ಸಂಚಾರ ನಿಯಮ ಅರಿತು ವಾಹನ ಚಲಾಯಿಸಿ

22_hsn_04crp news
Published on

ಚನ್ನರಾಯಪಟ್ಟಣ: ರಸ್ತೆ ಸುರಕ್ಷತಾ ವಿಚಾರದಲ್ಲಿ ಸಂಚಾರ ನಿಯಮಗಳನ್ನು ಪಾಲಿಸುವ ಕುರಿತು ಪ್ರತಿಯೊಬ್ಬರೂ ಆತ್ಮ ಶೋಧನೆ ಮಾಡಿಕೊಳ್ಳಬೇಕು. ಇನ್ನೊಬ್ಬರ ಜೀವಕ್ಕೂ ಬೆಲೆ ಇದೆ ಎನ್ನುವ ವಾಸ್ತವವನ್ನು ಅರಿತುಕೊಂಡು ವಾಹನ ಚಲಾವಣೆ ಮಾಡಬೇಕು ಎಂದು ಘಟಕ ವ್ಯವಸ್ಥಾಪಕಿ ಶಾಜೀಯ ಭಾನು ಅಭಿಪ್ರಾಯಪಟ್ಟರು.

ಪಟ್ಟಣ ಬಸ್ ನಿಲ್ದಾಣದಲ್ಲಿ ಭಾನುವಾರ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಸಾರಿಗೆ ಇಲಾಖೆ ಹಾಗೂ ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರದ ವತಿಯಿಂದ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಹಮ್ಮಿಕೊಂಡಿದ್ದ ರಸ್ತೆ ಸುರಕ್ಷತಾ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರ ಜನಸಾಮಾನ್ಯರಲ್ಲಿ ರಸ್ತೆ ಸಂಚಾರ ನಿಯಮಗಳ ಬಗ್ಗೆ ಅರಿವು ಮೂಡಿಸುವುದು. ರಸ್ತೆ ಅಪಘಾತ, ಸಾವು-ನೋವುಗಳ ಬಗ್ಗೆ ಅವರ ಗಮನಕ್ಕೆ ತರುವುದು ಹಾಗೂ ರಸ್ತೆ ನಿಯಮಗಳನ್ನು ಪಾಲಿಸುವಂತೆ ಪ್ರತಿಯೊಬ್ಬರಲ್ಲೂ ಶಿಸ್ತು ಮೂಡಿಸುತ್ತಿರುವುದು ಶ್ಲಾಘನೀಯ ಎಂದರು.

ಸರ್ಕಾರದ ಆದೇಶದಂತೆ ಪ್ರತಿವರ್ಷವೂ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಆಚರಿಸಲಾಗುತ್ತದೆ. ಒಂದು ತಿಂಗಳ ಕಾಲ ಕಾರ್ಯಕ್ರಮದ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ರಸ್ತೆ ನಿಯಮಗಳ ಕುರಿತು ಚಾಲಕರಿಗೆ ಮತ್ತು ವಾಹನ ಮಾಲೀಕರಿಗೆ ಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದರು.

ಅನೇಕ ಅಪಘಾತಗಳು ಮಾನವ ತಪ್ಪುಗಳಿಂದಲೇ ಆಗುತ್ತವೆ. ಅಮಾಯಕರು ಜೀವ ಕಳೆದುಕೊಂಡು ಅವಲಂಬಿಸಿರುವವರನ್ನು ಬೀದಿಪಾಲು ಮಾಡುತ್ತಾರೆ. ಚಾಲಕರು ವಾಹನದಲ್ಲಿ ಕುಳಿತ ಕೂಡಲೇ ತಮ್ಮ ಕುಟುಂಬ ಮತ್ತು ಅವಲಂಬಿತರನ್ನು ನೆನಪಿಸಿಕೊಳ್ಳಬೇಕು. ಎಲ್ಲಕಿಂತ ಜೀವ ಮುಖ್ಯ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಕುಡಿದು ವಾಹನ ಚಾಲನೆ ಮಾಡುವುದು, ಮೊಬೈಲ್‌ನಲ್ಲಿ ಮಾತನಾಡುತ್ತಾ ಚಾಲನೆ ಮಾಡುವುದನ್ನು ಕಡ್ಡಾಯವಾಗಿ ನಿಲ್ಲಿಸಬೇಕು ಎಂದು ಸೂಚಿಸಿದರು.

ಚಾಲಕರು ರಸ್ತೆ ನಿಯಮಗಳನ್ನು ಹಾಗೂ ಸಂಚಾರ ಚಿಹ್ನೆಗಳನ್ನು ಚೆನ್ನಾಗಿ ಅರಿತುಕೊಳ್ಳಬೇಕು. ಸ್ವಲ್ಪವೂ ಬೇಜವಾಬ್ದಾರಿ ಅಥವಾ ನಿರ್ಲಕ್ಷ್ಯ ತೋರದೆ ನಿಯಮ ಪಾಲನೆ ಮಾಡಬೇಕು. ದ್ವಿಚಕ್ರವಾಹನ ಸವಾರರು ಹೆಲ್ಮೆಟ್ ಧರಿಸಿರಬೇಕು. ಸಂಚಾರ ನಿಯಮಗಳನ್ನು ಪಾಲನೆ ಮಾಡಿದರೆ ಸಾಕಷ್ಟು ಅಪಘಾತಗಳನ್ನು ತಡೆಗಟ್ಟಬಹುದು ಎಂದರು.

ಪ್ರಾದೇಶಿಕ ಸಾರಿಗೆ ಅಧೀಕ್ಷಕ ಸಿ.ಎಸ್. ಶರತ್‌ಚಂದ್ರ ಮಾತನಾಡಿ, ಎಲ್ಲ ವಾಹನ ಚಾಲಕರು ಹಾಗೂ ಮಾಲೀಕರು ವಾಹನಗಳಿಗೆ ಸಂಬಂಧಪಟ್ಟ ದಾಖಲೆಗಳ ಒಂದು ಸೆಟ್‌ಅನ್ನು ವಾಹನದಲ್ಲಿ ಜೋಪಾನವಾಗಿ ಇಟ್ಟಿರಬೇಕು. ದಾಖಲೆಗಳು ಇಲ್ಲದೆ ರಸ್ತೆಗೆ ಬರಬಾರದು. ಚಾಲನಾ ಪರವಾನಗಿ, ವಾಹನದ ಆರ್.ಸಿ, ವಿಮೆ ದಾಖಲೆ, ಎಮಿಷನ್ ಪ್ರಮಾಣ ಪತ್ರ ಮತ್ತಿತರ ವಿವರ ಹೊಂದಿರಬೇಕು. ಕಾನೂನುಗಳು ಬದಲಾಗಿದ್ದು, ನಿಯಮಗಳ ಉಲ್ಲಂಘನೆಗೆ ದಂಡ ಹೆಚ್ಚಿಸಲಾಗಿದೆ ಎಂದು ತಿಳಿಸಿದರು.

ನಗರ ಸಂಚಾರ ಪೊಲೀಸ್ ಠಾಣೆಯ ಸಹಾಯಕ ಸಬ್ ಇನ್ಸ್‌ಸ್ಪೆಕ್ಟರ್ ಟಿ.ಎನ್. ನಂಜುಂಡೇಗೌಡ ಮಾತನಾಡಿ, ವಾಹನಗಳ ಸಂಖ್ಯೆ ಅಧಿಕಗೊಳ್ಳುತ್ತಿರುವಂತೆ ಅಪಘಾತಗಳ ಸಂಖ್ಯೆಯೂ ಹೆಚ್ಚುತ್ತಿವೆ. ಹೆತ್ತವರು ಮಕ್ಕಳಿಗೆ ವಾಹನ ಖರೀದಿಸಿ ಕೊಡುವಾಗ ಎಚ್ಚರಿಕೆ ವಹಿಸಬೇಕು. ಕಾನೂನು ಪಾಲನೆ ಕುರಿತು ಮನವರಿಕೆ ಮಾಡಿಕೊಡಬೇಕು. ಪ್ರತಿಯೊಬ್ಬರು ತನ್ನ ಮನೆಯಲ್ಲಿ ಸಂಚಾರ ನಿಯಮದ ಕುರಿತು ಅರಿವು ಮೂಡಿಸಿದರೆ, ಅಪಘಾತದ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಬಹುದು ಎಂದರು.

ಗೋನಾ ಸ್ವಾಮಿ ಎಂಟರ್ ಪ್ರೈಸಸ್ ಕಲಾ ಕೂಟದ ಕಲಾವಿದರು ರಸ್ತೆ ಸುರಕ್ಷತೆ ಬೀದಿ ನಾಟಕ ಪ್ರದರ್ಶನ ವಾಹನ ಸುರಕ್ಷತೆ, ಅಪಘಾತ ಸಂಭವಿಸಿದಾಗ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು, ರಸ್ತೆ ಸುರಕ್ಷತೆ ಹಾಗೂ ಕಾನೂನಿನ ಬಗ್ಗೆ ಡಿಸ್‌ಪ್ಲೇ ಬ್ಯಾನರ್‌ಗಳು, ಸೂಚನಾ ಫಲಕಗಳು, ಡೊಳ್ಳು ಕುಣಿತ, ಭಿತ್ತಿಪತ್ರಗಳ ಬಳಕೆ ವಿವಿಧ ಕಾರ್ಯಕ್ರಮಗಳ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಚಾರ ನಿರೀಕ್ಷಕ ಕೃಪಾಕರ್, ನಿಯಂತ್ರಕರಾದ ಪ್ರಸನ್ನ, ಚಂದ್ರಶೇಖರ್, ಉಷಾ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net