

ತುಮಕೂರು: ತಳ ಸಮುದಾಯದವರು ಸಂಘಟಿತರಾದಾಗಲೇ ತಮ್ಮ ಹಕ್ಕುಗಳನ್ನು ಪಡೆಯಲು ಸಾಧ್ಯವಾಗುತ್ತದೆ. ತಮ್ಮ ಬೇಡಿಕೆಗಳಿಗೂ ಬೆಲೆ ಬರುತ್ತದೆ. ವಿಶೇಷವಾಗಿ ರಾಜಕೀಯ ಅಧಿಕಾರ ಹೊಂದಿದರೆ ಸಮುದಾಯದ ಆಗು&ಹೋಗುಗಳಿಗೆ ಧ್ವನಿಯಾಗಬಹುದು ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿದರು.
ಜಿಲ್ಲಾ ಮೇದ (ಎಸ್ಟಿ) ಗಿರಿ ಜನಾಂಗ ಕ್ಷೇಮಾಭಿವೃದ್ಧಿ ಸಂಘದಿಂದ ಭಾನುವಾರ ನಗರದ ಕನ್ನಡ ಭವನದಲ್ಲಿ ಹಮ್ಮಿಕೊಂಡಿದ್ದ ಮೇದರ ಸಮಾವೇಶ, ಪ್ರತಿಭಾ ಪುರಸ್ಕಾರ, ಸಾಧಕರಿಗೆ ಗೌರವಾರ್ಪಣೆ ಹಾಗೂ ವಧು&ವರರ ಸಮಾವೇಶದಲ್ಲಿ ಮಾತನಾಡಿದರು.
ಮೇದರ ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷರು, ಸಿಬ್ಬಂದಿ ನೇಮಕ, ಅನುದಾನ ಬಿಡುಗಡೆ ಮತ್ತಿತರ ಬೇಡಿಕೆಗಳ ಬಗ್ಗೆ ಮುಖ್ಯಮಂತ್ರಿಗಳ ಬಳಿಗೆ ನಿಯೋಗದೊಂದಿಗೆ ಬನ್ನಿ, ನಿಮ್ಮ ಜತೆ ನಾನೂ ಇರುತ್ತೇನೆ. ಅವರೊಂದಿಗೆ ಚರ್ಚಿಸಿ ಬೇಡಿಕೆ ಈಡೇರಿಸಿಕೊಳ್ಳೋಣ ಎಂದರು.
ಸಿಎಂ ಸಿದ್ದರಾಮಯ್ಯ ಅವರು ತಳಸಮುದಾಯಗಳಿಗೆ ನ್ಯಾಯ ಒದಗಿಸಲು ಆದ್ಯತೆ ನೀಡುತ್ತಾರೆ. ಇಂತಹ ಸಮುದಾಯಗಳಿಗೆ ಶಕ್ತಿ ತುಂಬುವಲ್ಲಿ ದೇವರಾಜ ಅರಸು ನಂತರ ಸಿದ್ದರಾಮಯ್ಯ ಹೆಚ್ಚು ಕಾಳಜಿವಹಿಸಿದ್ದಾರೆ. ಯಾರೊಬ್ಬರೂ ಹಸಿವಿನಿಂದ ಇರಬಾರದು ಎಂದು ಅನ್ಯಭಾಗ್ಯದಂತಹ ಪುಣ್ಯದ ಯೋಜನೆಯನ್ನು ಜಾರಿಗೆ ತಂದು ರಾಜ್ಯದ ಬಡವರಲ್ಲಿ ಅನ್ನದ
ಚಿಂತೆ ಇಲ್ಲದಂತೆ ಮಾಡಿದ್ದಾರೆ ಎಂದರು.
ಮೇದರು ಶ್ರಮಿಕ ಸಮುದಾಯ, ಬೆವರು ಸುರಿಸಿ ಬದುಕುವವರು. ಬಿದಿರಿನ ಕಸುಬು ಅನುಸರಿಸಿಕೊಂಡು ಬರುವ ಮೇದರ ಜೀವನ ಈಗ ಸಂಕಷ್ಟದಲ್ಲಿದೆ. ಕುಲಕಸುಬು ಈಗ ಲಾಭದಾಯಕವಾಗಿಲ್ಲ. ಕಸುಬನ್ನು ಅವಲಂಬಿಸದೆ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಅವರನ್ನು ಸಮಾಜದಲ್ಲಿ ಒಳ್ಳೆಯ ಸ್ಥಾನ ಪಡೆಯಲು ಆದ್ಯತೆ ನೀಡಿ. 2025ರ ಜನಗಣತಿಯಲ್ಲಿ ಮೇದರು ಜಾತಿ ಸಂಬಂಧಿಸಿದ ಸಮರ್ಪಕ ಮಾಹಿತಿ ನೋಂದಾಯಿಸಿ, ಜನಸಂಖ್ಯೆ ಆಧಾರದಲ್ಲಿ ಹಕ್ಕು, ಅನುಕೂಲಗಳನ್ನು ಪಡೆಯಿರಿ ಎಂದರು.
ಚಿತ್ರದುರ್ಗ ಮೇದರ ಗುರುಪೀಠದ ಇಮ್ಮಡಿ ಶ್ರೀಬಸವ ಮೇದಾರ ಕೇತೇಶ್ವರ ಸ್ವಾಮೀಜಿ ಮಾತನಾಡಿ, ರಾಜ್ಯದಲ್ಲಿ ಮೇದರ ಒಳಪಂಗಡಗಳು ಸೇರಿ ಸುಮಾರು ನಾಲ್ಕೂವರೆ ಲಕ್ಷ ಜನಸಂಖ್ಯೆ ಇದ್ದು, ಜನಸಂಖ್ಯೆ ಆಧಾರದಲ್ಲಿ ನಮಗೆ ಸರ್ಕಾರದ ಸವಲತ್ತು ದೊರೆಯುತ್ತಿಲ್ಲ. ಮೇದರ ಅಭಿವೃದ್ಧಿ ನಿಗಮದ ಕಚೇರಿ ಸ್ಥಾಪನೆ ಮಾಡಿ, ಅಧ್ಯಕ್ಷರು, ಸಿಬ್ಬಂದಿ ನೇಮಕ ಮಾಡಿ ನಮ್ಮ ಜನಸಂಖ್ಯೆಗೆ ಆಧಾರದಲ್ಲಿ ಅನುದಾನ ಬಿಡುಗಡೆ ಮಾಡಬೇಕು ಎಂದು ಸರ್ಕಾರ ಒತ್ತಾಯಿಸಿದರು.
ಶಾಸಕ ಜಿ.ಬಿ.ಜ್ಯೋತಿಗಣೇಶ್, ವಿಜಯಪುರ ನಗರ ಪಾಲಿಕೆ ಉಪಮೇಯರ್ ದಿನೇಶ್ಹಳ್ಳಿ, ಹೊಸದುರ್ಗ ಪುರಸಭೆ ಅಧ್ಯಕ್ಷೆ ರಾಜೇಶ್ವರಿ ಆನಂದ್, ಪ್ರಾಧ್ಯಾಪಕ ಡಾ.ಎಸ್.ಕುಂಭಿನರಸಯ್ಯ, ಜಿಲ್ಲಾ ಸಂಘದ ಗೌರವಾಧ್ಯಕ್ಷ ದೊರೆರಾಜ್, ಅಧ್ಯಕ್ಷ ಚೆನ್ನಬಸವಯ್ಯ, ಉಪಾಧ್ಯಕ್ಷ ನಾಗರಾಜು, ಕಾರ್ಯದರ್ಶಿ ನಾರಾಯಣರಾಜು, ಖಜಾಂಚಿ ಬಂಬೂ ಮೋಹನ್ ಮತ್ತಿತರರು ಇದ್ದರು.
ರಾಜಕೀಯ ಪ್ರಾತಿನಿಧ್ಯ ಪಡೆಯಿರಿ: ಕೆಎಸ್ಆರ್ಟಿಸಿ ಎಸ್.ಆರ್.ಶ್ರೀನಿವಾಸ್ ಮಾತನಾಡಿ, ಸಣ್ಣ ಸಮುದಾಯಗಳು ಸಂಘಟನೆಯಾಗಬೇಕು ಇಲ್ಲವಾದರೆ ರಾಜಕಾರಣಿಗಳೂ ಸೇರಿ ಯಾರೂ ನಿಮ್ಮನ್ನು ಪರಿಗಣಿಸುವುದಿಲ್ಲ. ಸಂಘಟನೆಯಾದಾಗ ಮಾತ್ರ ಸವಲತ್ತು, ರಾಜಕೀಯ ಪ್ರಾತಿನಿಧ್ಯ ಪಡೆಯಲು, ಸರ್ಕಾರದ ಗಮನ ಸೆಳೆಯಲು ಸಾಧ್ಯ. ಮೇದರು ಎಷ್ಟು ದಿನ ಹೀಗೆ ಎಲೆಮರೆಯ ಕಾಯಿಯಂತೆ ಇರುವಿರಿ?, ಸಂಘಟಿತರಾಗಿ ಸಮಾಜದ ಮುಖ್ಯವಾಹಿನಿಗೆ ಬನ್ನಿ ಎಂದರು. ನಿವೃತ್ತ ಇಂಜಿನಿಯರ್, ಮೇದರ ಟ್ರಸ್ಟ್ ಅಧ್ಯಕ್ಷ ಸಿ.ಸಿ.ಪಾಟೀಲ್, ಸಮುದಾಯದ ವಿವಿಧ ಬೇಡಿಕೆಗಳ ಬಗ್ಗೆ ಸಚಿವರಿಗೆ ವಿವರ ನೀಡಿದರು.