'ಸಂಗೀತವಿಲ್ಲದ ಜೀವನ ರೆಕ್ಕೆಗಳಿಲ್ಲದ ಹಕ್ಕಿಯಂತೆ'

1
Published on

ಮೈಸೂರು: ಸಂಗೀತ ಇಲ್ಲದ ಜೀವನ, ರೆಕ್ಕೆ ಇಲ್ಲದ ಹಕ್ಕಿಯಂತಾಗುತ್ತದೆ. ಆದ್ದರಿಂದಲೇ ನಮ್ಮ ಪೂರ್ವಿಕರ ಕಾಲದಿಂದಲೂ ಸಂಗೀತ, ಕಲೆ, ಸಾಹಿತ್ಯ, ಸಂಸ್ಕೃತಿಗೆ ಮಹತ್ವ ನೀಡಿಕೊಂಡು ಬರಲಾಗಿದೆ ಎಂದು ಮಹಾರಾಣಿ ಮಹಿಳಾ ಕಾಲೇಜಿನ ಪ್ರಭಾರ ಪ್ರಾಂಶುಪಾಲ ಡಾ.ಬಸವರಾಜು ಅಭಿಪ್ರಾಯಪಟ್ಟರು.
ಶ್ರೀಮತಿ ಎಂ. ಜಯಲಕ್ಷ್ಮಮ್ಮಣ್ಣಿ ಸ್ಮಾರಕ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ರಾಜ್ಯ ಮಟ್ಟದ ಅಂತರ ಕಾಲೇಜು ಸಂಗೀತ ಸ್ಪರ್ಧೆ ಹಾಗೂ ದಿವಂಗತ ಬಿ. ಸಣ್ಣೇಗೌಡ ಸ್ಮಾರಕ ಅಂತರ ಕಾಲೇಜು ಕನ್ನಡ ಚರ್ಚಾ ಸ್ಪರ್ಧೆ ಉದ್ಘಾಟನೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಲೆ ಮತ್ತು ಸಂಸ್ಕೃತಿ ನಾಣ್ಯದ ಎರಡು ಮುಖಗಳಿದ್ದಂತೆ. ಸಂಗೀತಕ್ಕೆ ತನ್ನದೇ ಆದ ಪಲ್ಲವಿ, ವೈಶಿಷ್ಟೃ ಅನುಭವವಿದೆ. ವಿಶೇಷವಾಗಿ ಕರ್ನಾಟಕದ ದೇಸಿ ಸಂಗೀತದಲ್ಲಿ ಉತ್ತಮ, ಸಾಹಿತ್ಯ, ಮೌಲ್ಯಭರಿತ ಸಂಗೀತವನ್ನು ಕಾಣಬಹುದಾಗಿದೆ. ಸರ್ವ ರೋಗಕ್ಕೂ ಸಂಗೀತವೇ ಮದ್ದು. ಸಂಗೀತವಿಲ್ಲದ ಜೀವನ ರೆಕ್ಕೆಗಳಿಲ್ಲದ ಹಕ್ಕಿಯ ಹಾಗೆ. ಅದಕ್ಕಾಗಿಯೇ ಗಿರೀಶ್ ಕಾರ್ನಾಡ್ ಅವರು ಬೆಳಕಿಲ್ಲದ ದಾರಿಯಲ್ಲಿ ಸಾಗಬಹುದು. ಅದರೆ ಸಂಗೀತ ಮತ್ತು ಕನಸುಗಳಿಲ್ಲದ ದಾರಿಯಲ್ಲಿ ಸಾಗುವುದು ಅಸಾಧ್ಯ ಎಂದು ಬಣ್ಣಿಸಿದ್ದಾರೆ ಎಂದರು.
ಸ್ಫರ್ಧೆಗೆ ಚಾಲನೆ ನೀಡಿದ ಭಾರತೀಯ ಸ್ಟೇಟ್ ಬ್ಯಾಂಕ್ ಶಿವರಾಂಪೇಟೆ ಶಾಖೆಯ ವ್ಯವಸ್ಥಾಪಕ ರಾಘವೇಂದ್ರ ಬಲ್ಲಾಳ್ ಅವರು, ಚರ್ಚಾ ಸ್ಪರ್ಧೆಯ ಲಕ್ಷಣಗಳು, ಪ್ರಯೋಜನಗಳನ್ನು ತಿಳಿಸಿಕೊಟ್ಟು ವಿದ್ಯಾರ್ಥಿಗಳಿಗೆ ಶುಭ ಕೋರಿದರು.
ಕಾಲೇಜಿನ ಸಾಂಸ್ಕೃತಿಕ ವೇದಿಕೆಯ ಸಂಚಾಲಕ ಡಾ.ಜಯರಾಜ್, ಖಜಾಂಚಿ ಡಾ.ಬಿ.ಸವಿತಾ , ವಿದ್ಯಾರ್ಥಿ ಅಧ್ಯಕ್ಷೆ ಪ್ರಿಯಾಂಕಾ, ಕಾರ್ಯದರ್ಶಿ ಜೈಬಾರ ಇತರರು ಇದ್ದರು.
ಕರ್ನಾಟಕ ಶಾಸ್ತ್ರೀಯ ಸಂಗೀತ, ಶಾಸ್ತ್ರೀಯ ವಾದ್ಯ ಸಂಗೀತ, ತಂತಿ ವಾದ್ಯ, ತಾಳವಾದ್ಯ, ಗಾಳಿವಾದ್ಯ, ಕನ್ನಡ ಭಾವಗೀತೆಗಳು, ದಾಸರ ಪದಗಳು ವಿಭಾಗಗಳಲ್ಲಿ ಸ್ಪರ್ಧೆ ನಡೆಸಲಾಯಿತು. ರಾಜ್ಯದ ವಿವಿಧ ಕಾಲೇಜುಗಳ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net