ಸಂಕಷ್ಟದಲ್ಲಿದ್ದವರಿಗೆ ಸಾಂತ್ವನ ಹೇಳಿ, ಸಂಸದ ಬಚ್ಚೇಗೌಡ ಸಲಹೆ, ನೆಲಮಂಗಲದಲ್ಲಿ ಅಧಿಕಾರಿಗಳೊಂದಿಗೆ ಸಭೆ

25 Nela Ph 02 Vijayavani
Published on

ನೆಲಮಂಗಲ: ಕೋವಿಡ್ ಸಂಕಷ್ಟದಲ್ಲಿ ಟೀಕೆ ಮಾಡುವ ಬದಲು ಪಕ್ಷಾತೀತವಾಗಿ ಸಹಕಾರ ನೀಡಬೇಕು ಎಂದು ಸಂಸದ ಬಿ.ಎನ್.ಬಚ್ಚೇಗೌಡ ತಿಳಿಸಿದರು.

ತಾಪಂ ಸಭಾಂಗಣದಲ್ಲಿ ಮಂಗಳವಾರ ಬೆಳಗ್ಗೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

ರಾಜ್ಯಾದ್ಯಂತ 24 ಲಕ್ಷಕ್ಕೂ ಹೆಚ್ಚು ಪ್ರಕರಣ ಪತ್ತೆಯಾಗಿದ್ದು, 23 ಸಾವಿರಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಸೋಂಕಿನಿಂದ ಮೃತಪಟ್ಟಿರುವ ಕುಟುಂಬಕ್ಕೆ ಜನಪ್ರನಿಧಿಗಳು ಹಾಗೂ ಅಧಿಕಾರಿಗಳು ಸಾಂತ್ವನ ಹೇಳುವ ಕೆಲಸ ಮಾಡಬೇಕು. ನಿತ್ಯ ಹತ್ತಾರು ಮಂದಿ ಕರೆ ಮಾಡಿ ತಾಲೂಕಿನಲ್ಲಿ ಕೋವಿಡ್‌ನಿಂದ ಸಮಸ್ಯೆ ಎದುರಾಗಿದೆ ಎಂದು ದೂರಿದ ಹಿನ್ನೆಲೆಯಲ್ಲಿ ಭೇಟಿ ನೀಡಲಾಗಿದೆ ಎಂದರು.

ಕೋವಿಡ್ ಪರೀಕ್ಷೆ ಹೆಚ್ಚಿಸಬೇಕು. ರೋಗ ಲಕ್ಷಣ ಇರುವ ವ್ಯಕ್ತಿಗಳು ಭಯಪಡದೆ ಧೈರ್ಯದಿಂದ ಪರೀಕ್ಷೆ ಮಾಡಿಸಿಕೊಳ್ಳಬೇಕು. ನಿಮ್ಮೊಂದಿಗೆ ಸದಾ ಜಿಲ್ಲಾಡಳಿತ ಇರುತ್ತದೆ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ 9 ತಾಲೂಕುಗಳು, 2,700 ಗ್ರಾಮಗಳು, 29 ಲಕ್ಷಕ್ಕೂ ಹೆಚ್ಚು ಜನರಿದ್ದು, ಎಲ್ಲರ ಯೋಗಕ್ಷೇಮ ಕಾಪಾಡುವ ನಿಟ್ಟಿನಲ್ಲಿ ಪ್ರತಿಯೊಂದು ತಾಲೂಕಿಗೂ ಭೇಟಿ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಹೇಳಿದರು.

ಸರ್ಕಾರ ಪ್ರತಿಯೊಬ್ಬ ಶಾಸಕರನ್ನು ವಿಶ್ವಾಸಕ್ಕೆ ತಗೆದುಕೊಂಡು ಕರೊನಾ ಹೋಗಲಾಡಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಕೋವಿಡ್ ನಿಯಂತ್ರಣಕ್ಕೆ ಸಂಸದರ ನಿಧಿಯಿಂದ ಗ್ರಾಮಾಂತರ ಜಿಲ್ಲೆಗೆ 25 ಲಕ್ಷ ಹಣ ನೀಡಲಾಗಿದೆ. ಸರ್ಕಾರ ಸುಮಾರು 1, 250 ಕೋಟಿ ರೂ.ಪ್ಯಾಕೇಜ್ ಬಿಡುಗಡೆ ಮಾಡಿದ್ದು, ಫಲಾನುಭವಿಗಳಿಗೆ ತಲುಪುತ್ತಿದೆಯೇ ಎಂಬುದನ್ನು ಅಧಿಕಾರಿಗಳು ಪರಿಶೀಲಿಸಬೇಕು ಎಂದರು.

ಜಿಲ್ಲಾಸ್ಪತ್ರೆಗೆ ಬೇಡಿಕೆ: ತಾಲೂಕಿನಲ್ಲಿ ಹತ್ತಾರು ಕಾರ್ಖಾನೆಗಳು ಬಂದು, ಕೈಗಾರಿಕಾ ಪ್ರದೇಶ ಬೃಹತ್ ಗ್ರಾತವಾಗಿ ಬೆಳೆಯುತ್ತಿದ್ದು, ಸಾವಿರಾರು ಕಾರ್ಮಿಕರು ವಲಸೆ ಬಂದು ನೆಲೆಸಿದ್ದಾರೆ. ಆದ್ದರಿಂದ ನೆಲಮಂಗಲ ತಾಲೂಕಿಗೆ ಜಿಲ್ಲಾಸ್ಪತ್ರೆ ಅವಶ್ಯಕತೆ ಇದೆ. ಕೂಡಲೇ ಮುಖ್ಯಮಂತ್ರಿಗಳು ಹಾಗೂ ಆರೋಗ್ಯ ಸಚಿವರೊಂದಿಗೆ ಮಾತನಾಡಲಾಗುವುದು ಎಂದು ಸಂಸದರು ತಿಳಿಸಿದರು.

ಜಿಲ್ಲೆಯಲ್ಲಿ ಬ್ಲ್ಯಾಕ್ ಫಂಗಸ್ ಪತ್ತೆ: ಜಿಲ್ಲೆಯಲ್ಲಿ ನಿತ್ಯ ನೂರಾರು ಪ್ರಕರಣ ಪತ್ತೆಯಾಗುತ್ತಿರುವುದು ಒಂದೆಡೆಯಾದರೆ ರಾಜ್ಯಾದ್ಯಂತ ಕಪ್ಪು ಶಿಲೀಂಧ್ರ್ರ (ಬ್ಲ್ಯಾಕ್ ಫಂಗಸ್) ಸೋಂಕಿತರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ 4 ಹಾಗೂ ಹೊಸಕೋಟೆಯಲ್ಲಿ 1 ಪ್ರಕರಣ ಪತ್ತೆಯಾಗಿದ್ದು, ಬೆಂಗಳೂರಿನ ಬೋರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ತಿಳಿಸಿದರು.

ವಿಜಯವಾಣಿ ಕುರಿತು ಮೆಚ್ಚುಗೆ: ವಿಜಯವಾಣಿಯಲ್ಲಿ ಮೇ 25ರಂದು ‘ಮುಂಚೂಣಿ ಕಾರ್ಯಕರ್ತರಿಗೆ ಕೋವಿಡ್ ಲಸಿಕೆ ನೀಡಿ’  ಎಂದು ಪ್ರಕಟವಾಗಿರುವ ವರದಿಯನ್ನು ಓದಿದ ಸಂಸದ ಬಿ.ಎನ್.ಬಚ್ಚೇಗೌಡ ಮೆಚ್ಚುಗೆ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net