

ಶಿಡ್ಲಘಟ್ಟ : ಮಹಿಳಾ ಸ್ವಸಹಾಯ ಸಂಘಗಳಿಗೆ ಆರ್ಥಿಕ ಚೈತನ್ಯ ತುಂಬುವುದರ ಜತೆಗೆ ಖಾಸಗಿ ವ್ಯಕ್ತಿಗಳ ಬಡ್ಡಿ ಮಾಫಿಯಾದಿಂದ ಪಾರು ಮಾಡುವ ನಿಟ್ಟಿನಲ್ಲಿ ಬಡ್ಡಿರಹಿತ ಸಾಲ ವಿತರಣೆ ಮಾಡಲಾಗುತ್ತಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದೇಗೌಡ ತಿಳಿಸಿದರು.
ಮಳಮಾಚನಹಳ್ಳಿ ಬ್ಯಾಟರಾಯಸ್ವಾಮಿ ದೇವಾಲಯದ ಆವರಣದಲ್ಲಿ ಬುಧವಾರ ಡಿಸಿಸಿ ಬ್ಯಾಂಕ್‌ನಿಂದ ಮಳಮಾಚನಹಳ್ಳಿ ರೇಷ್ಮೆ ಬೆಳೆಗಾರರ ಹಾಗೂ ರೈತ ಸೇವಾ ಸಹಕಾರ ಸಂಘದ ಮಹಿಳಾ ಸ್ವಸಹಾಯ ಸಂಘಗಳಿಗೆ ಸಾಲ ವಿತರಣೆ ಮಾಡಿ ಮಾತನಾಡಿದರು.ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗುವ ಜತೆಗೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಸಮಾಜದಲ್ಲಿ ಉತ್ತಮ ಪ್ರಜೆಗಳನ್ನಾಗಿ ರೂಪಿಸಬೇಕು ಎಂದರು.
ಶಾಸಕ ವಿ.ಮುನಿಯಪ್ಪ ಮಾತನಾಡಿ, ಆರ್ಥಿಕ ಸಂಕಷ್ಟದ ನಡುವೆಯೂ ಮಹಿಳಾ ಸ್ವ ಸಹಾಯ ಸಂಘಗಳಿಗೆ ವಿತರಣೆ ಮಾಡುತ್ತಿರುವ ಬಡ್ಡಿರಹಿತ ಸಾಲ ಪಡೆದು ಸ್ವಾವಲಂಬಿಗಳಾಗುವ ಜತೆಗೆ ಮಹಿಳೆಯರು ಉಳಿತಾಯದ ಹಣವನ್ನೂ ಡಿಸಿಸಿ ಬ್ಯಾಂಕಿನಲ್ಲಿ ಠೇವಣಿ ಇಡುವ ಮೂಲಕ ಬ್ಯಾಂಕಿನ ಏಳಿಗೆಗಾಗಿ ಶ್ರಮಿಸಬೇಕು ಎಂದರು.
ಮಳಮಾಚನಹಳ್ಳಿ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ಸುಮಾರು ವಿವಿಧ ಸ್ವಸಹಾಯ ಸಂಘಗಳಿಗೆ 1 ಕೋಟಿ 2 ಲಕ್ಷ 50 ಸಾವಿರ ರೂ. ಸಾಲ ವಿತರಣೆ ಮಾಡಲಾಯಿತು.
ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎ.ನಾಗರಾಜ್, ಮಳಮಾಚನಹಳ್ಳಿ ರೇಷ್ಮೆ ಬೆಳೆಗಾರರ ಹಾಗೂ ರೈತರ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ಮುನಿಯಪ್ಪ, ಕೋಚಿಮುಲ್ ನಿರ್ದೇಶಕ ಆರ್.ಶ್ರೀನಿವಾಸ್, ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಆನಂದ್, ಮಳಮಾಚನಹಳ್ಳಿ ಎಸ್‌ಎಫ್‌ಸಿಎಸ್ ಕಾರ್ಯನಿರ್ವಹಣಾಧಿಕಾರಿ ಉಷಾ, ಟೌನ್ ಎಸ್ ಎಫ್ ಸಿ ಎಸ್ ಕಾರ್ಯದರ್ಶಿ ದೇವಿಕಾ, ಮುಖಂಡರಾದ ಮುನೇಗೌಡ, ಬ್ಯಾಟರಾಯಶೆಟ್ಟಿ, ಬೈರೇಗೌಡ, ಮತ್ತಿತರರು ಹಾಜರಿದ್ದರು.