

ವಿರಾಜಪೇಟೆ: ಸೇವಾ ಮನೋಭಾವದಿಂದ ಉದಯವಾದ ಸಂಸ್ಥೆಗಳು ಪರಿಮಿತಿಯೊಳಗೆ ಸಮಾಜದ ಒಳಿತಿಗಾಗಿ ಕಾರ್ಯನಿರ್ವಹಿಸು ವಂತಾಗಬೇಕು ಎಂದು ಲಯನ್ಸ್ ಕ್ಲಬ್ ಮಾಜಿ ಪ್ರಾಂತೀಯ ಅಧ್ಯಕ್ಷ ಧನು ಉತ್ತಯ್ಯ ಹೇಳಿದರು.
ಕೊಡವ ಸಮಾಜದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಲಯನ್ಸ್ ಕ್ಲಬ್ನ 2023-24 ನೇ ಸಾಲಿನ ಆಡಳಿತ ಮಂಡಳಿಯ ಪದಗ್ರಹಣ ಸಮಾರಂಭದಲ್ಲಿ ಆಡಳಿತ ಮಂಡಳಿಗೆ ಪ್ರಮಾಣ ವಚನ ಬೋಧಿಸಿ ಮಾತನಾಡಿದ ಅವರು, ಸಮಾಜಕ್ಕೆ ಒಳಿತಾಗುವ ಕೆಲಸಗಳನ್ನು ಸಂಸ್ಥೆಗಳು ರೂಪಿಸಬೇಕು, ಜತೆಗೆ ಶಿಕ್ಷಣ, ಆರೋಗ್ಯ, ಕ್ರೀಡೆ ಸೇರಿದಂತೆ ದೀನ ದಲಿತರ ಸಮಸ್ಯೆಗಳನ್ನು ಆಲಿಸಿ ಅವರ ಸೇವೆಗೂ ಮುಂದಾಗಬೇಕು ಎಂದು ಸಲಹೆ ನೀಡಿದರು.
ಕ್ಲಬ್ನ ನಿರ್ಗಮಿತ ಅಧ್ಯಕ್ಷ ಪಿ.ಟಿ ನರೇಂದ್ರ ಮಾತನಾಡಿ, 2022-23 ನೇ ಸಾಲಿನಲ್ಲಿ ವಿರಾಜಪೇಟೆ ಘಟಕದಿಂದ ಹೆಚ್ಚು ಕಾರ್ಯಕ್ರ ಮಗಳನ್ನು ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
ಕ್ಲಬ್ ಅಧ್ಯಕ್ಷರಾಗಿ ಲ.ಕರ್ಣಂಡ ಜಯ, ಕಾರ್ಯದರ್ಶಿಗಳಾಗಿ ಪಟ್ಟಡ ವಿಕ್ರಂ ಚೆಂಗಪ್ಪ, ಕೋಶಾಧಿಕಾರಿಗಳಾಗಿ ಕೆ.ಪಿ.ನಿಯಾಜ್ ಆಯ್ಕೆಗೊಂಡರು. ಉಪಾಧ್ಯಕ್ಷರಾಗಿ ಪ್ರಧಾನ್ ತಮ್ಮಯ್ಯ, ಪಿ.ಜಿ ಸುಬ್ಬಯ್ಯ, ಅಜಿತ್, ಆಡಳಿತಾಧಿಕಾರಿಯಾಗಿ ತ್ರಿಷು ಗಣಪತಿ ಆಯ್ಕೆಯಾದರು.
ಕಾರ್ಯಕ್ರಮದಲ್ಲಿ ಪ್ರಾಂತೀಯ ಅಧ್ಯಕ್ಷ ನವೀನ್ ಅಂಬೇಕಲ್, ವಲಯ ಅಧ್ಯಕ್ಷ ಎಂ.ಎ ಬಾಲಕೃಷ್ಣ ಇತರರಿದ್ದರು.