ಸಂಕಷ್ಟದಲ್ಲಿರುವ ರಂಗಕಲಾವಿದರಿಗೆ ಬೇಕಿದೆ ಸರ್ಕಾರದ ನೆರವು

CTD NATAKA.....
Published on

ಚಿತ್ರದುರ್ಗ: ರಂಗಭೂಮಿ ಕಲಾವಿದರ ಬದುಕು ಕಷ್ಟದಲ್ಲಿದೆ, ಒಪ್ಪತ್ತಿನ ಊಟ, ಚಪ್ಪಾಳೆ ಗಿಟ್ಟಿಸಲು ನಾಟಕಗಳನ್ನು ಪ್ರದರ್ಶಿಸುವಂತಾಗಿದೆ ಎಂದು ವಕೀಲರ ಸಂಘದ ಅಧ್ಯಕ್ಷ ವೈ.ತಿಪ್ಪೇಸ್ವಾಮಿ ವಿಷಾದಿಸಿದರು.

ಕರ್ನಾಟಕ ನಾಟಕ ಅಕಾಡೆಮಿ, ಚಿತ್ರದುರ್ಗ ಅಂತ್ಯೋದಯ ಕಲ್ಚರಲ್ ಫೌಂಡೇಶನ್ ಆಶ್ರಯದಲ್ಲಿ ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ನಗರದ ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಗುರುವಾರ ಏರ್ಪಡಿಸಿದ್ದ ಉಪನ್ಯಾಸ, ರಂಗ ಸನ್ಮಾನ, ರಂಗ ಗೀತೆಗಳ ಗಾಯನ ಕಾರ‌್ಯಕ್ರಮದಲ್ಲಿ ಮಾತನಾಡಿದರು.

ಸರ್ಕಾರ ಸಂಕಷ್ಟದಲ್ಲಿರುವ ರಂಗಭೂಮಿ ಕಲಾವಿದರ ಕಲ್ಯಾಣಕ್ಕೆ ಗಂಭೀರವಾಗಿ ಚಿಂತನೆ ನಡೆಸಿ, ಅವರ ನೆರವಿಗೆ ಧಾವಿಸಬೇಕಿದೆ. ಜಗತ್ತೇ ಒಂದು ನಾಟಕ ರಂಗ, ಇಲ್ಲಿ ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಪಾತ್ರಧಾರಿಗಳು. 2002 ರಲ್ಲಿ ಗಿರೀಶ್ ಕಾರ್ನಾಡ್‌ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ರಂಗಭೂಮಿ ಕುರಿತು ಸಂದೇಶ ನೀಡಲು ಅವಕಾಶ ಸಿಕ್ಕಿತು. ಮನೋರಂಜನೆ ಹಾಗೂ ಶಿಕ್ಷಣಕ್ಕೆ ರಂಗಭೂಮಿ ಬೇಕು. ನಾಟಕ ಬದುಕಿನ ಒಂದು ಭಾಗವಾಗಿದ್ದು, ರಂಗಭೂಮಿ ಕಲಾವಿದರನ್ನು ಪ್ರೋತ್ಸಾಹಿಸುವ ಜವಾಬ್ದಾರಿ ಸರ್ಕಾರ ಹಾಗೂ ಪ್ರೇಕ್ಷಕರ ಮೇಲಿದೆ. ಮಾಸಾಶನಕ್ಕಾಗಿ ಕಲಾವಿದರು ಅಲೆದಾಡುವುದು ತಪ್ಪಬೇಕು. ಪಠ್ಯಕ್ಕೆ ಸೀಮಿತವಾಗದೆ ಸಾಂಸ್ಕೃತಿಕ ಜಗತ್ತನ್ನು ವಿದ್ಯಾರ್ಥಿಗಳು ಅರಿಯಬೇಕೆಂದರು.

ಕಾರ‌್ಯಕ್ರಮ ಉದ್ಘಾಟಿಸಿದ ದುರ್ಗದ ಸಿರಿ ಕಲಾ ಸಂಘದ ಅಧ್ಯಕ್ಷ ಮಹಂತರೆಡ್ಡಿ, ಆಧುನಿಕ ಜಗತ್ತಿನಲ್ಲಿ ಭಾವನಾತ್ಮಕ ಸಂಬಂಧಗಳು ಕಡಿಮೆಯಾಗುತ್ತಿವೆ. ಪ್ರೇಕ್ಷಕರು ಮನಸ್ಸು ಮಾಡಿದರೆ ತಿಂಗಳಿಗೊಂದು ನಾಟಕ ಪ್ರದರ್ಶನ ಏರ್ಪಡಿಸಬಹುದು. ಆಗ ರಂಗಕಲಾವಿದರ ಬದುಕು ಸುಧಾರಣೆ ಆಗುತ್ತದೆ. ಜಿಲ್ಲೆಯ ಚಳ್ಳಕೆರೆ ಭಾಗದಲ್ಲಿ ನಾಟಕಗಳಿನ್ನೂ ಜೀವಂತವಾಗಿವೆ. ರಂಗಭೂಮಿ ನಟರು ಚಿತ್ರನಟರಿಗಿಂತ ಶ್ರೇಷ್ಠರೆಂದರು.

ಅಧ್ಯಕ್ಷತೆ ವಹಿಸಿದ್ದ ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದ ಕಾರ‌್ಯದರ್ಶಿ ಕೆ.ಎಂ.ವೀರೇಶ್ ಮಾತನಾಡಿ, ಬಿ. ಇಡಿ ವಿದ್ಯಾರ್ಥಿಗಳು ರಂಗಶಿಕ್ಷಣ ತರಬೇತಿ ಪಡೆದುಕೊಳ್ಳುವುದು ಒಳ್ಳೆಯದು. ಸಂಗೀತ, ಸಾಹಿತ್ಯ, ಕಲೆಗೆ ಎಲ್ಲರನ್ನು ತಲೆದೂಗಿಸುವ ಶಕ್ತಿಯಿದೆ ಎಂದರು.

ಬಾಪೂಜಿ ಶಿಕ್ಷಣ ಮಹಾವಿದ್ಯಾಲಯ ಪ್ರಾಚಾರ‌್ಯೆ ಪ್ರೊ.ಎಂ.ಆರ್.ಜಯಲಕ್ಷ್ಮೀ ಮಾತನಾಡಿದರು. ರಂಗ ಸಂಗೀತ ನಿರ್ದೇಶಕರಾದ ಶಿವಧರ್ಮ ಚಂದ್ರಣ್ಣ, ಡಿ.ಗಂಗಪ್ಪ, ಜಿ.ಪಿ.ಸುರೇಶ್, ರಂಗಭೂಮಿ ಕಲಾವಿದೆ ವಿ.ಲೇಖಪ್ರಿಯಾ ಅವರನ್ನು ಸನ್ಮಾನಿಸಲಾಯಿತು.

ನಿವೃತ್ತ ಡಿವೈಎಸ್ಪಿ ಅಬ್ದುಲ್ ರೆಹಮಾನ್, ಗಾಯಕ ಡಿ.ಒ.ಮುರಾರ್ಜಿ, ಉಪ ಪ್ರಾಚಾರ‌್ಯ ಎಚ್.ಎನ್.ಶಿವಕುಮಾರ್, ನಿವೃತ್ತ ಪ್ರಾಚಾರ‌್ಯ ಶಾಂತಯ್ಯ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net