ಸಂಚಾರ ನಿಯಮ ಪಾಲನೆ ಕಡ್ಡಾಯ

h23-Rally 1
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ

ಅವಸರದಿಂದ ವಾಹನ ಚಲಾಯಿಸುವುದರಿಂದ ಅಪಘಾತಗಳು ಹೆಚ್ಚುತ್ತಿವೆ. ಪ್ರತಿಯೊಬ್ಬರೂ ಕಡ್ಡಾಯವಾಗಿ ಸಂಚಾರ ನಿಯಮಗಳನ್ನು ಪಾಲಿಸಬೇಕು ಎಂದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ರಮಣ ಗುಪ್ತಾ ಹೇಳಿದರು.

ಜಿಲ್ಲಾಡಳಿತ, ಸಾರಿಗೆ ಇಲಾಖೆ, ಪೊಲೀಸ್ ಇಲಾಖೆ, ರೋಟರಿ ಕ್ಲಬ್ ಹುಬ್ಬಳ್ಳಿ ಪರಿವಾರ, 99 ಕ್ಯಾನನ್ಸ್ ಮೋಟಾರ್ ಸೈಕಲ್ ಕ್ಲಬ್, ಇನ್ನರ್​ವ್ಹೀಲ್ ಕ್ಲಬ್ ಹುಬ್ಬಳ್ಳಿ ಮತ್ತು ಹು-ಧಾ ಮೋಟಾರ್ ಡ್ರೖೆವಿಂಗ್ ಸ್ಕೂಲ್ ಅಸೋಸಿಯೇಷನ್ ಆಶ್ರಯದಲ್ಲಿ ನಗರದ ರೈಲ್ವೆ ನಿಲ್ದಾಣದ ಮುಂಭಾಗದಲ್ಲಿ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಸ್ವಚ್ಛತೆಗೆ ಪ್ರಾಧಾನ್ಯತೆ ಧ್ಯೇಯ ವಾಕ್ಯದೊಂದಿಗೆ ಸೋಮವಾರ ಏರ್ಪಡಿಸಿದ್ದ ಬೈಕ್ ಮತ್ತು ಕಾರ್ ರ್ಯಾಲಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ದೇಶದಲ್ಲಿ ಲಕ್ಷಾಂತರ ಜನರು ರಸ್ತೆ ಅಪಘಾತದಲ್ಲಿ ಜೀವ ಕಳೆದುಕೊಳ್ಳುತ್ತಿದ್ದಾರೆ. ಸಂಚಾರ ನಿಯಮಗಳ ಬಗ್ಗೆ ಜನರಲ್ಲಿ ಅರಿವು ಕಡಿಮೆ ಇರುವುದೇ ಅಪಘಾತಕ್ಕೆ ಕಾರಣ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವರ್ಷಕ್ಕೆ 200ಕ್ಕೂ ಹೆಚ್ಚು ಜನರು ಅಪಘಾತಕ್ಕೀಡಾಗುತ್ತಿದ್ದಾರೆ. ಯುವ ಪೀಳಿಗೆಗೆ ಸಂಚಾರ ನಿಯಮಗಳ ಕುರಿತು ಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು.

ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಡಾ. ಗೋಪಾಲ ಬ್ಯಾಕೋಡ ಮಾತನಾಡಿ, ಬೈಕ್ ಓಡಿಸುವಾಗ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಕಾರ್ ಚಲಾಯಿಸುವಾಗ ಸೀಟ್ ಬೆಲ್ಟ್ ಧರಿಸಬೇಕು ಎಂದು ಸಲಹೆ ನೀಡಿದರು.

ಸಾರಿಗೆ ಇಲಾಖೆ ಅಪರ ಆಯುಕ್ತ ಮಾರುತಿ ಸಾಂಬ್ರಾಣಿ, ಪ್ರಾದೇಶಿಕ ಸಾರಿಗೆ ಅಧಿಕಾರಿ ಕೆ. ದಾಮೋದರ ಮಾತನಾಡಿದರು. ಸಾರಿಗೆ ಇಲಾಖೆಯ ಪ್ರಥಮ ದರ್ಜೆ ಸಹಾಯಕ ಜಿ.ವಿ. ದಿನಾಮನಿ ಪ್ರತಿಜ್ಞಾವಿಧಿ ಬೋಧಿಸಿದರು.

ರ‍್ಯಾಲಿ ರೈಲ್ವೆ ನಿಲ್ದಾಣದಿಂದ ಆರಂಭವಾಗಿ ಚನ್ನಮ್ಮ ಸರ್ಕಲ್, ಹೊಸೂರು, ಶಿರೂರ ಪಾರ್ಕ್ ರಸ್ತೆ ಮಾರ್ಗವಾಗಿ ಸಾಗಿ ತೋಳನಕೆರೆಯಲ್ಲಿ ಮುಕ್ತಾಯಗೊಂಡಿತು.

ಪ್ರಾದೇಶಿಕ ಸಾರಿಗೆ ಅಧಿಕಾರಿ ಶಂಕರಪ್ಪ, ವಾಹನ ನಿರೀಕ್ಷಕರಾದ ಎಸ್.ಡಿ. ಬೆಲ್ಲದ, ಪಿ.ಆರ್. ದೇಸಾಯಿ, ಆರ್.ಎಸ್. ಮಾಳಗಿ, ರೋಟರಿ ಇಂಟರ್​ನ್ಯಾಷನಲ್ ಡಿಸ್ಟ್ರಿಕ್ಟ್ ಗವರ್ನರ್ ವೆಂಕಟೇಶ ದೇಶಪಾಂಡೆ, ರೋಟರಿ ಕ್ಲಬ್ ಹುಬ್ಬಳ್ಳಿ ಪರಿವಾರ ಸಹಾಯಕ ಗವರ್ನರ್ ಅಬ್ದುಲ್ ಸಾದಿಕ್, ಶಂಕರ ಹಿರೇಮಠ, ರೋಟರಿ ಕ್ಲಬ್ ಅಧ್ಯಕ್ಷ ಗಿರೀಶ ಪಾಟೀಲ, ಸುಭಾಷಚಂದ್ರ ಹೊಳಲ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net