

ಶಿಕಾರಿಪುರ: ಸಾಧು ವೀರಶೈವ ಸಮಾಜ ಬಹುತೇಕ ಕೃಷಿಯನ್ನೇ ಅವಲಂಬಿಸಿ ಬದುಕು ನಡೆಸುತ್ತಿರುವ ಸಮಾಜ. ಅತ್ಯಂತ ಸ್ವಾಭಿಮಾನಿ ಮತ್ತು ಪರಿಶ್ರಮಿ ಸಮಾಜ ಎಂದು ರಾಜ್ಯ ಸಾಧು ವೀರಶೈವ ಸಮಾಜ ಮತ್ತು ರೈತಸಂಘದ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ ಹೇಳಿದರು.
ಪಟ್ಟಣದಲ್ಲಿ ಗುರುವಾರ ತಾಲೂಕು ಸಾಧು ವೀರಶೈವ ಸಮಾಜ ಆಯೋಜಿಸಿದ್ದ ಗ್ರಾಮ ಸಮಿತಿ ಮತ್ತು ನೂತನ ಅಧ್ಯಕ್ಷರ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿ, ನಾವು ಸಮಾಜವನ್ನು ಕಟ್ಟಿ ಬೆಳೆಸಬೇಕು. ಸಂಘಟನೆ ನಮಗೆ ಶಕ್ತಿ ತಂದುಕೊಡುತ್ತದೆ. ಆರ್ಥಿಕವಾಗಿ ಹಿಂದುಳಿದ ಬಂಧುಗಳಿದ್ದಾರೆ. ಅವರಿಗೆ ಸಮಾಜ ಸಹಾಯಹಸ್ತ ಚಾಚಬೇಕು. ನಮ್ಮ ಮೊದಲ ಆದ್ಯತೆ ಸಮಾಜವಾಗಬೇಕು ಎಂದರು.
ನಾವು ಹತ್ತಾರು ಸಮಾಜಮುಖಿ ಕಾರ್ಯಗಳನ್ನು ಮಾಡುವ ಮೂಲಕ ಸಮಾಜಕ್ಕೆ ಹೊಸ ಚಹರೆ ತರಬೇಕು. ರಕ್ತದಾನ, ಉಚಿತ ಆರೋಗ್ಯ ತಪಾಸಣೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಗ್ರಾಮಾಂತರ ಪ್ರದೇಶದ ಸಮಾಜದ ಬಂಧುಗಳನ್ನು ತೊಡಗಿಸಿಕೊಳ್ಳಬೇಕು. ಎಲ್ಲ ಸಮುದಾಯಗಳ ಜತೆಗೆ ಅವಿನಾಭಾವ ಸಂಬಂಧ ಬೆಳೆಸಬೇಕು. ಸಮಾಜದ ಬಂಧುಗಳು ಶಿಕ್ಷಣಕ್ಕೆ ಮೊದಲ ಪ್ರಾತಿನಿಧ್ಯ ನೀಡಬೇಕು ಎಂದು ಸಲಹೆ ನೀಡಿದರು.
ಇಡೀ ರಾಜ್ಯದಲ್ಲಿ ಶಿಕಾರಿಪುರ ತಾಲೂಕಿನ ಸಾಧು ವೀರಶೈವ ಸಮಾಜದ ಸಂಘಟನೆ ಅತ್ಯಂತ ಸದೃಢವಾಗಿದೆ, ಇಲ್ಲಿನ ಸಮಿತಿಯ ಅಧ್ಯಕ್ಷರು, ಉಪಾಧ್ಯಕ್ಷರು, ಪದಾಧಿಕಾರಿಗಳು ಅತ್ಯಂತ ನಿಸ್ವಾರ್ಥ ಭಾವನೆಯಿಂದ ಸಂಘಟನೆ ಕಟ್ಟಿದ್ದಾರೆ. ಇದು ರಾಜ್ಯದಲ್ಲಿಯೇ ಮಾದರಿಯಾಗಿದೆ. ಪ್ರತಿ ಗ್ರಾಮಗಳಲ್ಲಿಯೂ ಸಮಾಜದವರನ್ನು ಗುರುತಿಸಿ ಗ್ರಾಮಸಮಿತಿ ಮಾಡಿರುವುದು ಅಭಿನಂದನೀಯ ಎಂದು ಹೇಳಿದರು.
ಪುರಸಭೆ ಸದಸ್ಯ ನಾಗರಾಜ ಗೌಡ, ವಿಧಾನಪರಿಷತ್ ಮಾಜಿ ಸದಸ್ಯ ಎಚ್.ಎಸ್.ಶಾಂತವೀರಪ್ಪ ಗೌಡ, ತಾಲೂಕು ಸಾಧು ವೀರಶೈವ ಸಮಾಜದ ಅಧ್ಯಕ್ಷ ಎನ್.ಜಿ.ರಾಜಶೇಖರಪ್ಪ, ಮಾಜಿ ಶಾಸಕ ಬಿ.ಎನ್.ಮಹಾಲಿಂಗಪ್ಪ, ಚಂದ್ರಶೇಖರಪ್ಪ, ಪ್ಯಾಟಿ ಈರಣ್ಣ, ಪರಮೇಶ್ವರಪ್ಪ, ಚಂದ್ರು ಮಳವಳ್ಳಿ, ಅರಳಿಮರದ ಪರಮೇಶ್ವರಪ್ಪ, ಈಶ್ವರಪ್ಪ, ಸದಾಶಿವಗೌಡರು, ತಾಪಂ ಮಾಜಿ ಅಧ್ಯಕ್ಷ ಹಿತ್ತಲ ಪರಮೇಶ್ವರಪ್ಪ, ಬಣಕಾರ್ ಇತರರಿದ್ದರು.