

ಮೈಸೂರು: ಸಂಗೀತದ ರಸದೌತಣ, ನಯನ ಮನೋಹರ ನರ್ತನದ ವೈಯಾರ, ಯುವ ಮನಸುಗಳ ಸಡಗರ!
ಗುರುವಾರ ನಡೆದ 2ನೇ ದಿನದ ‘ಯುವ ಸಂಭ್ರಮ’ದಲ್ಲಿ ಕಂಡು ಬಂದ ವರ್ಣರಂಜಿತ ದೃಶ್ಯಾವಳಿ ಇದು.
ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ನಗರದ ಮಾನಸಗಂಗೋತ್ರಿ ಬಯಲುರಂಗ ಮಂದಿರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಯುವ ಜನರ ಜೋಷ್ ಹೊಳೆಯಾಗಿ ಹರಿಯಿತು.
ಮೈಸೂರು, ಬೆಂಗಳೂರು, ಹಾಸನ, ಮಂಡ್ಯ ರಾಮನಗರ, ಭದ್ರಾವತಿ ಸೇರಿದಂತೆ ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ್ದ ಕಾಲೇಜುಗಳ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಹಿರಿ ಹಿರಿ ಹಿಗ್ಗಿದರು. ಜತೆಗೆ, ನೆರೆದವರಿಗೂ ಮನರಂಜನೆ ಉಣಬಡಿಸಿದರು.
ಇದರೊಂದಿಗೆ ಯುವ ಸಮುದಾಯದ ಪ್ರತಿಭೆ ಅನಾವರಣಕ್ಕೆ ಅವಕಾಶ ನೀಡಿದ ‘ಯುವ ಸಂಭ್ರಮ’ ಕಳೆಗಟ್ಟಿತ್ತು. ನಾಡು-ನುಡಿಯ ಸಂಸ್ಕೃತಿಯನ್ನು ತೆರೆದಿಡುವ ಪ್ರಯತ್ನವನ್ನು ವಿದ್ಯಾರ್ಥಿಗಳು ತಮ್ಮ ನೃತ್ಯದ ಮೂಲಕ ಮಾಡಿ ಗಮನ ಸೆಳೆದರು.
ಕುವೆಂಪುನಗರದ ಬಿಜಿಎಸ್ ಬಿಎಡ್ ಕಾಲೇಜಿನ ವಿದ್ಯಾರ್ಥಿಗಳು ರಾಷ್ಟ್ರೀಯ ಭಾವೈಕ್ಯತೆಯ ಗೀತೆಗಳಿಗೆ ಹೆಜ್ಜೆ ಹಾಕಿ ಯುವ ಜನರನ್ನು ಆಕರ್ಷಿಸಿದರು.
ಕಿರುಗಾವಲು ಗ್ರಾಮದಿಂದ ಬಂದಿದ್ದ ವಿದ್ಯಾರ್ಥಿಗಳು ರೈತರ ಗೀತೆಗಳಿಗೆ ನರ್ತನ ಮಾಡಿದರು. ‘ಹೊಸ ಸುಗ್ಗಿ’, ‘ನಮ್ಮಮ್ಮ ನಮ್ಮಮ್ಮ ಭೂಮಿ ತಾಯಮ್ಮ’ ಹಾಡಿನೊಂದಿಗೆ ಕೃಷಿ ಸಂಸ್ಕೃತಿಯನ್ನು ತೆರೆದಿಟ್ಟರು.
ಬೆಂಗಳೂರಿನ ಮತ್ತಿಕೆರೆಯ ರಾಯಲ್ ಡಿಗ್ರಿ ಕಾಲೇಜಿನ ವಿದ್ಯಾರ್ಥಿಗಳು ಶಿವತಾಂಡವ ನೃತ್ಯದೊಂದಿಗೆ ವೇದಿಕೆ ಮೇಲೆ ಅಬ್ಬರಿಸಿದರು. ಹಾಸನ ಜಿಲ್ಲೆಯ ಹೊಳೆನರಸಿಪುರದ ಎಚ್.ಡಿ.ದೇವೇಗೌಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಶಿವತಾಂಡವ ಗೀತೆಗೆ ಹೆಜ್ಜೆ ಹಾಕಿದರು.
ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ‘ಕನ್ನಡ ನಾಡು ನುಡಿ’ ಕುರಿತಾಗಿರುವ ಹಾಡುಗಳಿಗೆ ಹೆಜ್ಜೆ ಹಾಕಿದರು. ಡಿ ಬನುಮಯ್ಯ ಕಲಾ ಮತ್ತು ವಾಣಿಜ್ಯ ಕಾಲೇಜಿನ ವಿದ್ಯಾರ್ಥಿಗಳು ದೇಶಭಕ್ತಿ ನೃತ್ಯ ಪ್ರದರ್ಶನ ಮಾಡಿದರು.
ನಗರದ ಶ್ರೀಕಂಠೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ‘ಮೊಬೈಲ್‌ನಿಂದ ಯುವಕರ ನಡಿಗೆ ಪುಸ್ತಕದ ಕಡೆಗೆ’ ಸಂದೇಶವನ್ನು ನೃತ್ಯದ ಮೂಲಕ ಸಾರಿದರು. ಈ ಬಗ್ಗೆ ಅರಿವು ಮೂಡಿಸಿ ಗಮನ ಸೆಳೆದರು. ಆದಿಚುಂಚನಗಿರಿ ಪದವಿ ಪೂರ್ವ ಕಾಲೇಜಿನ ತಂಡವು ಸಮಾನತೆಯೊಂದಿಗೆ ಮಹಿಳಾ ಸಬಲೀಕರಣ ಕುರಿತಾದ ನೃತ್ಯವನ್ನು ಪ್ರಸ್ತುತ ಪಡಿಸಿದರು.
ಕರ್ಣಕುಪ್ಪೆಯ ಎಸ್‌ಎನ್‌ಜಿಯು ಕಾಲೇಜಿನ ವಿದ್ಯಾರ್ಥಿಗಳು ವರ್ಷದ ಹಿಂದೆ ಮೃತಪಟ್ಟಿರುವ ಅಂಬಾರಿ ಆನೆ ಅರ್ಜುನ ಸ್ಮರಣೆ ಮಾಡಿದರು. ನರ್ತನದೊಂದಿಗೆ ಆನೆಗೆ ನಮನ ಸಲ್ಲಿಸಿದ್ದು ನೋಡುಗರ ಮನಕಲಕಿತು. ಬಿಜಿಎಸ್ ಪ್ರಥಮ ದರ್ಜೆ ಕಾಲೇಜಿನ ತಂಡವು ವಿದ್ಯಾರ್ಥಿಗಳು ಆತ್ಮಹತ್ಯೆ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಮಾಡಿದರು.
58 ಕಾಲೇಜು ತಂಡಗಳು ನೃತ್ಯ ಪ್ರಸ್ತುತ ಪಡಿಸಿದವು. ಮೈಥಾಲಿಜಿ, ನಶಮುಕ್ತ ಭಾರತ, ಕನ್ನಡ ವೈಭವ, ಶಾಸ್ತ್ರೀಯ ಕಲೆಗಳು, ಇತಿಹಾಸ ಪೌರಾಣಿಕ, ನಾಲ್ವಡಿ ಕೃಷ್ಣರಾಜ ಒಡೆಯರ್, ಭಾರತೀಯ ಯೋಧರ ಪಾತ್ರ, ರಾಷ್ಟ್ರೀಯ ಭಾವೈಕ್ಯತೆ, ಪರಿಸರ ಸಂರಕ್ಷಣೆ, ಮೈಸೂರು ಮಹಾರಾಜರ ಕೊಡುಗೆ ಸೇರಿದಂತೆ ವಿವಿಧ ಥೀಮ್‌ಗಳಿಗೆ ವಿದ್ಯಾರ್ಥಿಗಳು ನೃತ್ಯ ಮಾಡಿ ಪ್ರೇಕ್ಷಕರನ್ನು ರಂಜಿಸಿದರು.
ಈ ನಡುವೆ, ನಾಯಕ ನಟ ರಾಣಾ, ನಟಿ ಪ್ರಿಯಾಂಕಾ ಅವರು ಇತ್ತೀಚಿಗೆ ಬಿಡುಗಡೆಯಾದ ‘ಏಳುಮಲೆ’ ಸಿನಿಮಾದ ಕುರಿತು ಪ್ರಚಾರ ಮಾಡಿದರು. ವೇದಿಕೆ ಏರಿದಾಗ ಜನರ ಶಿಳ್ಳೆ ಚಪ್ಪಾಳೆ ತಟ್ಟಿ ಬೆಂಬಲ ಸೂಚಿಸಿದರು.
ಇಲ್ಲಿಗೆ ದೌಡಾಯಿಸಿದ್ದ ನಗರದ ವಿವಿಧ ಕಾಲೇಜಿನ ವಿದ್ಯಾರ್ಥಿಗಳು, ಮೈಸೂರು ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಯುವ ಸಂಭ್ರಮವನ್ನು ಕಣ್ತುಂಬಿಕೊಂಡರು. ವೇದಿಕೆಯಲ್ಲಿ ಕಲಾವಿದರು ನರ್ತನ ಮಾಡಿದರೆ, ಸಭಿಕರು ಸಹ ಕುಳಿತಲ್ಲೇ ಹೆಜ್ಜೆ ಹಾಕಿದರು. ಜನಪ್ರಿಯ ಸಿನಿಮಾಗೀತೆಗಳನ್ನೂ ಗುನುಗಿದರು.