

ವಿಜಯವಾಣಿ ಸುದ್ದಿಜಾಲ ಧಾರವಾಡ
ಪ್ರಸ್ತುತ ಒತ್ತಡದ ಬದುಕಿನಲ್ಲಿ ಮನಸ್ಸನ್ನು ಅರಳಿಸಿ, ನೋವು ಮರೆಯಿಸಿ ಒತ್ತಡ ನಿವಾರಿಸುವ ಶಕ್ತಿ ಸಂಗೀತಕ್ಕಿದೆ ಎಂದು ಉದ್ಯಮಿ ವಿಕ್ರಮ ಶಿರೂರ ಅಭಿಪ್ರಾಯಪಟ್ಟರು.
ನಗರದ ಸರಸ್ವತಿ ಸಂಗೀತ ವಿದ್ಯಾಲಯ, ಬೆಂಗಳೂರಿನ ಸಪ್ತಕ ಸಂಸ್ಥೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಇಲ್ಲಿನ ಆಲೂರು ವೆಂಕಟರಾವ್ ಸಭಾಭವನದಲ್ಲಿ ಆಯೋಜಿಸಿದ್ದ ಗಾಯನ-ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಧಾರವಾಡ ಸಾಂಸ್ಕೃತಿಕ ನಗರಿ. ಇಲ್ಲಿ ಅನೇಕ ಸಾಧಕರು ತಮ್ಮ ಸಾಧನೆ ಮೂಲಕವೇ ಈ ನೆಲಕ್ಕೊಂದು ಅಸ್ಮಿತೆ ತಂದು ಕೊಟ್ಟಿದ್ದಾರೆ. ಅವರು ಹಾಕಿಕೊಟ್ಟ ಪರಂಪರೆ ಮುಂದುವರಿಸುವ ಹೊಣೆಗಾರಿಕೆ ಇಂದಿನ ಪೀಳಿಗೆ ಮೇಲಿದೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಶಿಕ್ಷಣ ತಜ್ಞ ಡಾ. ಎಸ್.ಎಂ.ಶಿವಪ್ರಸಾದ, ಸಂಗೀತಕ್ಕೂ ಗಣಿತ, ವಿಜ್ಞಾನಕ್ಕೂ ಅವಿನಾಭಾವ ಸಂಬಂಧವಿದೆ. ಆದರೆ ಸಂಗೀತಗಾರರು ಗಣಿತ ಕಲಿಯುವುದಿಲ್ಲ. ಗಣಿತರು ಸಂಗೀತದ ಕುರಿತು ಆಸಕ್ತಿ ತೋರುವುದಿಲ್ಲ. ಈ ನಿಟ್ಟಿನಲ್ಲಿ ಇನ್ನಷ್ಟು ಸಂಶೋಧನೆಗಳಾಗಬೇಕಿದೆ. ಸಂಗೀತಕ್ಕೆ ಭೌತಿಕ ನೋವು ಮರೆಯಿಸುವ ಜತೆಗೆ ಮಾನಸಿಕ ಸಂತೋಷ ನೀಡುವ ಸಾಮರ್ಥ್ಯವಿದೆ. ಇದು ಸಂಶೋಧನೆಗಳಿಂದ ಸಾಬೀತಾಗಿದೆ. ಬದುಕನ್ನು ಛಂದಗೊಳಿಸಲು ಕಲೆ, ಸಾಹಿತ್ಯ, ಸಂಗೀತದಂತಹ ಪ್ರಕಾರಗಳು ತಮ್ಮದೇ ಆದ ಕೊಡುಗೆ ನೀಡುತ್ತವೆ ಎಂದರು.
ಡಾ. ಶಶಿಧರ ನರೇಂದ್ರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ, ಸಪ್ತಕದ ಜಿ.ಎಸ್.ಹೆಗಡೆ, ಉದಯ ದೇಸಾಯಿ, ವಿದುಷಿ ರಾಧಾ ದೇಸಾಯಿ, ಇತರರು ಇದ್ದರು.
ನಂತರ ಮಹಾರಾಷ್ಟ್ರ ನಾಂದೇಡನ ಗಾಯಕ ಧನಂಜಯ ಜೋಶಿ ಗಾಯನ ಪ್ರಸ್ತುತಪಡಿಸಿದರು. ಅವರಿಗೆ ಶ್ರೀಧರ ಮಾಂಡ್ರೆ ತಬಲಾ, ಬಸವರಾಜ ಹಿರೇಮಠ ಹಾಮೋರ್ನಿಯಂ ಸಾಥ ನೀಡಿದರು.