

ಬೀದರ್: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಗುಲ್ಬರ್ಗ ವಿವಿ ಗೌರವ ಡಾಕ್ಟರೇಟ್ ಗೆ ಭಾಜನರಾದ ಹಿರಿಯ ಸಂಗೀತ ಕಲಾವಿದ ಡಾ.ಪಂಡಿತ ವೀರಭದ್ರಪ್ಪ ಗಾದಗಿ ಅವರನ್ನು ನಗರದಲ್ಲಿ ಮಾ.12ರಂದು ನಡೆಯಲಿರುವ ರಾಜ್ಯ ಮಟ್ಟದ ಸಂಗೀತ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ.
ಗಾನಯೋಗಿ ಪಂಚಾಕ್ಷರ ಗವಾಯಿ ಸೇವಾ ಸಂಘ ಸಮ್ಮೇಳನ ಆಯೋಜಿಸಿದ್ದು, ಸಂಘದ ಸಭೆಯಲ್ಲಿ ಸರ್ವಾಧ್ಯಕ್ಷತೆ ಬಗ್ಗೆ ಸುದೀರ್ಘ ಚರ್ಚೆ ಬಳಿಕ ವೀರಭದ್ರಪ್ಪ ಗಾದಗಿ ಹೆಸರಿಗೆ ಸರ್ವಸಮ್ಮತ ಒಪ್ಪಿಗೆ ಸೂಚಿಸಲಾಯಿತು.
ಸೋಮವಾರ ಜೆ.ಪಿ. ನಗರದಲ್ಲಿರುವ ಗಾದಗಿ ಅವರ ಮನೆಗೆ ತೆರಳಿದ ಸಂಘದ ಪ್ರಮುಖರು, ಅಧಿಕೃತವಾಗಿ ಸಮ್ಮೇಳನ ವೀಳ್ಯ ನೀಡಿ ಗೌರವಿಸಿದರು. 82ರ ಹರೆಯದಲ್ಲೂ ಗಾದಗಿ ಸಂಗೀತ ಕ್ಷೇತ್ರಕ್ಕೆ ನೀಡುತ್ತಿರುವ ಸೇವೆಯನ್ನು ಕೊಂಡಾಡಿದರು.
ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಚಂದ್ರಶೇಖರ ಹೆಬ್ಬಾಳೆ, ಸಂಘದ ಅಧ್ಯಕ್ಷ ಪ್ರೊ.ಎಸ್.ವಿ. ಕಲ್ಮಠ, ಪ್ರಮುಖರಾದ ಡಾ.ಜಗನ್ನಾಥ ಹೆಬ್ಬಾಳೆ, ಪ್ರೊ.ಎಸ್.ಬಿ. ಬಿರಾದಾರ, ಪ್ರೊ.ಶಾಮಣ್ಣ ಬಿರಾದಾರ, ಶಂಕ್ರೆಪ್ಪ ಹೊನ್ನಾ, ಧನರಾಜ ಸ್ವಾಮಿ, ಸುರೇಶ ಚಿಟಗುಪ್ಪಕರ್, ಮುರಳಿ ನಾಶಿ, ವೀರಭದ್ರಪ್ಪ ಉಪ್ಪಿನ್, ಮಲ್ಲಿಕಾರ್ಜುನ ಸ್ವಾಮಿ ಇತರರಿದ್ದರು.
ಮಾರ್ಚ್ 12ರಂದು ಪೂಜ್ಯ ಡಾ.ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಪಂಚಾಕ್ಷರ ಗವಾಯಿಗಳ 76ನೇ ಪುಣ್ಯತಿಥಿ, ಡಾ.ಪಂ.ಪುಟ್ಟರಾಜ ಕವಿ ಗವಾಯಿಗಳ 10ನೇ ಪುಣ್ಯತಿಥಿ ಹಾಗೂ ಸಂಘದ 18ನೇ ವಾರ್ಷಿಕೋತ್ಸವ ನಿಮಿತ್ತ ರಾಜ್ಯ ಮಟ್ಟದ ಸಾಹಿತ್ಯ, ಸಂಗೀತ ಮತ್ತು ನೃತ್ಯೋತ್ಸವ ಸಮ್ಮೇಳನ ಆಯೋಜಿಸಲಾಗಿದೆ.