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಮೈಸೂರು ಸಂಚಾರ ಪೊಲೀಸ್, ಗಂಧದಗುಡಿ ಫೌಂಡೇಷನ್‌ನಿಂದ ಜೆ.ಪಿ.ನಗರದಲ್ಲಿರುವ ಹಿಂದೂಸ್ತಾನ್ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ‘ಸಂಚಾರ ಅರಿವು’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಿಗ್ನಲ್ ಜಂಪ್ ಮಾಡಿ ಸಂಚಾರ ಪೊಲೀಸರ ಕಣ್ಣು ತಪ್ಪಿಸಿ ಓಡಾಡುವುದು ಹೀರೋಯಿಸಂ ಅಲ್ಲ. ಅದನ್ನು ದೊಡ್ಡ ಸಾಧನೆ ಎಂದುಕೊಂಡರೆ ಅಪಘಾತಕ್ಕೆ ತುತ್ತಾಗುವುದು ಗ್ಯಾರಂಟಿ. ಅಪಘಾತ ಎಂಬುದು ನಗುವ ವಿಚಾರವೇ ಅಲ್ಲ. ಮೃತ ವ್ಯಕ್ತಿಯ ದೇಹವನ್ನು ರವಾನಿಸುವಾಗ ನಮಗೂ ದುಃಖವಾಗುತ್ತದೆ. ಜತೆಗೆ ಕುಟುಂಬದವರ ನೋವು, ಭವಿಷ್ಯವನ್ನು ನೆನಪು ಮಾಡಿಕೊಳ್ಳಬೇಕು ಎಂದರು.
ಸಾವು ಯಾರನ್ನೂ ಬಿಡುವುದಿಲ್ಲ ಎನ್ನುವ ಎಚ್ಚರಿಕೆ ಇರಬೇಕು. ಒಂದೆರಡು ದಿನ ಕಣ್ಣು ತಪ್ಪಿಸಿಕೊಂಡು ತಿರುಗಾಡಬಹುದು. ಆದರೆ ಎಲ್ಲ ದಿನವೂ ಒಂದೇ ಪರಿಸ್ಥಿತಿ ಇರುವುದಿಲ್ಲ. ತಂದೆ-ತಾಯಿ ಕಷ್ಟಪಟ್ಟು ಹಣ ಸಂಪಾದನೆ ಮಾಡುತ್ತಾರೆ. ಅದನ್ನು ಅನವಶ್ಯಕವಾಗಿ ದಂಡದ ರೂಪದಲ್ಲಿ ಕಟ್ಟುವುದೇಕೆ? ಅದರ ಬದಲು ಸಂಚಾರ ನಿಯಮ ಪಾಲಿಸಿ ಜೀವ ಹಾಗೂ ಹಣ ಎರಡನ್ನೂ ಉಳಿಸಿಕೊಳ್ಳಿ ಎಂದು ಹೇಳಿದರು.
ಸಂಚಾರ ವಿಭಾಗದ ಎಸಿಪಿ ಎಚ್.ಪರಶುರಾಮಪ್ಪ ಮಾತನಾಡಿ, ಸಂಚಾರ ಅರಿವು ಕಾರ್ಯಕ್ರಮ ಮುಖ್ಯವಾಗಿ ಯುವ ಸಮೂಹಕ್ಕೆ ಆಗಬೇಕು. ಸಂಚಾರ ನಿಯಮಗಳ ಬಗ್ಗೆ ಮೊದಲು ತಿಳಿದುಕೊಳ್ಳಬೇಕು ಎಂದರು.
ದೇವರಾಜ ಸಂಚಾರ ಪೋಲಿಸ್ ಠಾಣೆಯ ಇನ್ಸ್ಪೆಕ್ಟರ್ ಎನ್.ಮುನಿಯಪ್ಪ ಮಾತನಾಡಿ, ಇವತ್ತು ಎಲ್ಲರ ಮನೆಯಲ್ಲೂ ವಾಹಗಳು ಇದ್ದೇ ಇರುತ್ತವೆ. ನಿಮ್ಮ ವಾಹನಗಳನ್ನು ಬೇರೆಯವರಿಗೆ ಹಾಗೂ 18 ವರ್ಷ ವಯಸ್ಸಿನ ಕೆಳಗಿನವರಿಗೆ ಯಾವುದೇ ಕಾರಣಕ್ಕೂ ನೀಡಬೇಡಿ. ಚಾಲನೆಗೂ ಮೊದಲು ಚಾಲನಾ ಪರವಾನಗಿ ಪಡೆಯುವುದು ಅವಶ್ಯ ಎಂದು ಹೇಳಿದರು.
ಸಂಚಾರ ಜಾಗೃತಿ ಮೂಡಿಸುವ ಹಾಗೂ ಅಪಘಾತ ದೃಶ್ಯಗಳ ವಿಡಿಯೋ ಪ್ರಸಾರ ಮಾಡಲಾಯಿತು. ಹಿಂದೂಸ್ತಾನ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಸಿ.ಜೆ.ಪ್ರಿಯಾ, ಗಂದಧಗುಡಿ ಫೌಂಡೇಷನ್‌ನ ಆರ್ಯನ್, ಸುಷ್ಮಾ, ರಘುನಂದನ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net