ಸಂಘದ ಎದುರು ಷೇರುದಾರರ ಪ್ರತಿಭಟನೆ

SRP_17-01jpg
ಶ್ರೀರಂಗಪಟ್ಟಣ ತಾಲೂಕು ರಾಂಪುರ ಗ್ರಾಮದ ಹಾಲು ಒಕ್ಕೂಟದ ಎದುರು ಷೇರುದಾರರು ಹಣ ದುರ್ಬಳಕೆ ಮಾಡಿಕೊಂಡಿರುವ ಸಂಬಂಧ ಕಾರ್ಯದರ್ಶಿಯನ್ನು ತರಾಟೆ ತೆಗೆದುಕೊಂಡರು.
Published on

ಶ್ರೀರಂಗಪಟ್ಟಣ: ಹಾಲು ಒಕ್ಕೂಟದ ಕಾರ್ಯದರ್ಶಿ ಸಂಘದ ಲಕ್ಷಾಂತರ ರೂ.ಗಳನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಷೇರುದಾರರು ಸಂಘದ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.

ತಾಲೂಕಿನ ರಾಂಪುರ ಗ್ರಾಮದ ಹಾಲು ಒಕ್ಕೂಟದ ಕಾರ್ಯದರ್ಶಿ ಭಾರತಿ ಎಂಬುವರು ಸುಮಾರು 5 ಲಕ್ಷ ರೂ.ವರೆಗೆ ಸಂಘದ ಹಣವನ್ನು ವೈಯಕ್ತಿಕವಾಗಿ ದುರ್ಬಳಕೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಅವರನ್ನು ಪ್ರಶ್ನಿಸಿದಾಗ ಷೇರುದಾರರ ಬಳಿ ತಪ್ಪು ಒಪ್ಪಿಕೊಂಡು ಮರು ಪಾವತಿಗೆ ಕಾಲಾವಕಾಶ ಕೇಳಿದ್ದಾರೆ. ಸಂಘದಲ್ಲಿ 180ಕ್ಕೂ ಹೆಚ್ಚು ಷೇರುದಾರರು, 9 ಜನ ನಿರ್ದೇಶಕರಿದ್ದರೂ 5 ವರ್ಷಗಳಿಂದ ಯಾವುದೇ ಚುನಾವಣೆ ನಡೆದಿಲ್ಲ. ಸದಸ್ಯರ ಸಾಮಾನ್ಯ ಸಭೆಯೂ ನಡೆದಿಲ್ಲ ಎಂದು ದೂರಿದರು.

ಸಹಕಾರ ಸಂಘದ ನಿಯಮದಂತೆ ಸಂಘ ಸೂಪರ್‌ಸೀಡ್ ಆಗಿ ಸಂಪೂರ್ಣ ಆಡಳಿತ ಕಾರ್ಯದರ್ಶಿ ಪಾಲಾಗಿದೆ. ಅಧಿಕಾರ ವಹಿಸಿಕೊಂಡ ಕಾರ್ಯದರ್ಶಿ ಸಂಘದ ಹಣ ಸೇರಿದಂತೆ ಅಧಿಕಾರ ದುರ್ಬಳಕೆ ಮಾಡಿಕೊಂಡು ಸಾಕಷ್ಟು ಅವ್ಯವಹಾರ ಎಸಗಿದ್ದಾರೆ. ಎರಡು ವಾರಗಳಿಂದ ಹಾಲಿನ ಹಣ ಪಾವತಿಸಿಲ್ಲ. ಇದರಿಂದ ಹಾಲು ಉತ್ಪಾದಕರಿಗೆ ಸಾಕಷ್ಟು ಸಮಸ್ಯೆಯಾಗಿದೆ ಎಂದು ಷೇರುದಾರರಾದ ಜ್ಯೋತಿ, ಕಮಲಮ್ಮ ಸೇರಿದಂತೆ ಹಲವರು ಆರೋಪಿಸಿದರು.

ಹಾಲು ಒಕ್ಕೂಟದ ಮಾಜಿ ಅಧ್ಯಕ್ಷೆ ಪವಿತ್ರಾ ಮಾತನಾಡಿ, ಸಂಘದ 36 ಷೇರುದಾರರಿಗೆ ಹಕ್ಕು ಚಲಾವಣೆಗೆ ಮಾತ್ರ ಅವಕಾಶ ನೀಡಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಈ ಸಂಬಂಧ ಹಾಲು ಒಕ್ಕೂಟ ಹಾಗೂ ಸಹಕಾರ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಂಡು ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಷೇರುದಾರರಾದ ಸವಿತಾ, ಶಾಂತಮ್ಮ, ಸುಜಾತಾ, ಉಮಾ, ಭಾಗ್ಯಕ್ಕ, ಕೆಂಪಮ್ಮ, ಗ್ರಾಮಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net