ಸಂಚಲನ ಸೃಷ್ಟಿಸಿದ ಶಿವಧೂತ ಗುಳಿಗ

25 gkp 01.
Published on

ಗೋಣಿಕೊಪ್ಪಲು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಶ್ರೀಕಾವೇರಿ ದಸರಾ ಸಮಿತಿ ಸಹಯೋಗದಲ್ಲಿ ನಡೆಯುತ್ತಿರುವ 47ನೇ ವರ್ಷದ ಗೋಣಿಕೊಪ್ಪ ದಸರಾದಲ್ಲಿ ಗುಳಿಗನ ಪಂಚ ಅವತಾರ ಸಂಚಲನವನ್ನುಂಟು ಮಾಡಿತು.

ಸಂಜೆ ಕಾರ್ಯಕ್ರಮದಲ್ಲಿ ಉಡುಪಿ ಕಲಾಸಂಗಮ ನಾಟಕ ತಂಡದವರಿಂದ ಶಿವಧೂತ ಗುಳಿಗ ನಾಟಕ ಅದ್ಭುತವಾಗಿ ಮೂಡಿಬಂತು. ಶಿವ-ಪಾರ್ವತಿಯರು ಸಂತೋಷವಾಗಿದ್ದ ಸಂದರ್ಭ ನರ್ತಿಸುತ್ತಾರೆ. ಶಿವನರ್ತನದಿಂದ ಶಿವ ಹೆಚ್ಚು ಬೆವರುತ್ತಾನೆ. ಬೆವರನ್ನು ಹೋಗಲಾಡಿಸಲು ಪಾರ್ವತಿ ಭಸ್ಮವನ್ನು ಲೇಪಿಸುತ್ತಾಳೆ. ಆ ಭಸ್ಮ ಮತ್ತು ಬೆವರಿನಿಂದ ಶಿವನಿಗೆ ದೇಹ ಕಡಿತ ಮತ್ತು ಉರಿ ಹೆಚ್ಚಾದಾಗ ಶಿವ ತನ್ನ ಬೆವರು ಮತ್ತು ಭಸ್ಮವನ್ನು ಗೋಳಾಕಾರವಾಗಿ ಸವರಿ ತೆಗೆಯುತ್ತಾನೆ. ಆ ಗೋಳಾಕಾರವು ಬೆಳೆಯುತ್ತಾ ಹೋಗಿ ಗುಳಿಗನ ಹುಟ್ಟು ಆಗುತ್ತದೆ. ಗುಳಿಗ ತಾನು ಭೂಮಿಯಲ್ಲಿ ಉಳಿದುಕೊಳ್ಳುವುದಕ್ಕೋಸ್ಕರ ಶಿವನನ್ನು ಬೇಡಿಕೊಂಡಾಗ ಶಿವನು ವಿಷ್ಣುವನ್ನು ಕಾಣುವಂತೆ ಹೇಳುತ್ತಾನೆ. ವಿಷ್ಣು ನೆಲಹುಲ್ಲು ಸಂಕೆ ಎಂಬ ರಾಕ್ಷಸಿಯ ಹೊಟ್ಟೆಯಲ್ಲಿ 24ನೇ ಮಗನಾಗಿ ಹುಟ್ಟುವಂತೆ ಹಾರೈಸಿ ಗುಳಿಗನು ತನ್ನ ತಾಯಿಯನ್ನು ಕೊಂದು ತಾನು ಬದುಕುವಂತಹ ಕಥೆ. ನಂತರ ಆತ ತಣ್ಣಿವಾನಿ ಸಹೋದರಿಯೊಂದಿಗೆ ಸೇರಿ ಸೂರ್ಯನನ್ನೇ ತಡೆಯುತ್ತಾ ‘ಕತ್ತಲು ಕಾಣದ ಗುಳಿಗ’ ಎಂಬ ಹೆಸರನ್ನು ಪಡೆಯುತ್ತಾ ಮರದ ಕೆಳಗೆ ಆಶ್ರಯ ಪಡೆಯುವಂತೆ ವೈದ್ಯನಾಥ ಮತ್ತು ಭೂತನಾಥ ದೇವರುಗಳು ಆಶೀರ್ವದಿಸಲು ಮರದಲ್ಲಿದ್ದ ರಾಕ್ಷಸನನ್ನು ಕೊಂದು ಮರದ ಬುಡದಲ್ಲಿ ತಾನು ನೆಲೆಯನ್ನು ಕಂಡುಕೊಳ್ಳುವಂತಹ ಅದ್ಭುತವಾದ ಕಥೆ ಜನರನ್ನು ಸೂಜಿಗಲ್ಲಿನಂತೆ ಸೆಳೆಯಿತು.

ಸ್ವರ್ಗ ಲೋಕದ ಶಿವ-ಪಾರ್ವತಿಯರನ್ನು ವಿಷ್ಣು, ಲಕ್ಷ್ಮೀ, ಬ್ರಹ್ಮ ದೇವನನ್ನು ಒಂದೇ ವೇದಿಕೆಯಲ್ಲಿ ಕಣ್ಣು ತುಂಬಿಕೊಳ್ಳುವ ಸದಾವಕಾಶ ದೊರೆಯಿತು. ಪಾತ್ರಧಾರಿ ಎಲ್ಲರನ್ನೂ ತನ್ನ ಮೇಲೆ ಕೇಂದ್ರೀಕರಿಸುವಂತೆ ಮಾಡಿದ್ದು ಅದ್ಭುತವಾದ ಪ್ರತಿಭೆಯಾಗಿ ಶಿವಧೂತ ಗುಳಿಗೆ ತಂಡ ಕಾಣಿಸಿಕೊಂಡಿತು.

ಮೊದಲು ಶಿವ ಗುಳಿಗನಾಗಿ, ನಂತರ ವಿಷ್ಣುವಿನ ಕಿರುಬೆರಳ ರಕ್ತಕುಡಿದ ಕಾರಣಕ್ಕೆ ನೆತ್ತರಗುಳಿಗನಾಗಿ, ಕೆಟ್ಟವರನ್ನು ಸುಡುವ ಕಾರಣಕ್ಕೆ ರಾಹು ಗುಳಿಗನಾಗಿ ಮುಂದೆ ಚೌಡೇಶ್ವರಿ ಗುಳಿಗನಾಗಿ, ಸುಬ್ಬಿ ಅಮ್ಮ ಗುಳಿಗನಾಗಿ, ಕತ್ತಲೆ ಕಾಣದ ಗುಳಿಗನಾಗಿ ಅಭಿನಯಿಸಿದ ಪಾತ್ರಧಾರಿ ಮನಸ್ಸಲ್ಲಿ ಅಚ್ಚಳಿಯದೆ ಉಳಿದ.

ಭೂಮಿಕ ಕಲಾ ತಂಡ ಶಾಂತಳ್ಳಿ ಗಣೇಶ್, ಆಕಾಶವಾಣಿ ಕಲಾವಿದರಿಂದ ಶ್ರಾವಣ ಬಂತು ನಾಡಿಗೆ ಬಂತು ಬೀಡಿಗೆ.. ಪಾತರಗಿತ್ತಿ ಪಕ್ಕ ನೋಡಿದ್ದೇನೆ ಅಕ್ಕ...ಭಾವಗೀತೆ ಮತ್ತು ಸುಗಮ ಸಂಗೀತ ಗಮನ ಸೆಳೆಯಿತು. ಪೊನ್ನಂಪೇಟೆ ಜೈಭೀಮ್ ಗಡಿನಾಡು ಜನಪದ ಕಲಾ ತಂಡದಿಂದ ಸುಗಮ ಸಂಗೀತ, ಚಿತ್ರಗೀತೆ ಮೂಡಿಬಂತು. ಕಲಾವಿದರಾದ ಗಿರೀಶ್, ನಿರ್ಮಲಾ, ಪುತ್ತಾಮನೆ ವಿದ್ಯಾ ಜಗದೀಶ್, ಮಹಾದೇವಸ್ವಾಮಿ, ಶರತ್ ಕುಮಾರ್, ಯಶೋದಾ ಮತ್ತಿತರರು ಪ್ರದರ್ಶನ ನೀಡಿದರು.

ಪ್ರಶಸ್ತಿ ಗೆದ್ದ ಪುಟಾಣಿಗಳು: 1 ರಿಂದ 5ನೇ ತರಗತಿ ವಿಭಾಗದಲ್ಲಿ ರೈತನ್ಯ ಹಾಗೂ ತಂಡ ಪ್ರಥಮ, ಇಕಮಂ, ದೀಪಾಲಿ ತಂಡ ದ್ವಿತೀಯ, 6ರಿಂದ 7ನೇ ತರಗತಿಯಲ್ಲಿ ವಿನ್ಯ ತಂಡ ಪ್ರಥಮ, ನಾಟ್ಯ ಸಂಕಲ್ಪ ಶಾಲೆ ದ್ವಿತೀಯ, ಜ್ಞಾನಜ್ಯೋತಿ ತೃತೀಯ, 8ರಿಂದ 10ನೇ ತರಗತಿಯಲ್ಲಿ ನಾಟ್ಯ ಸಂಕಲ್ಪ ತಂಡ ಪ್ರಥಮ, ಬಾಲ ಮುರುಗನ್ ನೃತ್ಯ ಶಾಲೆ ದ್ವಿತೀಯ, ಚರಿಷ್ಠಾ ತಂಡ ತೃತೀಯ, ಛದ್ಮವೇಷ 3 ರಿಂದ 5 ವರ್ಷ ವಿಭಾಗದಲ್ಲಿ ಪ್ರಣಮ್ಯ ಭಾರದ್ವಾಜ್ ಪ್ರಥಮ, ಕೃತಿ ಭಾರದ್ವಾಜ್ ದ್ವಿತೀಯ, ಗಾನ ಸಮೃದ್ಧಿ ತೃತೀಯ, 6ರಿಂದ 10 ವಿಭಾಗದಲ್ಲಿ ದೃತಿಕ್ ದೇವ್ ಪ್ರಥಮ, ದೈವಿಕ್ ದ್ವಿತೀಯ.

ತೇಜಸ್ ತೃತೀಯ, 10ರಿಂದ 15 ವರ್ಷ ವಿಭಾಗದಲ್ಲಿ ಎಚ್. ಎಂ.ಸಾನ್ವಿಕಾ ಪ್ರಥಮ, ಕನಿಷ್ಠ ದ್ವಿತೀಯ, ಶಿಖಾ ತೃತೀಯ, ನಿಧಾನ ಸೈಕಲ್ ರೇಸ್ ಬಾಲಕಿಯರಲ್ಲಿ ಕಾಪ್ಸ್ ಶಾಲೆಯ ವೇದಪ್ರಿಯ ಪ್ರಥಮ, ಯಲನ್ಸ್ ಶಾಲೆಯ ಟಿ.ಎಂ.ವಂದನಾ ದ್ವಿತೀಯ, ಕಾಪ್ಸ್ ಶಾಲೆಯ ಪೊನ್ನಮ್ಮ ತೃತೀಯ, ಬಾಲಕರಲ್ಲಿ ಲಯನ್ಸ್ ಶಾಲೆಯ ಯಶಸ್ ನಾಚಪ್ಪ ಪ್ರಥಮ, ಶೇಯಸ್ ಬೆಳ್ಯಪ್ಪ ದ್ವಿತೀಯ, ನ್ಯಾಷನಲ್ ಅಕಾಡೆಮಿ ಶಾಲೆಯ ಬಿ.ವಿ.ಅಭಿನವ್ ತೃತೀಯ ಬಹುಮಾನ ಪಡೆದುಕೊಂಡರು.

ಗೋಣಿಚೀಲ ಓಟ 1ರಿಂದ 4ನೇ ತರಗತಿ ವಿಭಾಗದ ಬಾಲಕರಲ್ಲಿ ಕೂರ್ಗ್ ಸಿಗ್ನೆಷರ್ ಅಕಾಡೆಮಿ ಶಾಲೆಯ ವಿದಾಂತ್ ಸೋಮಯ್ಯ ಪ್ರಥಮ, ಸರ್ವ ಧೃವತಾ ಶಾಲೆಯ ಉವನ್ ದ್ವಿತೀಯ, ಪೊನ್ನಂಪೇಟೆ ಸೆಂಟ್ ಆಂಥೋನಿ ಶಾಲೆಯ ಶೋಚನ್ ತೃತೀಯ, ಬಾಲಕಿಯರಲ್ಲಿ ಕಾಪ್ಸ್ ಶಾಲೆಯ ಎಂ.ಕೆ.ರೂನ ಪ್ರಥಮ, ಆಮತ್ತಿ ಗುಡ್ ಶೆಫರ್ಡ್ ಶಾಲೆಯ ಟಿ.ಎ.ಆಸೀಪಾ ದ್ವಿತೀಯ, ಪೊನ್ನಂಪೇಟೆ ಸೆಂಟ್ ಆಂಥೋನಿ ಶಾಲೆಯ ಇಶಿಕಾ ಬೋಜಮ್ಮ ತೃತೀಯ, 5ರಿಂದ 7ನೇ ತರಗತಿ ವಿಭಾಗದ ಬಾಲಕರಲ್ಲಿ ಸೆಂಟ್ ಥಾಮಸ್ ಶಾಲೆಯ ಈಶ್ವರ್ ಪ್ರಥಮ, ಎಂ.ಜೀವ ದ್ವಿತೀಯ, ಸರ್ವಧೃವತಾ ಶಾಲೆಯ ನಿಖಿಲ್ ಕುಟ್ಟಪ್ಪ ತೃತೀಯ, 8ರಿಂದ 10ನೇ ತರಗತಿ ವಿಭಾಗದ ಬಾಲಕರಲ್ಲಿ ಸರ್ವದೈವತಾ ಶಾಲೆಯ ಕಿರಣ್ ಪ್ರಥಮ, ಪೊನ್ನಂಪೇಟೆ ಕೆಪಿಎಸ್ ಶಾಲೆಯ ಹರ್ಷ ದ್ವಿತೀಯ, ಕೀರ್ತನ್ ತೃತೀಯ, ಬಾಲಕಿಯರಲ್ಲಿ ಯಲ್ಸ್ ಶಾಲೆಯ ತಿಯಾನ ಕಾವೇರಮ್ಮ ಪ್ರಥಮ, ತಿತಿಮತಿ ಪ್ರೌಢಶಾಲೆಯ ರಿಶಿತಾ ದ್ವಿತೀಯ, ಬಿಂದಿಯಾ ತೃತೀಯ ಸ್ಥಾನ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net