

ಯಾದಗಿರಿ: ಕರೊನಾ ವೈರಸ್ ಹರಡುವಿಕೆಯನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಸರ್ಕಾರ ಲಾಕ್ಡೌನ್ ಜಾರಿ ಮಾಡಿದೆ. ಇಂಥ ತುರ್ತು,ಪರಿಸ್ಥಿತಿಯನ್ನು ನಿಭಾಯಿಸಲು ಸರ್ಕಾರದ ಜತೆಗೆ ಸಂಘ-ಸಂಸ್ಥೆಗಳ ಸಹಕಾರ, ನೆರವು ಅತ್ಯಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಹೇಳಿದರು.
ಡಿಸಿ ಕಚೇರಿ ಸಭಾಂಗಣದಲ್ಲಿ ಶನಿವಾರ ಸಂಜೆ ಸಂಘ-ಸಂಸ್ಥೆ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ಅವರು, ಜಿಲ್ಲೆಯಲ್ಲಿ ಇದುವರೆಗೆ ಕರೊನಾ ಪಾಸಿಟಿವ್ ಕೇಸ್ ವರದಿಯಾಗದಿರುವುದು ಸಮಾಧಾನಕರ ಸಂಗತಿ. ಮೇ 3ರವರೆಗೆ ಲಾಕ್ಡೌನ್ ಜಾರಿಯಲ್ಲಿದೆ. ಕರೊನಾನಿರ್ನಾಮಕ್ಕೆ ಇದುವರೆಗೆ ಔಷಧ ಕಂಡುಹಿಡಿದಿಲ್ಲ. ಆದ್ದರಿಂದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದೇ ಏಕೈಕ ಮಾರ್ಗ. ಲಾಕ್ಡೌನ್ ಸಡಿಲಿಕೆ ಅಥವಾ ಮುಂದಿನ ಯಾವುದೇ ಬದಲಾವಣೆಗಳಿಗೆ ನಾವು ಸಿದ್ಧರಾಗಬೇಕಿದೆ. ಈ ನಿಟ್ಟಿನಲ್ಲಿ ಎನ್ಜಿಒ, ಸಂಘ-ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಸಭೆ ಕರೆದು ಚರ್ಚಿಸಲಾಗಿದೆ ಎಂದರು.
ಸಂಘ-ಸಂಸ್ಥೆಗಳು ಮತ್ತು ಸಾರ್ವಜನಿಕರು ಸ್ವ-ಇಚ್ಛೆಯಿಂದ ದಾನ, ರೈತರಿಗೆ ನೆರವು ನೀಡುತ್ತಿರುವುದು ಶ್ಲಾಘನೀಯ. ದಾನಿಗಳು ಹೊಲಗಳಿಗೆ ಹೋಗಿ ಹಣ್ಣುಗಳನ್ನು ಖರೀದಿಸುತ್ತಿರುವುದರಿಂದ ರೈತರು ನಿಟ್ಟುಸಿರು ಬಿಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ವೈದ್ಯರು ಮತ್ತು ರೋಗಿಗಳು, ರೈತರು ಮತ್ತು ಮಾರಾಟಗಾರರು, ವ್ಯಾಪಾರಿಗಳು ಮತ್ತು ಗ್ರಾಹಕರ ಮಧ್ಯೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಸಂಘ-ಸಂಸ್ಥೆಗಳಿಂದ ಇನ್ನೂ ಹೆಚ್ಚಿನ ನೆರವಿನಹಸ್ತ ಬೇಕಿದೆ. ಈ ನಿಟ್ಟಿನಲ್ಲಿ ವಾಹನ, ಮಾಸ್ಕ್, ಸ್ಯಾನಿಟೈಸರ್, ಮಾನವ ಸಂಪನ್ಮೂಲ ಸೇರಿ ಇತರ ರೀತಿಯಲ್ಲಿ ನೆರವು ನೀಡಬಹುದು. ವಾಹನ ವ್ಯವಸ್ಥೆ ಮಾಡಿದರೆ ಜಿಲ್ಲೆಯ ಯಾವುದೇ ಹಳ್ಳಿಗಳಲ್ಲಿ ಜ್ವರ ಬಂದ ಅಥವಾ ಇತರ ರೋಗಿಗಳನ್ನು ಪ್ರತ್ಯೇಕವಾಗಿ ಆಸ್ಪತ್ರೆಗೆ ಕರೆದೊಯ್ಯಲು, ವಸ್ತುಗಳ ಹೋಂ ಡೆಲಿವರಿಯಂತಹ ಕಾರ್ಯಗಳಿಗೆ ನೆರವಾಗುತ್ತದೆ ಎಂದು ತಿಳಿಸಿದರು.
ಬಿಜೆಪಿ ಮತ್ತು ರೆಡ್ಕ್ರಾಸ್ ಜಿಲ್ಲಾಧ್ಯಕ್ಷ ಡಾ.ಶರಣಭೂಪಾಲರೆಡ್ಡಿ ನಾಯ್ಕಲ್, ಅಜೀಂ ಪ್ರೇಮ್ಜಿ ಫೌಂಡೇಷನ್ ಪ್ರತಿನಿಧಿ ಅನೀಲ್ ಮಾತನಾಡಿ, ಕಲಿಕಾ ಟಾಟಾ ಟ್ರಸ್ಟ್ನ ಪ್ರತಿನಿಧಿ ಧನರಾಜ, ಜಿಪಂ ಸಿಇಒ ಶಿಲ್ಪಾ ಶರ್ಮಾ,, ಸಹಾಯಕ ಆಯುಕ್ತ ಶಂಕರಗೌಡ ಎಸ್.ಸೋಮನಾಳ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಲ್ಲನಗೌಡ ಎಸ್.ಪಾಟೀಲ್ ಇದ್ದರು.