

ಬೀದರ್: ಬಿದರಿ ಬೀದರ್ ಜಿಲ್ಲೆ ಸಾಂಸ್ಕೃತಿಕ ವೇದಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಇಲ್ಲಿನ ರಂಗಮಂದಿರದಲ್ಲಿ ಭಾನುವಾರ ಸಂಜೆ 5ಕ್ಕೆ ಖ್ಯಾತ ಕಲಾವಿದರಿಂದ ಸಂಗೀತೋತ್ಸವ, ರಾಜ್ಯಮಟ್ಟದ ಬಿದರಿ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ಕುವೆಂಪು, ಅಶ್ವಥ್, ರಾಜನ್, ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ನೆನಪಿನಲ್ಲಿ ಬಿದರಿ ವೇದಿಕೆ ಅಧ್ಯಕ್ಷೆ ರೇಖಾ ಅಪ್ಪಾರಾವ್ ಸೌದಿ ನೇತೃತ್ವದಲ್ಲಿ ಬೀದರ್, ಬೆಂಗಳೂರು ಗಾಯಕರು ಹಾಗೂ ಸೊಲ್ಲಾಪೂರ ವಾದ್ಯ ತಂಡವು ಸಂಗೀತ ಸುಧೆ ಹರಿಸಲಿದೆ. ಜಿಲ್ಲೆಯ ಹಿರಿಯ ಸಂಗೀತ ವಿದ್ವಾಂಸ ಶ್ರೀ ವೈಕುಂಠದತ್ತ ಮಹಾರಾಜರಿಗೆ ಬಿದರಿ ವೇದಿಕೆಯಿಂದ ಪ್ರಥಮ ರಾಜ್ಯಮಟ್ಟದ ಬಿದರಿ ದತ್ತಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.
ಗಾಯಕರಾದ ರೇಖಾ ಅಪ್ಪಾರಾವ್ ಸೌದಿ, ಅಮಿತ್ ಜನವಾಡಕರ್, ಗೋವಿಂದ ಕರ್ನೂಲ್ ಬೆಂಗಳೂರು, ನಾಗರಾಜ ಜೋಗಿ, ರಾಜೇಶ ಕುಲಕರ್ಣಿ, ಡಾ.ಎನ್.ಎಸ್.ಕುಲಕರ್ಣಿ, ವಿಷ್ಣು ಜನವಾಡಕರ್ ಹಾಗೂ ಸೊಲ್ಲಾಪೂರದ ಸ್ಟಾರ್ ಆಫ್ ಮೆಲೋಡಿಸ್ ವಾದ್ಯ ತಂಡದ ಸಹಯೋಗದಲ್ಲಿ ವೈವಿಧ್ಯಮಯ ಗಾಯನದ ಮೂಲಕ ಸಂಗೀತ ಸಂಜೆ ಜರುಗಲಿದೆ. ಬೀದರ್ ಕಲಾ ತಂಡದಿಂದ ಸೌಹಾರ್ದತೆ ಕುರಿತ ಹಾಗೂ ಕಸ್ತೂರಿ ಪಟಪಳ್ಳಿ ನೇತೃತ್ವದಲ್ಲಿ ಹೊಸ ಹೆಜ್ಜೆ ಎಂಬ ತಲಾ 10 ನಿಮಿಷದ ನಾಟಕಗಳು ಮತ್ತು ಕು. ಅಮೂಲ್ಯ ಶ್ರೀಮಂತ ಸಪಾಟೆ ನೇತೃತ್ವದಲ್ಲಿ ಅಕ್ಷಯ ಡ್ಯಾನ್ಸರ್ ತಂಡದಿಂದ ನೃತ್ಯ ರೂಪಕ ನಡೆಯಲಿದೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಉದ್ಘಾಟಿಸಲಿದ್ದು, ದತ್ತಿ ಪ್ರಶಸ್ತಿಯನ್ನು ಹಿರಿಯ ರಂಗ ಸಂಘಟಕ ಶ್ರೀನಿವಾಸ ಕಪ್ಪಣ್ಣ ಪ್ರದಾನ ಮಾಡಲಿದ್ದಾರೆ. ಸಂಗೀತ ನಿರ್ದೇಶಕ ಬಿ.ವಿ. ಶ್ರೀನಿವಾಸ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ ಪಾಲ್ಗೊಳ್ಳಲಿದ್ದಾರೆ. ಇದಕ್ಕೂ ಮುನ್ನ ಬೆಳಗ್ಗೆ 10ರಿಂದ ಮಧ್ಯಾಹ್ನ 2ರ ವರೆಗೆ ಜಿಲ್ಲೆ ಕಲಾವಿದರಿಂದ ಸಂಗೀತ, ನೃತ್ಯ ಕಾರ್ಯಕ್ರಮಗಳು ಜರುಗಲಿವೆ.