ಸಂಗೀತ ಲೋಕಕ್ಕೆ ಕರೆದೊಯ್ದ ಡೆಸ್ಟಿನಿ

Destiny
Published on

ಚಿತ್ರದುರ್ಗ: ಕನ್ನಡ ಮತ್ತು ಹಿಂದಿ ಸಿನಿಮಾಗಳ ಸೂಪರ್ ಹಿಟ್ ಗೀತೆಗಳನ್ನು ತಮ್ಮದೇ ಸಿರಿ ಕಂಠದಲ್ಲಿ ಉಣಬಡಿಸುವ ಮೂಲಕ ಖ್ಯಾತ ಗಾಯಕರಾದ ವಿಜಯ್ ಪ್ರಕಾಶ್ ಮತ್ತು ಅನುರಾಧ ಭಟ್ ಸಂಗೀತ ಲೋಕಕ್ಕೆ ಕರೆದೊಯ್ದರು.

ನಗರದ ದೇವರಾಜ ಅರಸು ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಿರುವ ಡೆಸ್ಟಿನಿ-2025 ಬೃಹತ್‌ ಸಾಂಸ್ಕೃತಿಕ ಉತ್ಸವದ ಎರಡನೇ ದಿನವಾದ ಗುರುವಾರ ನೆರೆದಿದ್ದ ಪ್ರೇಕ್ಷಕರ ಹೃದಯ ಗೆದ್ದು, ಗಾನಸುಧೆಯನ್ನೇ ಹರಿಸಿದರು.

ವಿಜಯ್ ಪ್ರಕಾಶ್ ಅವರು ರಾಜಕುಮಾರ ಚಿತ್ರದ ಬೊಂಬೆ ಹೇಳುತ್ತೈತೆ ಮತ್ತೆ ಹೇಳುತ್ತೈತೆ ನೀನೆ ರಾಜಕುಮಾರ, ಪಲ್ಲವಿ ಅನುಪಲ್ಲವಿ ಚಿತ್ರದ ನಗುವ ನಯನ ಮಧುರ ಮೌನ, ಅನುರಾಧ ಭಟ್ ಅವರು ಚೌಕ ಸಿನಿಮಾದ ಅಪ್ಪನ ಕುರಿತ ನಾನು ನೋಡಿದ ಮೊದಲ ವೀರ ಗೀತೆಯೊಂದಿಗೆ ಸಂಗೀತ ರಸದೌತಣ ನೀಡಿದರು. ಇಬ್ಬರು ಗಾಯಕರು ಜೊತೆಗೂಡಿ ಪ್ರಸ್ತುತ ಪಡಿಸಿದ ಹಲವು ಹಾಡುಗಳಿಗೆ ಪ್ರೇಕ್ಷಕರ ಗ್ಯಾಲರಿಯಿಂದ ಚಪ್ಪಾಳೆ ಸೇರಿ ಕರತಾಡನ ವ್ಯಕ್ತವಾಯಿತು.

ಶಿವನ ಕುರಿತ ನೃತ್ಯರೂಪಕ ಭಕ್ತಿ ಮೂಡಿಸಿದರೆ, ಪರಿಸರದ ಬಗ್ಗೆ ವಿದ್ಯಾರ್ಥಿಗಳು ತೋರಿದ ಜಾಗೃತಿ ರೂಪಕ ಮೆಚ್ಚುಗೆಗೆ ಪಾತ್ರವಾಯಿತು. ಒಟ್ಟಾರೆ, ಹಲವು ರೂಪಕಗಳು ವಿದ್ಯಾರ್ಥಿಗಳಲ್ಲಿನ ಸುಪ್ತ ಪ್ರತಿಭೆ ಹೊರತೆಗೆಯಲು ಸುಂದರವಾದ ಈ ವೇದಿಕೆ ಸಾಕ್ಷಿಯಾಯಿತು.

ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ಡಾ.ಎಂ.ಚಂದ್ರಪ್ಪ, ಆಡಳಿತಾಧಿಕಾರಿ ಎಚ್.ಚಂದ್ರಕಲಾ, ಸಿಇಒ ಎಂ.ಸಿ.ರಘುಚಂದನ್, ಅಧ್ಯಕ್ಷೆ ಎಂ.ಸಿ.ಯಶಸ್ವಿನಿ ಕಿರಣ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net