ಸಂಗೀತ ದಿಗ್ಗಜ ಮಲ್ಲಿಕಾರ್ಜುನ ಮನಸೂರ ಪುಣ್ಯಸ್ಮರಣೆ

12 vikram 2
Published on

ಧಾರವಾಡ : ಡಾ. ಮಲ್ಲಿಕಾರ್ಜುನ ಮನಸೂರ 30ನೇ ಪುಣ್ಯಸ್ಮರಣೆ ನಿಮಿತ್ತ ಡಾ. ಮನಸೂರ ರಾಷ್ಟ್ರಿಯ ಟ್ರಸ್ಟ್‌ನಿಂದ ಸೋಮವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಡಾ.ಮಲ್ಲಿಕಾರ್ಜುನ ಮನಸೂರ ಸಮಾಧಿಗೆ ಪೂಜೆ ಸಲ್ಲಿಸಲಾಯಿತು.
ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಮಾತನಾಡಿ, ಡಾ. ಮಲ್ಲಿಕಾರ್ಜುನ ಮನಸೂರ ಸಂಗೀತ ದಿಗ್ಗಜರು. ಕನ್ನಡ ನಾಡಿನ ಕೀರ್ತಿಯನ್ನು ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿರಾಯುಗೊಳಿಸಿದ್ದಾರೆ. ಮನಸೂರ ಟ್ರಸ್ಟ್ ಸಂಗೀತ ಶಾಲೆ ಮಕ್ಕಳು ಸಂಗೀತ ಪರಂಪರೆಯನ್ನು ಬೆಳೆಸಬೇಕು ಎಂದರು. ನಂತರ ಡಾ. ಮಲ್ಲಿಕಾರ್ಜುನ ಮನಸೂರ ಕುರಿತ ವಸ್ತುಸಂಗ್ರಹಾಲಯ ವೀಕ್ಷಿಸಿ, ಸಂಗೀತ ತರಗತಿ ವಿದ್ಯಾರ್ಥಿಗಳನ್ನು ಭೇಟಿ ಮಾಡಿದರು. ಅಕ್ಕಮಹಾದೇವಿ ಆಲೂರ, ಹುಬ್ಬಳ್ಳಿಯ ಡಾ. ಚಂದ್ರಿಕಾ ಕಾಮತ್, ಉಜಿರೆಯ ಡಾ. ಮಿಥುನ ಚಕ್ರವರ್ತಿ, ಡಾ. ಮಲ್ಲಿಕಾರ್ಜುನ ಮನಸೂರ ರಾಷ್ಟ್ರಿಯ ಟ್ರಸ್ಟ್ ಸಂಗೀತ ಶಾಲೆ ವಿದ್ಯಾರ್ಥಿಗಳು ವಚನ ಗಾಯನ ಮತ್ತು ಸಂಗೀತ ಪ್ರಸ್ತುತಪಡಿಸಿದರು. ಶ್ರೀಧರ ಮಾಂಡ್ರೆ ಮತ್ತು ಅಲ್ಲಮಪ್ರಭು ಕಡಕೋಳ ತಬಲಾ ಮತ್ತು ಪರಶುರಾಮ ಕಟ್ಟಿಸಂಗಾವಿ, ದೃಶಲ್ ಚಾರಿ ಹಾರ್ಮೋನಿಯಂ ಸಾಥ್ ನೀಡಿದರು. ದರ್ಶನ ಮೆಳವಂಕಿ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಪ್ರಸ್ತುತ ಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net