ಸಂಕ್ರಾಂತಿ ಬಳಿಕ ಬೆಂಬಲಿಗರ ಸಭೆ ನಡೆಸಿ ನಿರ್ಧಾರ- ಕೆ.ಎಂ.ಶಿವಲಿಂಗೇಗೌಡ.

ಸಂಕ್ರಾಂತಿ ಬಳಿಕ ಬೆಂಬಲಿಗರ ಸಭೆ ನಡೆಸಿ ನಿರ್ಧಾರ- ಕೆ.ಎಂ.ಶಿವಲಿಂಗೇಗೌಡ.
Published on

ಅರಸೀಕೆರೆ: ಸಂಕ್ರಾಂತಿ ಬಳಿಕ ಬೆಂಬಲಿಗರ ಸಭೆ ನಡೆಸಿ ನನ್ನ ರಾಜಕೀಯ ನಿಲುವು ಪ್ರಕಟಿಸಲಿದ್ದೇನೆ ಎಂದು ಜೆಡಿಎಸ್ ಶಾಸಕ ಕೆ.ಎಂ.ಶಿವಲಿಂಗೇಗೌಡ ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಪಕ್ಷದಲ್ಲಿ ಸಣ್ಣಪುಟ್ಟ ಗೊಂದಲವಿರುವುದನ್ನು ಒಪ್ಪಿಕೊಳ್ಳುತ್ತೇನೆ.ಈ ಸಂಬಂಧ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ಎಚ್.ಡಿ.ರೇವಣ್ಣ ಜತೆ ಚರ್ಚಿಸಲಾಗಿದೆ. ಇದರ ನಡುವೆ ಕ್ಷೇತ್ರದಲ್ಲಿ ಇನ್ನೊಬ್ಬರು ಅಭ್ಯರ್ಥಿಯನ್ನು ಬಿಂಬಿಸುವ ಕೆಲಸ ನನ್ನ ಅರಿವಿಗೆ ಬಾರದಂತೆ ನಡೆಯುತ್ತಿದೆೆ.ಶುಕ್ರವಾರ ಕೆಲ ಸ್ಥಳೀಯ ಮುಖಂಡರು ಗೊಂದಲ ಪರಿಹರಿಸಿ ಎಂದು ಕೇಳಿಕೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.ಮುಂದೇನು ಮಾಡಬೇಕು ಎನ್ನುವ ಕುರಿತಂತೆ ಬೆಂಬಲಿಗರ ಸಭೆ ಕರೆದು ಚರ್ಚಿಸಲು ನಿರ್ಧರಿಸಿದ್ದೇನೆ.ಎಲ್ಲರ ಒತ್ತಾಸೆಯಂತೆ ಸಂಕ್ರಾಂತಿ ಬಳಿಕ ನಿಲುವು ಪ್ರಕಟಿಸಲಿದ್ದೇನೆ ಕಾದು ನೋಡಿ ಎಂದು ಮಾರ್ಮಿಕವಾಗಿ ನುಡಿದರು.


ಸಹಿಸುವುದಿಲ್ಲ: ಕ್ಷೇತ್ರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಪಡಿಸುವುದನ್ನು ಸಹಿಸುವುದಿಲ್ಲ. ಶಕ್ತಿಯಿದ್ದರೆ ಅನುದಾನ ತಂದು ಕೆಲಸ ಮಾಡಿ ತೋರಿಸುವುದನ್ನು ಬಿಟ್ಟು ಅಧಿಕಾರಿಗಳನ್ನು ಬೆದರಿಸಲು ಹೊರಟಿರುವುದು ಅಕ್ಷಮ್ಯ. ಶೃಂಗೇರಿ ಮಾಜಿ ಶಾಸಕ ಜೀವರಾಜ್ ಹಾಗೂ ವಿಧಾನಪರಿಷತ್ ಸದಸ್ಯ ಸಿ.ಪಿ.ಯೋಗೀಶ್ವರ್‌ಗೆ ಸರ್ಕಾರ ಅನುದಾನ ನೀಡಿದೆ. ಯಾರೇ ತಂದರೂ ನಾನೇ ಪೂಜೆ ಮಾಡಬೇಕು. ಪದೇ ಪದೆ ತೊಂದರೆ ನೀಡುವ ಕೆಲಸ ಮಾಡಿದರೆ ಐದು ಸಾವಿರ ಗುತ್ತಿಗೆದಾರರು ಬೀದಿಗಿಳಿಯಲ್ಲಿದ್ದಾರೆ ಎಂದು ಪರೋಕ್ಷವಾಗಿ ಎನ್.ಆರ್.ಸಂತೋಷ್ ವಿರುದ್ಧ ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net