ಸಂಗೀತ ಕಲೆಗೆ ಪ್ರೋತ್ಸಾಹ ನೀಡೋಣ

2910 KLB 01
Published on

ಕಲಬುರಗಿ: ಸಂಗೀತ ಸಂಕಷ್ಟದ ಕ್ಷೇತ್ರ. ಕಲೆ ಇರುತ್ತದೆ, ಆದರೆ ಲಕ್ಷ್ಮೀಯ ಕೊರತೆ ಇರುತ್ತದೆ. ಕಲೆಯಿಂದ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ. ಆದ್ದರಿಂದ ಕಲೆ ಮತ್ತು ಕಲಾವಿದರನ್ನು ಪ್ರೋತ್ಸಾಹಿಸಬೇಕು ಎಂದು ಆರ್ಯ ಈಡಿಗ ಸಮಾಜದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಸತೀಶ ಗುತ್ತೇದಾರ ಹೇಳಿದರು.

ಬ್ರಹ್ಮಶ್ರೀ ನಾರಾಯಣ ಗುರು ಸಾಂಸ್ಕೃತಿಕ ಕಲಾ ಸಂಘ, ಶ್ರೀ ಕನಕ ಪುರಂಧರ ಕಲೆ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಲಾ ಸೇವಾ ಸಂಘದಿಂದ ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಹಮ್ಮಿಕೊಂಡ ಬ್ರಹ್ಮಶ್ರೀ ನಾರಾಯಣಗುರುಗಳ ೧೬೯ನೇ ಜಯಂತ್ಯುತ್ಸವ, ಪ್ರಶಸ್ತಿ ಪ್ರದಾನ ಮತ್ತು ಸಂಗೀತ ಸೌರಭ ಕಾರ್ಯಕ್ರಮದಲ್ಲಿ ಮಾತನಾಡಿ, ಇಂದು ಹಲವು ಕಲಾವಿದರು ಸಂಕಷ್ಟದ ಮಧ್ಯೆ ಸಂಗೀತ ಶಾಲೆ, ಕಲೆಯನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ನೆಮ್ಮದಿಯ ಜೀವನಕ್ಕೆ ಸ್ಫೂರ್ತಿ ನೀಡುವ ಕಲಾವಿದರನ್ನು ಪೋಷಿಸಬೇಕು ಎಂದು ಹೇಳಿದರು.

ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುರೇಶ ಸಜ್ಜನ ಮಾತನಾಡಿ, ಸಾಂಸ್ಕೃತಿಕ ಕಾರ್ಯಕ್ರಮಗಳು ಕೇಳುಗರಿಗೆ ಮನರಂಜನೆಯಷ್ಟೇ ಅಲ್ಲ, ಪಾಠವನ್ನು ಕಲಿಸುತ್ತವೆ. ಕಲಾವಿದರು ಹಲವು ಸವಾಲುಗಳ ಮಧ್ಯೆ ಸಂಗೀತವನ್ನು ಉಳಿಸಿ ಬೆಳೆಸುತ್ತಿದ್ದಾರೆ. ಅವರನ್ನು ಪ್ರೋತ್ಸಾಹಿಸಿ, ಹೆಚ್ಚಿನ ಕಾರ್ಯಕ್ರಮಗಳನ್ನು ಏರ್ಪಡಿಸಬೇಕು ಎಂದರು.

ವಿಜಯವಾಣಿ ಸ್ಥಾನಿಕ ಸಂಪಾದಕ ಬಾಬುರಾವ ಯಡ್ರಾಮಿ ಮಾತನಾಡಿ, ಬಸವಣ್ಣ ಮತ್ತು ನಾರಾಯಣ ಗುರುಗಳ ತತ್ವಗಳು ಒಂದೇ ಆಗಿದ್ದು, ಕಾಯಕ ಸಿದ್ಧಾಂತ ಎಲ್ಲರೂ ಪಾಲಿಸಬೇಕು. ತಳಹಂತದ ಸಮುದಾಯ ಮೇಲೆತ್ತುವ ಕಾರ್ಯ ನಾರಾಯಣ ಗುರು ಮಾಡಿದ್ದಾರೆ ಎಂದು ಹೇಳಿದರು.

ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಶಿವರಂಜನ್ ಸತ್ಯಂಪೇಟ್ ಮಾತನಾಡಿ, ಬಹುತೇಕರಿಗೆ ಮಹಾತ್ಮರ ತತ್ವಗಳೇ ತಿಳಿದಿಲ್ಲ. ಹೆಂಡದ ಮಾರಯ್ಯ ಹೆಂಡ ಮಾರುತ್ತಿದ್ದರೂ ಶರಣನಾಗಿದ್ದ, ತನ್ನ ಬಳಿ ಬಂದವರಿಗೆ ಸನ್ಮಾರ್ಗ ತೋರಿದ್ದ. ಹೆಂಡದ ಮಾರಯ್ಯ ಸೇರಿ ಈಡಿಗ ಸಮಾಜದ ಶರಣರ ಇತಿಹಾಸ ಅರಿಯಬೇಕು. ನಾರಾಯಣ ಗುರುಗಳು ಒಂದೇ ಜಾತಿ, ಒಂದೇ ಮತ, ಒಂದೇ ದೇವರು ತತ್ವ ಸಾರಿದ್ದಾರೆ. ಅದನ್ನು ಪಾಲಿಸಬೇಕು. ಸಂಗೀತದ ಸಸ್ಯ ಬೆಳೆಯುತ್ತವೇ ಎಂಬುದು ವೈಜ್ಱಆನಿಕವಾಗಿ ಸಾಬೀತಾಗಿದೆ. ಅದನ್ನು ಪೊರೆಯಬೇಕು ಎಂದು ಹೇಳಿದರು.

ಸಂಘದ ಅಧ್ಯಕ್ಷ ಬಸಯ್ಯ ಗುತ್ತೇದಾರ ಪ್ರಾಸ್ತಾವಿಕ ಮಾತನಾಡಿದರು. ಜೆಡಿಎಸ್ ಪ್ರಧಾನ ಕಾರ್ಯದರ್ಶಿ ದೇವೇಗೌಡ ತೆಲ್ಲೂರ ಮಾತನಾಡಿದರು. ವಕೀಲ ರಾಜಕುಮಾರ ಹುಲ್ಲೂರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಮಲ್ಲಯ್ಯ ಗುತ್ತೇದಾರ, ಪ್ರಮುಖರಾದ ವಿನಯ ಗುತ್ತೇದಾರ, ಪರಮೇಶ್ವರ ದೇಸಾಯಿ, ವಿನಯ ಡಿ.ಗುತ್ತೇದಾರ, ಬಾಬುರಾವ ಕೋಬಾಳ, ಶಿವಪುತ್ರ ಕರಡಿ, ಮಹಾಂತೇಶ ಪಂಚಾಳ, ಶರಣಪ್ಪ ಕಾಳದ, ಅಂಬಯ್ಯ ಗುತ್ತೇದಾರ, ರಾಜಕುಮಾರ ಮುನ್ನೂರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net