

ಚಿತ್ರದುರ್ಗ: ಸಂಗೀತಕ್ಕೆ ತಲೆಬಾಗದವರಿಲ್ಲ. ಹೀಗಾಗಿ ಎಲ್ಲರ ಮನಸ್ಸನ್ನು ಅರಳಿಸುವ ಶಕ್ತಿ ಹೊಂದಿದೆ ಎಂದು ಕನ್ನಡ ರಾಜೋತ್ಸವ ಪ್ರಶಸ್ತಿ ಪುರಸ್ಕೃತ ಓಬಳೇಶ್ ಹೇಳಿದರು.
ತರಾಸು ರಂಗಮಂದಿರದಲ್ಲಿ ಮದಕರಿನಾಯಕ ಸಾಂಸ್ಕೃತಿಕ ಕೇಂದ್ರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಮಂಗಳವಾರ ನಡೆದ ಕನ್ನಡ ರಾಜ್ಯೋತ್ಸವ, ಸಂಗೀತೋತ್ಸವದಲ್ಲಿ ಮಾತನಾಡಿದರು.
ಕೆಲಸ ಮಾಡಿ ದಣಿದಾಗ ಸಂಗೀತ ಆಲಿಸಿದರೆ, ದೈಹಿಕವಾಗಿ ಮತ್ತು ಮಾನಸಿಕವಾಗಿ ಉಲ್ಲಾಸ ಉಂಟಾಗಲಿದೆ. ಹಿಂದಿನ ಕಾಲದ ಜನರು ಹೆಚ್ಚಿನ ಸಮಯವನ್ನು ಇದಕ್ಕೆ ಮೀಸಲಿಡುತ್ತಿದ್ದ ಕಾರಣ ದೈಹಿಕ ಶ್ರಮ ಗೊತ್ತಾಗುತ್ತಿರಲಿಲ್ಲ ಎಂದರು.
ಕೇಂದ್ರದ ಅಧ್ಯಕ್ಷ ಗೋಪಾಲಸ್ವಾಮಿ ನಾಯಕ ಮಾತನಾಡಿ, ಸಂಗೀತ ಕಲೆಯನ್ನು ಉಳಿಸಿ, ಬೆಳೆಸಬೇಕೆಂಬ ನಿಟ್ಟಿನಲ್ಲಿ ಪ್ರತಿ ವರ್ಷವೂ ಕಾರ್ಯಕ್ರಮ ಆಯೋಜಿಸಿ ಕಲಾವಿದರನ್ನು ಪ್ರೋತ್ಸಾಹಿಸಲಾಗುತ್ತಿದೆ. ಸರ್ಕಾರ ಗುರುತಿಸಿ ಗೌರವ ನೀಡುವ ಅಗತ್ಯವಿದ್ದು, ಅದಕ್ಕಾಗಿ ಅರ್ಜಿ ಹಾಕುವ ಸಂಪ್ರದಾಯ ಬಿಡಬೇಕಿದೆ ಎಂದು ಒತ್ತಾಯಿಸಿದರು.
ಲೇಖಕ ಆನಂದಕುಮಾರ್, ಜಿಪಂ ಮಾಜಿ ಉಪಾಧ್ಯಕ್ಷ ಪಾಪಯ್ಯ, ಕಲಾವಿದರಾದ ಎಸ್.ವಿ.ಗುರುಮೂರ್ತಿ, ಸುಜಿತ್, ಭವ್ಯಾರಾಣಿ, ಕೌಶಲಾಧಿಕಾರಿ ಕಾಟೇಗೌಡ್ರು, ಕಣಿವೆ ಮಾರಮ್ಮ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ತಿಪ್ಪೇಸ್ವಾಮಿ, ಶ್ರೀನಿವಾಸ್ ಮಳಲಿ, ಓಬಯ್ಯ, ರವಿಕುಮಾರ್ ಇತರರಿದ್ದರು.