

ಸೋಮವಾರಪೇಟೆ: ಸರ್ಕಾರಗಳು ರೈತರ ಸಮಸ್ಯೆಗಳನ್ನು ಪರಿಹರಿಸಬೇಕಾದರೆ ಸಂಘಟಿತ ಹೋರಾಟ ಅಗತ್ಯ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.
ರೈತ ಸಂಘದ ಸೋಮವಾರಪೇಟೆ ತಾಲೂಕು ಘಟಕದ ಆಶ್ರಯದಲ್ಲಿ ಸೋಮವಾರ ಇಲ್ಲಿನ ಒಕ್ಕಲಿಗರ ಸಮುದಾಯಭವನದ ಶ್ರೀಗಂಧ ಸಭಾಂಗಣದಲ್ಲಿ ಇತ್ತೀಚೆಗೆ ಅಗಲಿದ ರೈತ ಮುಖಂಡರಿಗೆ ಆಯೋಜಿಸಿದ್ದ ಶ್ರದ್ಧಾಂಜಲಿ ಹಾಗೂ ನುಡಿನಮನ ಸಭೆಯಲ್ಲಿ ಅವರು ಮಾತನಾಡಿದರು.
ಪಕ್ಷ ರಾಜಕೀಯವನ್ನು ಕೈಬಿಟ್ಟು ರೈತರ ಏಳಿಗೆಗಾಗಿ ಹೋರಾಟ ರೂಪಿಸಬೇಕು. ಆಗ ಮಾತ್ರ ಪ್ರತಿಫಲ ಪಡೆಯಲು ಸಾಧ್ಯ. ರೈತರು ಎಂದಿಗೂ ಯಾರ ಬಳಿಯೂ ಕೈ ಚಾಚುವುದಿಲ್ಲ. ವರ್ಷಪೂರ್ತಿ ಕೆಲಸ ಮಾಡುವ ರೈತರ ಶ್ರಮಕ್ಕೆ ಬೆಲೆ ಕಟ್ಟಲಾಗದು ಎಂದು ಹೇಳಿದರು.
ಹೋರಾಟಗಾರರು, ಚಳವಳಿಗಾರರು ಯಾರಿಂದಲೂ ಯಾವುದನ್ನೂ ಬಯಸುವುದಿಲ್ಲ. ಸ್ವಾಭಿಮಾನಿಗಳಾಗಿರುವ ರೈತರು ಕೇವಲ ಮದುವೆ ಮತ್ತಿತರ ಶುಭ ಸಮಾರಂಭಗಳು, ಹಬ್ಬ ಹರಿದಿನಗಳು, ವಾರದ ಸಂತೆ ಇಂತಹ ಕಾರ್ಯಕ್ರಮಗಳಿಗೆ ಮಾತ್ರ ಸೀಮಿತವಾಗಬಾರದು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಸೋಮವಾರಪೇಟೆ ತಾಲೂಕು ಘಟಕದ ಅಧ್ಯಕ್ಷ ಕೆ.ಎಂ.ದಿನೇಶ್ ಮಾತನಾಡಿ, ಇಂದಿಗೂ ಸಿ ಮತ್ತು ಡಿ ಲ್ಯಾಂಡ್, ಪೌತಿ ಖಾತೆ ಸೇರಿದಂತೆ ರೈತರ ಸಮಸ್ಯೆಗಳನ್ನು ಸರ್ಕಾರದ ಮಟ್ಟದಲ್ಲಿ ಪರಿಹರಿಸಲು ಸಾಧ್ಯವಾಗಿಲ್ಲ. ಕೊಡಗು ಜಿಲ್ಲೆಯು ರಾಜ್ಯ ಸರ್ಕಾರಕ್ಕೆ ಹೆಚ್ಚಿನ ತೆರಿಗೆ ಪಾವತಿಸುತ್ತಿದ್ದರೂ ಜಿಲ್ಲೆಯ ಬೆಳೆಗಾರರು ಹಾಗೂ ರೈತರ ಬಗ್ಗೆ ಯಾವುದೇ ಸರ್ಕಾರಗಳಿಗೂ ಕಾಳಜಿ ಇರುವಂತೆ ತೋರುತ್ತಿಲ್ಲ. ನಮ್ಮನ್ನಾಳುವ ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ ನಮ್ಮ ನ್ಯಾಯಯುತ ಬೇಡಿಕೆಗಳು ಈಡೇರಬೇಕಾದರೆ ರೈತ ಸಂಘಟನೆ ಇನ್ನಷ್ಟು ಬಲಯುತವಾಗಬೇಕು ಎಂದರು.
ಅಗಲಿದ ರೈತ ಮುಖಂಡರಾದ ನೀರುಗುಂದ ಸೋಮಪ್ಪ, ಹೊಸಗುತ್ತಿ ಶಂಕರಪ್ಪ, ಪೊನ್ನಚಂಡ ವಿಷ್ಣು, ಪುರುಷೋತ್ತಮ, ಚಿಣ್ಣಪ್ಪ, ಐ.ಪಿ.ಭವೇರಪ್ಪ ಅವರ ಸೇವೆಯನ್ನು ಸ್ಮರಿಸಲಾಯಿತು.
ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಜಯ್ ಬೋಪಯ್ಯ, ಜಿಲ್ಲಾ ಸಂಚಾಲಕ ಸುಭಾಶ್ ಸುಬ್ಬಯ್ಯ, ರೈತ ಹೋರಾಟ ಸಮಿತಿ ಸಂಚಾಲಕ ಕೆ.ಬಿ.ಸುರೇಶ್, ತಾಲೂಕು ಘಟಕದ ಪ್ರಮುಖರಾದ ಜಿ.ಎಂ.ಹೂವಯ್ಯ, ಟಿ.ಕೆ.ಮಾಚಯ್ಯ ಮತ್ತಿತರರಿದ್ದರು.
ಇದೇ ಸಂದರ್ಭದಲ್ಲಿ ಸಂಘಕ್ಕೆ ಹಲವು ವರ್ಷಗಳಿಂದ ದುಡಿದ ಹಿರಿಯ ರೈತ ಮುಖಂಡರನ್ನೂ ಸನ್ಮಾನಿಸಲಾಯಿತು.