

ವಿಜಯವಾಣಿ ಸುದ್ದಿಜಾಲ ಧಾರವಾಡ
ಸಂಗೀತದಿಂದ ಪ್ರತಿ ಮನೆ, ಮನದಲ್ಲೂ ಸಕಾರಾತ್ಮಕ ವಾತಾವರಣ ನಿರ್ಮಾಣವಾಗಲು ಸಾಧ್ಯ. ಸಂಗೀತ ಮಾಧ್ಯಮ ಗಂಧರ್ವ ವಿದ್ಯೆಯಾಗಿದೆ. ಇಂದಿನ ಮಕ್ಕಳಿಗೆ ಬೇಕಿರುವ ಉತ್ತಮ ಸಂಸ್ಕಾರವನ್ನು ಸಂಗೀತ ನೀಡುತ್ತದೆ. ಸಂಗೀತದ ಕಲಿಕೆಯಿಂದ ಮಕ್ಕಳಲ್ಲಿ ಜ್ಞಾನಪಕ ಶಕ್ತಿ ವೃದ್ಧಿ ಜತೆಗೆ ಶೈಕ್ಷಣಿಕ ಸಾಮರ್ಥ್ಯ ಹೆಚ್ಚಿಸುತ್ತದೆ ಎನ್ನುವುದು ವೈಜ್ಞಾನಿಕವಾಗಿ ರುಜುವಾತಾಗಿದೆ ಎಂದು ಗುಲ್ಬರ್ಗಾ ವಿವಿ ಸಂಗೀತ ವಿಭಾಗದ ಅಧ್ಯಾಪಕಿ ಡಾ. ಸುನಂದಾ ಸಾಲವಾಡಗಿ ಹೇಳಿದರು.
ನಗರದ ಬೇಂದ್ರೆ ಭವನದಲ್ಲಿ ಚಿಲಿಪಿಲಿ ಸಂಗೀತ ಸಾಂಸ್ಕೃತಿಕ ಕಲಾ ಅಕಾಡೆಮಿಯ ಲಲಿತಕಲಾ ಪ್ರತಿಭಾನ್ವೇಷಣ ಮಹಾವಿದ್ಯಾಲಯದ ಸಹಯೋಗದಲ್ಲಿ ಭಾನುವಾರ ಏರ್ಪಡಿಸಿದ್ದ ಗುರುವಂದನಾ ಹಾಗೂ ಸಂಗೀತೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕವಿವಿ ಸಂಗೀತ ವಿಭಾಗದ ಮುಖ್ಯಸ್ಥ ಡಾ. ಮೃತ್ಯುಂಜಯ ಅಗಡಿ ಮಾತನಾಡಿ, 40 ವರ್ಷಗಳ ಹಿಂದೆ ಕೆಲವೇ ಕೆಲವು ಸಂಗೀತ ಪಾಠಶಾಲೆಗಳಿದ್ದವು. ಆದರೆ ಇಂದು ಸಂಗೀತ ಕಲಿಸಲು ಸಾಕಷ್ಟು ಗುರುಗಳು ಮುಂದೆ ಬಂದಿರುವುದು ಹೆಮ್ಮೆಯ ಸಂಗತಿ. ಸಂಗೀತ ಮಾತನಾಡುವ ಕಲೆಯಲ್ಲ. ಅದು ಸಾಧಿಸುವ ಕಲೆ. ನಿರಂತರ ಅಭ್ಯಾಸದಿಂದ ಮಾತ್ರ ಸಾಧಿಸಿ, ಗುರಿ ತಲುಪಲು ಸಾಧ್ಯ ಎಂದರು.
ಶಂಕರ ಹಲಗತ್ತಿ ಮಾತನಾಡಿ, ರಾಜ್ಯದ ಉತ್ತರದಿಂದ ದಕ್ಷಿಣದವರೆಗೆ ತನ್ನ ಸಂಘಟನೆ ಕಾರ್ಯ ವಿಸ್ತರಿಸಿ, ಬೆಳೆಸುವ ಕಾರ್ಯ ಶ್ಲಾಘನೀಯ. ಪ್ರಾಮಾಣಿಕತೆ, ಪಾರದರ್ಶಕತೆ, ತುಡಿತ ಮತ್ತು ಕಾಳಜಿ ಇರುವ ಸಂಘಟನೆ ಬಹಳ ಎತ್ತರಕ್ಕೆ ಬೆಳೆಯಬಲ್ಲದು. ಈ ಎಲ್ಲ ಗುಣಗಳು ಚಿಲಿಪಿಲಿ ಸಂಗೀತ ಸಾಂಸ್ಕೃತಿಕ ಕಲಾ ಅಕಾಡೆಮಿ ಹೊಂದಿ ಉತ್ಕೃಷ್ಟ ಕಾರ್ಯ ಮಾಡುತ್ತಿದೆ ಎಂದರು.
ಶ್ರೀ ಕುಮಾರೇಶ್ವರ ಕಲ್ಚರಲ್ ಸೊಸೈಟಿ ಅಧ್ಯಕ್ಷ ಮಲ್ಲಿಕಾರ್ಜುನ ಚಿಕ್ಕಮಠ ಅಧ್ಯಕ್ಷತೆ ವಹಿಸಿದ್ದರು. ಲಲಿತಕಲಾ ಪ್ರತಿಭಾನ್ವೇಷಣ ಮಹಾವಿದ್ಯಾಲಯ ಪರೀಕ್ಷಕರು ಮತ್ತು ಗುರುಗಳು, ಆಯೋಜಕರನ್ನು ಸನ್ಮಾನಿಸಲಾಯಿತು. ಡಾ. ಶಾಂತಾರಾಮ ಹೆಗಡೆ, ಪ್ರಕಾಶ ಬಾಳಿಕಾಯಿ, ಇತರರು ಇದ್ದರು.
ಸಂಗೀತೋತ್ಸವದಲ್ಲಿ ಡಾ. ಮಂಜುನಾಥ ಬಿ. ನಿರ್ದೇಶನದಲ್ಲಿ ಸಾಮವೇದ ಸಂಗೀತ ವಿದ್ಯಾಲಯ ವಿದ್ಯಾರ್ಥಿಗಳು ಹಾಗೂ ಬಸವರಾಜ ಹೂಗಾರ ನಿರ್ದೇಶನದಲ್ಲಿ ದರ್ಬಾರ ಸಂಗೀತ ವಿದ್ಯಾಲಯದ ವಿದ್ಯಾರ್ಥಿಗಳು ವಿವಿಧ ರಾಗಗಳನ್ನು ಪ್ರಸ್ತುತಪಡಿಸಿದರು.
ಭಾರತಿ ಸಾಬಳೆ ಸ್ವಾಗತಿಸಿದರು. ಡಾ.ಎ.ಎಲ್.ದೇಸಾಯಿ ಪ್ರಾಸ್ತಾವಿಕ ಮಾತನಾಡಿದರು. ಡಾ.ಬಸವರಾಜ ಕಲೆಗಾರ ನಿರೂಪಿಸಿದರು. ವಿಜಯಲಕ್ಷ್ಮೀ ಶುಭಾಂಜಿ ವಂದಿಸಿದರು.