ಸಂಚಾರ ನಿಯಮ ಅರಿಯಿರಿ

06
Published on

ಜಿಲ್ಲಾಧಿಕಾರಿ ಶುಭಕಲ್ಯಾಣ್​ ಹೇಳಿಕೆ, ತುಮಕೂರಲ್ಲಿ ಜಾಗೃತಿ ನಡಿಗೆ ಜಾಥಾಗೆ ಚಾಲನೆ

ತುಮಕೂರು: ರಸ್ತೆಗಳಲ್ಲಿ ಅಪಘಾತಗಳ ಸಂಖ್ಯೆ ಕಡಿಮೆ ಮಾಡಿ, ಎಲ್ಲರ ಸುರಕ್ಷತಾ ಪ್ರಯಾಣದ ದೃಷ್ಟಿಯಿಂದ ಸಂಚಾರ ನಿಯಮಗಳ ಜಾಗೃತಿ ನಿತ್ಯದ ಮಂತ್ರವಾಗಬೇಕು. ಪಾಲಕರು ಮಕ್ಕಳಿಗೆ ರಸ್ತೆ ಸುರಕ್ಷತೆ ಬಗ್ಗೆ ಅರಿವು ಮೂಡಿಸಬೇಕು ಜಿಲ್ಲಾಧಿಕಾರಿ ಶುಭಕಲ್ಯಾಣ್​ ಹೇಳಿದರು.

ಸಾರಿಗೆ ಇಲಾಖೆ, ರಸ್ತೆ ಸುರಕ್ಷತಾ ಸಮಿತಿ ಹಾಗೂ ವಿವಿಧ ಸಂ, ಸಂಸ್ಥೆಗಳ ಸಹಯೋಗದಲ್ಲಿ 36ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಅಂಗವಾಗಿ ಬುಧವಾರ ನಗರದ ಆರ್​ಟಿಇ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಸಂಚಾರ ಸುರಕ್ಷತಾ ಜಾಗೃತಿ ನಡಿಗೆ ಜಾಥಾಗೆ ಚಾಲನೆ ನೀಡಿ ಮಾತನಾಡಿ, ವಾಹನ ಸವಾರರು ಕಡ್ಡಾಯವಾಗಿ ರಸ್ತೆ ನಿಯಮಗಳ ಬಗ್ಗೆ ತಿಳಿದುಕೊಂಡಿರಬೇಕು. ಸದಾಕಾಲ ಸಂಚಾರ ನಿಯಮ ಗಳನ್ನು ಪಾಲಿಸಕೊಂಡು ವಾಹನ ಚಲಾಯಿಸು ವವರು ತಮ್ಮ ಸುರಕ್ಷತೆ ಜತೆಗೆ ರಸ್ತೆಯಲ್ಲಿ ಸಂಚರಿಸುವವರ ಸುರಕ್ಷತೆ ಬಗ್ಗೆಯೂ ಎಚ್ಚರವ ಹಿಸಬೇಕು ಎಂದು ತಿಳಿಸಿದರು. ವಾಹನ ಚಲಾವಣೆಗೆ ಪರವಾನಗಿ, ವಾಹನದ ಅಗತ್ಯ ದಾಖಲಾತಿಗಳನ್ನು ಹೊಂದಿರಬೇಕು. ಸೂಚನಾ ಫಲಕಗಳ ಸೂಚನೆಗಳನ್ನು ಅನುಸರಿಸಬೇಕು. ನಿಯಮ ಉಲ್ಲಂಘನೆ ಮಾಡದಂತೆ ಎಚ್ಚರವಹಿಸಬೇಕು. ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಸಾರ್ವಜನಿಕರಿಗೆ ಆರೋಗ್ಯ ತಪಾಸಣೆ, ನೇತ್ರ ತಪಾಸಣಾ ಶಿಬಿರ ಹಮ್ಮಿಕೊಂಡಿರುವುದು ಶ್ಲಾನೀಯ ಎಂದರು.

ಬೆಂಗಳೂರು ಗ್ರಾಮಾಂತರ ವಿಭಾಗದ ಜಂಟಿ ಸಾರಿಗೆ ಆಯುಕ್ತೆ ಎನ್​.ಜಿ.ಗಾಯತ್ರಿದೇವಿ ಮಾತನಾಡಿ, ಸುರಕ್ಷಿತ ಸಂಚಾರ ಪ್ರತಿಯೊಬ್ಬರ ಗುರಿಯಾಗಬೇಕು. ವಾಹನ ಚಲಾಯಿಸುವಾಗ ನಿಯಮಗಳನ್ನು ಪಾಲನೆ ಮಾಡಿಕೊಂಡು ಎಚ್ಚರವಹಿಸಬೇಕು. ಬೇಡಿಕೆಗೆ ತಕ್ಕಂತೆ ನಮ್ಮಲ್ಲಿ ರಸ್ತೆಗಳ ಅಭಿವೃದ್ಧಿಯಾಗುತ್ತಿದೆ. ರಸ್ತೆ ನಿಮಾರ್ಣ, ನಿರ್ವಹಣಾ ಇಲಾಖೆ ಅಧಿಕಾರಿಗಳು ರಸ್ತೆಗಳಲ್ಲಿ ಅಗತ್ಯವಿರುವ ಕಡೆ ಸೂಕ್ತ ಸೂಚನಾ ಫಲಕ ಅಳವಡಿಸಲು ಕ್ರಮ ತೆಗೆದುಕೊಳ್ಳಬೇಕು. ವಾಹನ ಚಲಾವಣೆ ಆರಂಭಿಸುವ ಮುನ್ನ ಸಂಬಂಧಿಸಿದ ದಾಖಲಾತಿಗಳು, ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್​ ಧರಿಸುವಂತೆ ಮಾಡಬೇಕು, ರಸ್ತೆಯಲ್ಲಿ ಸಂಚಾರ ನಿಯಮಗಳ ಉಲ್ಲಂಘನೆ ಆಗದಂತೆ ಎಚ್ಚರಿಕೆಯಿಂದ ಚಲಾಯಿಸಬೇಕು ಎಂದು ಹೇಳಿದರು.

ಸಂಚಾರ ಠಾಣೆ ಪೊಲೀಸ್​ ಸರ್ಕಲ್​ ಇನ್​ಸ್ಪೆಕ್ಟರ್​ ಗುರುನಾಥ್​, ಮನ ಶಾಸ್ತ್ರಜ್ಞ ಡಾ.ಕುಮಾರ್​, ಶಿಕ್ಷಕ ರೇಣುಕಾರಾಧ್ಯ ಅವರು ರಸ್ತೆ ಸುರಕ್ಷತೆ, ವಾಹನ ಚಾಲಕರ ಆರೋಗ್ಯಕರ ಮನಸ್ಥಿತಿ, ಸುರಕ್ಷತೆ ಬಗ್ಗೆ ಉಪನ್ಯಾಸ ನೀಡಿದರು. ಪ್ರಾದೇಶಿಕ ಸಾರಿಗೆ ಅಧಿಕಾರಿ ಎ.ವಿ.ಪ್ರಸಾದ್​, ಹಿರಿಯ ಮೋಟಾರ್​ ನಿರೀಕ್ಷಕ ಶರೀಫ್​, ಸಿದ್ಧಗಂಗಾ ಆಸ್ಪತ್ರೆ ನಿರ್ದೇಶಕ ಡಾ.ಎಸ್​.ಪರಮೇಶ್​, ಜಿಲ್ಲಾ ಮೋಟಾರ್​ ವಾಹನ ತರಬೇತಿ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಅಣ್ಣೆನಹಳ್ಳಿ ಶಿವಕುಮಾರ್​, ರಾಜ್ಯ ಕಾರ್ಯದರ್ಶಿ ಟಿ.ಆರ್​.ಸದಾಶಿವಯ್ಯ, ಐಎಂಎ ಜಿಲ್ಲಾ ಅಧ್ಯಕ್ಷ ಡಾ.ನಾಗಭೂಷಣ್​, ಕಾರ್ಯದರ್ಶಿ ಡಾ.ಪ್ರದಿಪ್​, ರೋಟರಿ ತುಮಕೂರು ಅಧ್ಯಕ್ಷೆ ರಾಜೇಶ್ವರಿ, ಜಿಲ್ಲಾ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಪ್ರಸನ್ನಕುಮಾರ್​, ಅಬ್ದುಲ್​ ಖಾದರ್​, ನರಸಿಂಹಮೂರ್ತಿ, ಆಟೋ ಚಾಲಕರ ಸಂಘದ ಅಧ್ಯಕ್ಷ ನಟರಾಜೇಗೌಡ ಇದ್ದರು.

ತುಮಕೂರು ಜಿಲ್ಲೆಯಲ್ಲಿ 2023ರಲ್ಲಿ ರಸ್ತೆ ಅಪಘಾತದಲ್ಲಿ 64 ಜನ ಮೃತಪಟ್ಟಿದ್ದರು. 2024ರಲ್ಲಿ 42 ಮಂದಿ ಮೃತಪಟ್ಟ ವರದಿ ಇದೆ. ಸಾವಿನ ಸಂಖ್ಯೆ ನಿಯಂತ್ರಣಕ್ಕೆ ಬರುತ್ತಿರುವುದು ಪೊಲೀಸ್​, ಆರ್​ಟಿಒ ಹಾಗೂ ಸಂಬಂಧಿಸಿದ ಇಲಾಖೆ ಕೈಗೊಂಡ ಸುರಕ್ಷಿತಾ ಕ್ರಮ ಹಾಗೂ ಚಾಲಕರ ಎಚ್ಚರಿಕೆಯ ಚಾಲನೆ ಕಾರಣವಾಗಿದ್ದು, ಮತ್ತೊಷ್ಟು ಜಾಗೃತಿ ಮೂಲಕ ರಸ್ತೆ ಅಪಘಾತ ಪ್ರಕರಣಗಳನ್ನು ನಿಯಂತ್ರಿಸಬೇಕಿದೆ.| ಎನ್​.ಜಿ.ಗಾಯತ್ರಿದೇವಿ ಜಂಟಿ ಸಾರಿಗೆ ಆಯುಕ್ತೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net