ಸಂಗೀತಕ್ಕಿದೆ ಮಾನವ ಹೃದಯ ಬೆಸೆಯುವ ಶಕ್ತಿ

11 vikram 2
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಭಾರತೀಯ ಸಂಗೀತವು ಮಾನವ ಹೃದಯಗಳನ್ನು ಬೆಸೆಯುವ ಅಪಾರ ಶಕ್ತಿ ಹೊಂದಿದೆ ಎಂದು ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ ಅಭಿಪ್ರಾಯಪಟ್ಟರು.
ನಗರದ ಯಾಲಕ್ಕಿಶೆಟ್ಟರ್‌ಕಾಲನಿ ಬಸವಶಾಂತಿ ಮಿಷನ್ ಆವರಣದಲ್ಲಿನ ಸೌಹಾರ್ದ ಸಮುದಾಯ ಭವನದಲ್ಲಿ ಬಸವಶಾಂತಿ ಮಿಷನ್ ಟ್ರಸ್ಟ್ ವತಿಯಿಂದ ಭಾನುವಾರ ಏರ್ಪಡಿಸಿದ್ದ ಮಾನವ ಏಕತಾ ಸಂಗೀತ ಸಮಾವೇಶ ಹಾಗೂ ‘ಬಸವ ಶಾಂತಿ’ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಂಗೀತ ಆಸ್ವಾದಿಸುವ ಆಸಕ್ತರಲ್ಲಿ ವಿಶೇಷ ಗುಣಗಳಿರುವುದನ್ನು ಕಾಣಬಹುದು. ನಮ್ಮ ದೇಶದ ಏಕತೆಗೆ ಸಂಗೀತಗಾರರ ಕೊಡುಗೆ ಅಪಾರ. ಅಂತರ್ ರಾಷ್ಟ್ರೀಯ ತಬಲಾ ವಾದಕ ಪಂ. ಸತೀಶ ಹಂಪಿಹೊಳಿ ಅವರ ಅಮೂಲ್ಯ ಸೇವೆ ಪರಿಗಣಿಸಿ ಪ್ರಶಸ್ತಿ ನೀಡಿರುವುದು ಶ್ಲಾಘನೀಯ ಎಂದರು.
ಗಾಯಕ ಡಾ. ಮೃತ್ಯುಂಜಯ ಶೆಟ್ಟರ್ ಮಾತನಾಡಿ, ಭಾರತದ ಸಂಗೀತ ಪರಂಪರೆ ವಿಶ್ವಕ್ಕೆ ಅಮೂಲ್ಯ ಕೊಡುಗೆ ನೀಡಿದೆ. ಸಂಗೀತಕ್ಕೆ ತನ್ನದೆ ಆದ ಇತಿಹಾಸ, ಪರಂಪರೆ ಇದೆ. ಮನಸ್ಸನ್ನು ಹಗುರವಾಗಿಸುವ ಸಂಗೀತದ ಶಕ್ತಿ ವರ್ಣನಾತೀತ. ಉತ್ತರ ಕರ್ನಾಟಕದವರೇ ಆದ ಡಾ. ಸತೀಶ ಹಂಪಿಹೊಳಿ ತಬಲಾ ವಾದನ ಕ್ಷೇತ್ರದಲ್ಲಿ ಅಂತರ್ ರಾಷ್ಟ್ರ ಮಟ್ಟದ ಖ್ಯಾತಿ ಹೊಂದಿರುವುದು ನಮಗೆಲ್ಲ ಅಭಿಮಾನದ ಸಂಗತಿ. ಇಂತಹ ಸಾಧಕರಿಗೆ ಬಸವಶಾಂತಿ ಪ್ರಶಸ್ತಿ ನೀಡುವ ಮೂಲಕ ಅವರ ಸಾಧನೆ ಗುರುತಿಸಿದ್ದು ಸಂತಸದ ಸಂಗತಿ ಎಂದರು.
ಅಂತರ್ ರಾಷ್ಟ್ರೀಯ ತಬಲಾ ವಾದಕ ಪಂ. ಸತೀಶ ಹಂಪಿಹೊಳಿ ಅವರಿಗೆ ‘ಬಸವ ಶಾಂತಿ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ನಂತರ ಸಂಗೀತ ಕಾರ್ಯಕ್ರಮ ನಡೆಯಿತು.
ಪ್ರೊ. ಸೋಮಲಿಂಗ ಉಳ್ಳಿಗೇರಿ ಸ್ವಾಗತಿಸಿದರು. ಬಸವಶಾಂತಿ ಮಿಷನ್ ಅಧ್ಯಕ್ಷ ಮಹಾದೇವ ಹೊರಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಮಕ್ಕ ಹಪ್ಪಳದ ನಿರೂಪಿಸಿದರು. ಮಂಜುನಾಥ ಮೊಹರೆ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net