ಸಂಕಷ್ಟದಲ್ಲೂ ಆಸರೆಯಾಗದ ಕಾರ್ಖಾನೆ

sugar cane
Published on


ಬೆಳಗಾವಿ: ಕರೊನಾತಂಕದ ಮಧ್ಯೆಯೂ ರಾಜ್ಯದ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಪೂರೈಸಿದ್ದ ಬೆಳೆಗಾರರಿಗೆ ಈವರೆಗೆ ಎ್ಆರ್‌ಪಿ ಆಧಾರದಲ್ಲಿ ಪೂರ್ಣ ಪ್ರಮಾಣದಲ್ಲಿ ಬಿಲ್ ಪಾವತಿಯಾಗಿಲ್ಲ. ಬಾಕಿ ಬಿಲ್‌ಗಾಗಿ ರೈತರು ನಿತ್ಯವೂ ಸಕ್ಕರೆ ಕಾರ್ಖಾನೆಗಳಿಗೆ ಅಲೆದಾಡುತ್ತಿದ್ದಾರೆ.

ರಾಜ್ಯದಲ್ಲಿ 64 ಸಕ್ಕರೆ ಕಾರ್ಖಾನೆಗಳಿದ್ದು, 2020-21ನೇ ಸಾಲಿನ ಹಂಗಾಮಿನಲ್ಲಿ 4.40 ಕೋಟಿ ಮೆಟ್ರಿಕ್ ಟನ್ ಕಬ್ಬು ನುರಿಸಿ 42.94 ಲಕ್ಷ ಮೆಟ್ರಿಕ್ ಟನ್ ಸಕ್ಕರೆ ಉತ್ಪಾದಿಸಿವೆ. ಕಬ್ಬು ಪೂರೈಸಿದ ರೈತರಿಗೆ ಬಿಲ್ ಪಾವತಿಸಲು ಮಾ. 31ರ ವರೆಗೆ ಸರ್ಕಾರ ಗಡುವು ವಿಧಿಸಿತ್ತು. ಅದಾಗಿ ಎರಡು ತಿಂಗಳಾಗುತ್ತ ಬಂದರೂ, ಹಲವು ಕಾರ್ಖಾನೆಗಳು ಬಿಲ್ ಪಾವತಿಸಿಲ್ಲ. ಈ ಮಾಸಾಂತ್ಯದೊಳಗೆ ಬಾಕಿ ಪಾವತಿಸದಿದ್ದಲ್ಲಿ ಕಾರ್ಖಾನೆ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಸಕ್ಕರೆ ಆಯುಕ್ತರಿಗೆ ದೂರು ನೀಡಲು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ನಿರ್ಧರಿಸಿದೆ.

1,324 ಕೋಟಿ ರೂ. ಬಾಕಿ: ಸರ್ಕಾರವೇ ನೀಡಿದ ಮಾಹಿತಿ ಪ್ರಕಾರ, 2021ರ ಏ. 30ರ ಅಂತ್ಯಕ್ಕೆ ರಾಜ್ಯದ ಸಕ್ಕರೆ ಕಾರ್ಖಾನೆಗಳು 1,324.49 ಕೋಟಿ ರೂ. ಬಾಕಿ ಉಳಿಸಿಕೊಂಡಿವೆ. ಈ ಪೈಕಿ ಬಾಗಲಕೋಟೆ ಜಿಲ್ಲೆಯ ಕಾರ್ಖಾನೆಗಳೇ ಅತಿ ಹೆಚ್ಚು ಅಂದರೆ, 529.36 ಕೋಟಿ ರೂ. ಬಾಕಿ ಪಾವತಿಸಬೇಕಿದೆ. ನಂತರದ ಸ್ಥಾನದಲ್ಲಿ ಬೆಳಗಾವಿ, ವಿಜಯಪುರ ಜಿಲ್ಲೆಗಳಿವೆ. ಚಾಮರಾಜನಗರ, ದಾವಣಗೆರೆ, ಮೈಸೂರು, ಗದಗ, ಉತ್ತರ ಕನ್ನಡದ ಕಾರ್ಖಾನೆಗಳು ಪೂರ್ತಿ ಬಿಲ್ ಪಾವತಿಸಿವೆ.

ಎಫ್‌ಆರ್‌ಪಿಗಿಂತ ಕಡಿಮೆ ದರ: ರಾಜ್ಯದಲ್ಲಿ 5.40 ಲಕ್ಷ ಹೆಕ್ಟೇರ್‌ನಲ್ಲಿ ಕಬ್ಬು ಬೆಳೆಯಲಾಗಿದೆ. ಪ್ರತಿವರ್ಷ ಕೇಂದ್ರ ಬೆಲೆ ಆಯೋಗದ ಶಿಫಾರಸಿನ ಮೇರೆಗೆ, ಕೇಂದ್ರ ಆಹಾರ ಸಚಿವಾಲಯವೇ ಸಕ್ಕರೆಗೆ ಎಫ್‌ಆರ್‌ಪಿ ನಿಗದಿಗೊಳಿಸುತ್ತದೆ. ಇದರ ಪ್ರಕಾರ, ರಾಜ್ಯದಲ್ಲಿ ಆಯಾ ಪ್ರದೇಶದಲ್ಲಿನ ಕಬ್ಬಿನ ಇಳುವರಿ ಆಧರಿಸಿ ಪ್ರತಿ ಟನ್ ಕಬ್ಬಿಗೆ ಕನಿಷ್ಠ 2,500ರಿಂದ 3,400 ರೂ. ನೀಡಬೇಕಿದೆ. ಆದರೆ, ಸಕ್ಕರೆ ಕಾರ್ಖಾನೆಗಳು 2,000ರಿಂದ 2,500 ರೂ. ನೀಡಿ ಕೈತೊಳೆದುಕೊಳ್ಳುತ್ತಿವೆ. ಇನ್ನೂ ಎ್ಆರ್‌ಪಿ ಆಧಾರದಲ್ಲಿ ಒಂದೇ ಕಂತಿನಲ್ಲೂ ಬಿಲ್ ನೀಡದೆ ರೈತರನ್ನು ಸತಾಯಿಸುತ್ತಿವೆ ಎಂಬ ಆರೋಪ ಕೇಳಿಬರುತ್ತಿದೆ.

ಕಳೆದ ವರ್ಷದ್ದೂ ಬಾಕಿ: ರಾಜ್ಯದಲ್ಲಿನ 64 ಸಕ್ಕರೆ ಕಾರ್ಖಾನೆಗಳು 2019-20ನೇ ಸಾಲಿನಲ್ಲಿ ನುರಿಸಿದ ಕಬ್ಬಿನ 2ನೇ ಕಂತಿನ ಬಾಕಿ ಹಣವನ್ನೂ ಇನ್ನೂ ಪಾವತಿಸಿಲ್ಲ. ಕೆಲ ಸಕ್ಕರೆ ಕಾರ್ಖಾನೆಗಳು ‘ಮೊದಲ ಕಂತಿನಲ್ಲಿ ಪಾವತಿಸಿದ್ದ ಬಿಲ್ ಅಂತಿಮ’ ಎಂದು ಹೇಳಿವೆ. ಕೆಲ ಕಾರ್ಖಾನೆಗಳು ‘ಶೀಘ್ರ ಎರಡನೇ ಕಂತಿನ ಬಿಲ್ ನೀಡುತ್ತೇವೆ’ ಎನ್ನುತ್ತ ದಿನದೂಡುತ್ತಿವೆ ಎಂದು ರೈತರು ದೂರಿದ್ದಾರೆ.

ಕಬ್ಬಿನ ಬಿಲ್ ಬಾಕಿ ಉಳಿಸಿಕೊಂಡಿರುವ ಸಕ್ಕರೆ ಕಾರ್ಖಾನೆಗಳ ಆಡಳಿತ ಮಂಡಳಿಯೊಂದಿಗೆ ಜಿಲ್ಲಾಧಿಕಾರಿ 4 ಸುತ್ತಿನ ಸಭೆ ನಡೆಸಿದ್ದಾರೆ. ತ್ವರಿತವಾಗಿ ಬಿಲ್ ಪಾವತಿಸುವಂತೆ ಸೂಚಿಸಿದ್ದಾರೆ. ಈ ಬಗ್ಗೆ ಮತ್ತೊಮ್ಮೆ ಎಲ್ಲರಿಗೂ ಸೂಚನೆ ನೀಡಲಾಗುವುದು.| ಚನ್ನಬಸಪ್ಪ ಕೊಡ್ಲಿ. ಜಂಟಿ ನಿರ್ದೇಶಕ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಬೆಳಗಾವಿ

ಬಹುತೇಕ ಸಕ್ಕರೆ ಕಾರ್ಖಾನೆಗಳು ರೈತರಿಗೆ ಎ್ಆರ್‌ಪಿ ಆಧಾರದಲ್ಲಿ ಕಬ್ಬಿನ ಬಿಲ್ ಪಾವತಿಸುತ್ತಿಲ್ಲ. ಮೊದಲನೇ ಕಂತಿನಲ್ಲಿ ಪ್ರತಿ ಟನ್‌ಗೆ 2,000-2,500 ರೂ. ನೀಡಿದ್ದಾರೆ. ಆದರೆ, 2ನೇ ಕಂತಿನ ಹಣ ನೀಡದೆ ವಂಚಿಸುತ್ತಿದ್ದಾರೆ.| ರವಿ ಸಿದ್ದಮ್ಮನವರ. ಜಿಲ್ಲಾಧ್ಯಕ್ಷ, ರೈತ ಸಂಘ ಮತ್ತು ಹಸಿರು ಸೇನೆ, ಬೆಳಗಾವಿ

| ಮಂಜು ಕೋಳಿಗುಡ್ಡ/ ಇಮಾಮಹುಸೇನ್ ಗೂಡುನವರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net