ಸಂಕ್ರಾಂತಿ ಬಳಿಕ ಅಯೋಧ್ಯೆಯಲ್ಲಿ ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆ

28
Published on

ಮೈಸೂರು: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಭವ್ಯವಾದ ರಾಮ ಮಂದಿರದ ಗರ್ಭಗುಡಿಯಲ್ಲಿ ಶ್ರೀರಾಮನ ಬಾಲರೂಪದ ವಿಗ್ರಹ ಪ್ರತಿಷ್ಠಾಪನೆ ಮುಂದಿನ ಜನವರಿ 15ರಿಂದ 30ರ ಒಳಗೆ ನೆರವೇರಲಿದೆ ಎಂದು ರಾಮಮಂದಿರ ನಿರ್ಮಾಣ ಕಾರ್ಯದಲ್ಲಿರುವ ವಿಶ್ವ ಹಿಂದು ಪರಿಷತ್ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಗೋಪಾಲ್‌ಜಿ ತಿಳಿಸಿದರು.

ಸರಸ್ವತಿಪುರಂನ ಕೃಷ್ಣಧಾಮದಲ್ಲಿ ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರ 36ನೇ ಚಾತುರ್ಮಾಸ್ಯ ಕಾರ್ಯಕ್ರಮದಲ್ಲಿ ರಾಮಮಂದಿರ ನಿರ್ಮಾಣದ ಕಾರ್ಯದ ಕುರಿತು ಉಪನ್ಯಾಸ ನೀಡಿದರು.

ಸಂಕ್ರಾಂತಿ ಬಳಿಕ ಶ್ರೀರಾಮನ ಬಾಲರೂಪದ ವಿಗ್ರಹ ಪ್ರತಿಷ್ಠಾಪಿಸಿ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಲಾಗುವುದು. ಈ ಕಾರ್ಯಕ್ರಮವನ್ನು ನೆರವೇರಿಸಿಕೊಂಡುವಂತೆ ಪ್ರಧಾನಿ ಅವರಿಗೆ ಈಗಾಗಲೇ ಮನವಿ ಸಲ್ಲಿಸಲಾಗಿದೆ. ದೇಶದ ಪ್ರಮುಖ ಸಂತರನ್ನು ಆಹ್ವಾನಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರು 2020ರಲ್ಲಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು. ಅಲ್ಲಿಯಿಂದ ಹಗಲು-ರಾತ್ರಿ ಕೆಲಸ ನಡೆಯುತ್ತಿದೆ. 1600 ಕೆಲಸಗಾರರು ಈ ಕಾರ್ಯದಲ್ಲಿ ತೊಡಗಿದ್ದಾರೆ. ಹೆಚ್ಚುವರಿ 350 ಕಾರ್ಮಿಕರು ಸೇರ್ಪಡೆಯಾಗಲಿದ್ದಾರೆ. 100 ಇಂಜಿನಿಯರಿಂಗ್‌ಗಳು ನಿರ್ವಹಣೆ ಮಾಡುತ್ತಿದ್ದಾರೆ. ಸದ್ಯಕ್ಕೆ ನೆಲಮಹಡಿ ಕೆಲಸ ಪೂರ್ಣಗೊಂಡಿದ್ದು, ನಿರ್ಮಾಣ ಕಾರ್ಯ ಇನ್ನೂ ಎರಡೂವರೆ ವರ್ಷ ಮುಂದುವರಿಯುವ ನಿರೀಕ್ಷೆ ಇದೆ ಎಂದರು.

ಮಂದಿರದಲ್ಲಿ ಗರ್ಭಗುಡಿ ಮತ್ತು ನೃತ್ಯ, ಪ್ರಾರ್ಥನಾ, ಕೀರ್ತನಾ, ನಮಸ್ಕಾರ ಸೇರಿದಂತೆ 5 ಮಂಟಪಗಳು ಇರಲಿವೆ. ಮಧ್ಯಭಾಗದಲ್ಲಿ 160 ಅಡಿ ಎತ್ತರ ಭವ್ಯ ಗೋಪುರ ಬರಲಿದೆ. ಪ್ರಾಚೀನ ಪರಂಪರೆ ಶಿಲ್ಪಶಾಸ್ತ್ರ ಮತ್ತು ಆಧುನಿಕ ತಂತ್ರಜ್ಞಾನ ಬಳಸಿ ನಾಗ ಶೈಲಿಯಲ್ಲಿ ಮಂದಿರದ ಕಟ್ಟಡ ತಲೆ ಎತ್ತುತ್ತಿದೆ. ಎಲ್ ಆ್ಯಂಡ್ ಟಿ ಕಂಪನಿ ನಿರ್ಮಾಣದ ಉಸ್ತುವಾರಿ, ಟಾಟಾ ಸಂಸ್ಥೆ ಮೇಲುಸ್ತುವಾರಿ, ಹಿಂದು ಭಾವನೆ ಹೊಂದಿರುವ 7 ಇಂಜಿನಿಯರ್‌ಗಳ ಮೇಲುಸ್ತುವಾರಿಯಲ್ಲಿ ಕೆಲಸ ನಡೆಯುತ್ತಿದೆ ಎಂದು ತಿಳಿಸಿದರು.

ನಾಲ್ಕೂವರೆ ಅಡಿ ಎತ್ತರದ ಶ್ರೀರಾಮನ 3 ಮೂರ್ತಿಗಳ ಕೆತ್ತನೆ ಕಾರ್ಯ ನಡೆಯುತ್ತಿದೆ. ಕರ್ನಾಟಕದ ಇಬ್ಬರು, ರಾಜಸ್ಥಾನದ ಒಬ್ಬ ಶಿಲ್ಪಿ ಈ ಕೆಲಸದಲ್ಲಿ ತೊಡಗಿದ್ದಾರೆ. ಅದರಲ್ಲಿ ಒಂದು ಮೂರ್ತಿಯನ್ನು ಆಯ್ಕೆ ಮಾಡಿಕೊಂಡು ಪ್ರತಿಷ್ಠಾಪನೆ ಮಾಡಲಾಗುವುದು. ಈ ಕೆತ್ತನೆ ಕೆಲಸ ಅಕ್ಟೋಬರ್ ಹೊತ್ತಿಗೆ ಪೂರ್ಣಗೊಳ್ಳಲಿದೆ ಎಂದರು. ಉಡುಪಿ ಪೇಜಾವರ ಮಠದ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರು ಸಾನ್ನಿಧ್ಯ ವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net