

ವಿಜಯವಾಣಿ ಸುದ್ದಿಜಾಲ ಧಾರವಾಡ
ಸಂಗೀತ ಹಾಗೂ ಸಾಹಿತ್ಯಕ್ಕೆ ಧಾರವಾಡ ಪ್ರಸಿದ್ಧವಾಗಿದೆ. ಸಂಗೀತ ಕ್ಷೇತ್ರದಲ್ಲಿ ಅನಂತ ಹರಿಹರ ನೀಡಿದ ಕೊಡುಗೆ ಅಪಾರವಾಗಿದೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.
ನಗರದ ಸೃಜನಾ ರಂಗ ಮಂದಿರದಲ್ಲಿ ಅನಂತ ಹರಿಹರ ಅವರ 75ನೇ ಜನ್ಮದಿನ ಸಂಭ್ರಮ ನಿಮಿತ್ತ ಜಿ.ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್, ಕ್ಷಮತಾ ಸಂಸ್ಥೆ ಹಾಗೂ ಅನಂತ ಹರಿಹರ ಸನ್ಮಾನ ಸಮಿತಿ ವತಿಯಿಂದ ಭಾನುವಾರ ಏರ್ಪಡಿಸಿದ್ದ ಸನ್ಮಾನ ಸಮಾರಂಭ ಹಾಗೂ ಸಂಗೀತೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮಾಜಿ ಮೇಯರ್ ಈರೇಶ ಅಂಚಟಗೇರಿ ಮಾತನಾಡಿ, ಸಂಗೀತ ಕ್ಷೇತ್ರದ ಬೆಳವಣಿಗೆ ಹಾಗೂ ಉಳಿಸುವಿಕೆಯಲ್ಲಿ ಅನಂತ ಹರಿಹರ ಸಾಕಷ್ಟು ಶ್ರಮಿಸಿದ್ದಾರೆ. ಅವರ ಕೊಡುಗೆ ಹಾಗೂ ಪ್ರಯತ್ನದಿಂದ ಸಂಗೀತ ಕ್ಷೇತ್ರದ ಹಿರಿಮೆ ಹೆಚ್ಚಿದೆ ಎಂದರು.
ಅನಂತ ಹರಿಹರ ಅವರಿಗೆ ಗಣ್ಯರು ಸನ್ಮಾನಿಸಿ ಶುಭ ಹಾರೈಸಿದರು. ಪಂ. ಎಂ. ವೆಂಕಟೇಶಕುಮಾರ, ಹರ್ಷ ಡಂಬಳ, ಶಶಿಧರ ನರೇಂದ್ರ, ಸಮೀರ ಜೋಶಿ, ಸಂಗೀತಗಾರರು, ಸಾಹಿತ್ಯಾಸಕ್ತರು, ಇತರರು ಇದ್ದರು.
ಬಳಿಕ ಪೂರ್ಣಿಮಾ ಭಟ್ಟ ಕುಲಕರ್ಣಿ, ಪಂ. ಎಂ. ವೆಂಕಟೇಶಕುಮಾರ ಹಾಗೂ ಪಂ. ಗಣಪತಿಭಟ್ಟ ಹಾಸಣಗಿ ಗಾಯನ ಮತ್ತು ಪಂ. ಪ್ರವೀಣ ಗೋಡಖಿಂಡಿ ಬಾನ್ಸುರಿ ವಾದನ ಪ್ರಸ್ತುತಪಡಿಸಿದರು. ಇವರಿಗೆ ತಬಲಾದಲ್ಲಿ ಪಂ. ರವೀಂದ್ರ ಯಾವಗಲ್ಲ, ಕೇಶವ ಜೋಶಿ, ನಾಸೀರ ಅಹ್ಮದ್ ಹಾಗೂ ಹಾರ್ಮೋನಿಯಂನಲ್ಲಿ ಪಂ. ವ್ಯಾಸಮೂರ್ತಿ ಕಟ್ಟಿ, ಗುರುಪ್ರಸಾದ ಹೆಗಡೆ, ರವೀಂದ್ರ ಕಾತೋಟಿ ಸಾಥ್ ನೀಡಿದರು.