

ಯಾದಗಿರಿ: ಉದ್ಯೋಗ ಖಾತ್ರಿ ಯೋಜನೆಯಡಿ ಅರಣ್ಯ ಉಳಿವಿಕೆ ಪ್ರಮಾಣ ಹೆಚ್ಚಿಸಲು ಸ್ಥಳೀಯ ಮಹಿಳಾ ಸ್ವ-ಸಹಾಯ ಸಂಘಗಳ ಮೂಲಕ ನರ್ಸರಿ ಚಟುವಟಿಕೆ ಹೆಚ್ಚಿಸುವಂತೆ ಜಿಪಂ ಸಿಇಒ ಅಮರೇಶ ನಾಯಕ ಸಲಹೆ ನೀಡಿದರು.
ಗುರುವಾರ ತಾಲೂಕಿನ ಮುದ್ನಾಳ್ ಗ್ರಾಪಂ ವ್ಯಾಪ್ತಿಯ ಭೀಮಾ ನಾಯಕ ತಾಂಡಾದಲ್ಲಿನ ಸಕರ್ಾರಿ ನರ್ಸರಿಯಲ್ಲಿ ಸಾಮಾಜಿಕ ಅರಣ್ಯ ವಿಭಾಗ, ಜಿಪಂ ಮತ್ತು ತಾಪಂ ಆಶ್ರಯದಲ್ಲಿ ನರೇಗಾ ಯೋಜನೆ ಒಗ್ಗೂಡಿಸುವಿಕೆ ಕಾಮಗಾರಿಗಳ ಅಡಿಯಲ್ಲಿ ಸ್ವಸಹಾಯ ಸಂಘಗಳ ಸದಸ್ಯರಿಗೆ ಆಯೋಜಿಸಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಪ್ರಸಕ್ತ ಸಾಲಿನ ಆರ್ಥಿಕ ವರ್ಷದಲ್ಲಿ ಕೈಗೊಳ್ಳುವ ಕಾಮಗಾರಿಗಳ ಕ್ರಿಯಾಯೋಜನೆ ಸಿದ್ದಪಡಿಸುವ ಪ್ರಕ್ರಿಯೆ ಚಾಲನೆಯಲ್ಲಿದೆ. ಕ್ಷೇತ್ರ ಮಟ್ಟದ ಅರಣ್ಯಾಧಿಕಾರಿಗಳು ತಮ್ಮ ಕಾರ್ಯವ್ಯಾಪ್ತಿಗೆ ಬರುವ ಪ್ರತಿ ಗಾಪಂವಾರು ರೂಪಿತ ಕ್ರಿಯಾಯೋಜನೆ ಜಿಲ್ಲಾ ಮಟ್ಟದಲ್ಲಿ ಕ್ರೋಢಿಕರಿಸಬೇಕು. ಅಲ್ಲದೆ ಜಿಲ್ಲೆಯಿಂದ 25ಲಕ್ಷ ಸಸಿಗಳನ್ನು ಬೆಳೆಸುವ ಗುರಿ ಹೊಂದಲಾಗಿದೆ ಎಂದರು.
ಆಯಾ ತಾಲೂಕುಗಳಿಂದ ಸಂಜೀವಿನಿ, ಎನ್ಆರ್ಎಲ್ಎಂ ಯೋಜನೆಯಡಿ ನರ್ಸರಿ ಚಟುವಟಿಕೆ ಕೈಗೊಳ್ಳಲು ಆಸಕ್ತಿ ಇರುವ ಸ್ವಸಹಾಯ ಗುಂಪಿನ ಸದಸ್ಯರಿಗೆ ಸಾಮಾಜಿಕ ಅರಣ್ಯ ಸಸ್ಯಕ್ಷೇತ್ರದಲ್ಲಿ ಒಂದು ದಿನದ ತರಬೇತಿ ಹಾಗೂ ಪ್ರಾತ್ಯಕ್ಷೀರಣ ನೀಡಲಾಗುತ್ತದೆ. ಗ್ರಾಪಂ ವ್ಯಾಪ್ತಿಯಲ್ಲಿ ಲಭ್ಯವಿರುವ ಸರ್ಕಾರಿ ಜಮೀನಿನಲ್ಲಿ ನರೇಗಾ ಯೋಜನೆಯಡಿ ನರ್ಸರಿ ನಿರ್ಮಿಸಿಕೊಡಲಾಗುತ್ತದೆ ಎಂದು ವಿವರಿಸಿದರು.
ನರ್ಸರಿಗಳಲ್ಲಿ ಬೆಳೆದ ಮಾವು, ಬೇವು, ತೆಂಗು, ಸಪೋಟಾ, ಕರಿಬೇವು, ಸೀತಾಫಲ, ನುಗ್ಗೆ, ನೆರಳೆ, ಶ್ರೀಗಂಧ, ಹುಣಸೆ, ಪಪ್ಪಾಯ, ನಿಂಬೆ ಸೇರಿ ಇತರೆ ಸಸಿಗಳನ್ನು ಅರಣ್ಯ ಇಲಾಖೆಯಿಂದ ಮಾರಾಟ ಮಾಡಲಾಗುವುದು. ಜಿಪಂ ನಿರ್ದೇಶಕ ಬಿ.ಎಸ್.ರಾಠೋಡ ಮಾತನಾಡಿ, ಸರ್ಕಾರ ಮಹಿಳೆಯರಿಗೆ ಪ್ರತಿ ಕ್ಷೇತ್ರದಲ್ಲಿ ಶೇ 50 ಮೀಸಲಾತಿ ನೀಡಿದೆ. ಗ್ರಾಮೀಣ ಮಹಿಳೆಯರು ರೊಟ್ಟಿ, ಶಾವಿಗೆ ಮಾಡುವುದು, ಸಾಂಪ್ರದಾಯಿಕ ಉಡುಗೆ ತೊಡುಗೆ ತಯಾರಿಸುವುದು ಸೇರಿ ಇತರೆ ಚಟುವಟಿಕೆಗಳ ಕಲಾಕೌಶಲ ತೋರಿಸುವ ಮೂಲಕ ಇಂದು ರಾಜ್ಯ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಪ್ರತಿಭೆ ಅನಾವರಣ ಮಾಡಿರುವ ಮಹಿಳಾ ಸ್ವಸಹಾಯ ಸಂಘಗಳು ನಮ್ಮಲ್ಲಿವೆ ಎಂದರು.
ನಿಮ್ಮ ಅಕ್ಕಪಕ್ಕದ ಸಮಾನ ಮನಸ್ಕ ಮಹಿಳೆಯರು ಒಂದುಗೂಡಿ ಒಂದು ಸಂಘ ರಚಿಸಿ. ಅದರ ಅಭಿವೃದ್ಧಿ ಕುರಿತು ಚರ್ಚಿಸುವ ಮೂಲಕ ಬ್ಯಾಂಕ್ನಲ್ಲಿ ಸಂಘದ ಹೆಸರಿಗೆ ಒಂದು ಉಳಿತಾಯ ಖಾತೆ ತೆರೆದು, ಸರ್ಕಾರ ಯಾವ ಯೋಜನೆಯಡಿ, ಯಾವ ಉದ್ದೇಶ ಸಾಧನೆಗೆ ಆರ್ಥಿಕ ಸಹಾಯ ನೀಡಿದೆ ಅನ್ನುವುದು ಮನಗಂಡು, ಅದರ ಸಾಧನೆಯ ದಿಸೆಯಲ್ಲಿ ಹಣ ಬಳಕೆಯಾದರೆ ಆರ್ಥಿಕವಾಗಿ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಕಿವಿಮಾತು ಹೇಳಿದರು.
ತಾಪಂ ಇಒ ಬಸವರಾಜ ಶರಬೈ, ಎಸ್.ಎಸ್.ಖಾದ್ರೊಳ್ಳಿ, ನರೇಗಾ ಯೋಜನೆಯ ಸಹಾಯಕ ನಿರ್ದೇಶಕ ಚಂದ್ರಶೇಖರ ಪವಾರ, ರಾಮಚಂದ್ರ ಬಸೂದೆ, ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎನ್.ಕೆ.ಭಗಾಯತ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಅಜಿಮುದ್ಧೀನ್, ಎಂಡಿ ಅಸಾದ್, ಬೀರಪ್ಪ, ಬನ್ನಪ್ಪ ಬೈಟಪುಲ್ಲಿ, ಪಿಡಿಒ ನೀಲಕಂಠ ಶಹಾಪುರಕರ್, ಗಾಯತ್ರಿ, ಕಾಶೀನಾಥ ಇದ್ದರು.