

ನೆಲಮಂಗಲ: ಸಹಕಾರ ಸಂಘಗಳು ಯಶಸ್ವಿಯಾಗಿ ಮುನ್ನಡೆಯಲು ಸದಸ್ಯರ ಸಹಕಾರ ತುಂಬಾ ಮುಖ್ಯ ಎಂದು ತಾಲೂಕು ವ್ಯವಸಾಯೋತ್ಪನ್ನಗಳ ಮಾರಾಟ ಸಹಕಾರ ಸಂಘ ನಿಯಮಿತದ ಅಧ್ಯಕ್ಷ ಕೆ.ಆರ್. ಗುರುಪ್ರಕಾಶ್ ಅಭಿಪ್ರಾಯಪಟ್ಟರು.
ನಗರದ ಸುಭಾಷ್‌ನಗರ ಬಳಿಯ ಗೋಪಿ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಟಿಎಪಿಸಿಎಂಎಸ್ ಮಂಗಳವಾರ ಆಯೋಜಿಸಿದ್ದ 72ನೇ ಸರ್ವಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದರು.
ಸತತ ಏಳು ದಶಕಗಳಿಂದ ತಾಲೂಕಿನಾದ್ಯಂತ ರೈತರಿಗೆ ಅನುಕೂಲ ಮಾಡಿಕೊಂಡು ಬರುತ್ತಿರುವ ಕೀರ್ತಿ ಸಂಘದ್ದಾಗಿದೆ. ಸಾವಿರಾರು ರೈತರನ್ನು ಒಳಗೊಂಡು ರಚನೆಯಾಗಿರುವ ಸಂಘ ನಿತ್ಯ ರೈತರ ಪರವಾಗಿ ಹಾಗೂ ಅಭಿವೃದ್ಧಿ ಪರ ಕೆಲಸ ಕಾರ್ಯ ಮಾಡುತ್ತಿದೆ. ಕೆಲ ಸದಸ್ಯರು ನೀಡಿರುವ ಸಲಹೆ, ಸೂಚನೆಗಳನ್ನು ಕಾರ್ಯಚಟುವಟಿಕೆಯಲ್ಲಿ ಅಳವಡಿಸಿಕೊಳ್ಳಲಾಗುವುದು ಎಂದರು.
ಸಂಘದ ಎಲ್ಲ ಸದಸ್ಯರಿಗೂ ಸ್ಮಾರ್ಟ್‌ಕಾರ್ಡ್ ಸೌಲಭ್ಯ ಕಲ್ಪಿಸಬೇಕು, ಜನತಾ ಬಜಾರ್ ಸಮಯವನ್ನು ವಿಸ್ತರಿಸಬೇಕು. ಸದಸ್ಯರಿಗೆ ಸಂಘದ ಸೌಲಭ್ಯಗಳ ಮಾಹಿತಿ ಕೊರತೆ ಇದ್ದು, ಇದನ್ನು ನೀಗಿಸಬೇಕು ಎಂಬುದು ಸೇರಿ ಹಲವು ವಿಷಯಗಳ ಬಗ್ಗೆ ಚರ್ಚಿಸಲಾಯಿತು.
ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಹೆಚ್ಚಿನ ಅಂಕಗಳಿಸಿದ ಸಂಘದ ಸದಸ್ಯರ ಮಕ್ಕಳಿಗೆ 2 ಸಾವಿರ ರೂ. ಸಹಿತ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಸಂಘದ ನಿರ್ದೇಶಕರಾದ ಬಿ.ಎಚ್. ಶಿವರಾಮಯ್ಯ, ಡಿ.ಜೆ. ಜಗಜ್ಯೋತಿ ಬಸವೇಶ್ವರ, ಜಿ. ಸಂಪತ್, ಬಿ.ಎನ್. ನರಸಿಂಹಮೂರ್ತಿ, ನಾಗಭೂಷಣ್, ಟಿ.ಎಸ್. ಮೋಹನ್‌ಕುಮಾರ್, ಪಿ. ವೀರಮಾರೇಗೌಡ, ಜಿ. ಮಂಜುಳಾ, ಹನುಮಂತಯ್ಯ, ಮಹಮದ್ ಸಿರಾಜ್ ಅಹಮ್ಮದ್, ಸುರೇಶ್, ಮುಖಂಡರಾದ ದೇಗನಹಳ್ಳಿ ಸುರೇಶ್, ಹನುಮೇಗೌಡ ಮತ್ತಿತರರು ಇದ್ದರು.